ಗುವಾಹಟಿ(ಪಿಟಿಐ): ಕಂಪ್ಯೂಟರ್ ಚಿಪ್ ತಯಾರಿಕಾ ಕಂಪೆನಿ ಇಂಟೆಲ್, ಸಾಂಪ್ರದಾಯಿಕ ಪರ್ಸನಲ್ ಕಂಪ್ಯೂಟರ್ (ಪಿಸಿ) ಮಾರುಕಟ್ಟೆಯಿಂದ ಹೊರಬಂದು, ಟ್ಯಾಬ್ಲೆಟ್ ಮತ್ತು ಇಂಟರ್ನೆಟ್ ಸೇವೆಗಳನ್ನು ಆಧರಿಸಿದ (ಐಒಟಿ) ಹೊಸ ಮಾರುಕಟ್ಟೆಗಳತ್ತ ಗಮನ ಹರಿ ಸುವುದಾಗಿ ಹೇಳಿದೆ.
ಇದರ ಭಾಗವಾಗಿ, ಭಾರತದಲ್ಲಿ ಪರ್ಸನಲ್ ಕಂಪ್ಯೂಟರ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಂತ್ರಜ್ಞರನ್ನು ಟ್ಯಾಬ್ಲೆಟ್ ಮತ್ತು ‘ಐಒಟಿ’ಗೆ ವಿಭಾಗಕ್ಕೆ ವರ್ಗಾಯಿಸುತ್ತಿರುವುದಾಗಿ ಇಂಟೆಲ್ ಇಂಡಿಯಾ ಹೇಳಿದೆ.
‘ಪಿಸಿ’ ಮಾರುಕಟ್ಟೆಯಿಂದ ಹೊರಬರಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಕಂಪೆನಿ ಜಾಗತಿಕ ಮಟ್ಟದಲ್ಲಿ ಐದು ಸಾವಿರ ಉದ್ಯೋಗ ಕಡಿತ ಮಾಡುವ ಸಾಧ್ಯತೆ ಇದೆ. ಇದೇ ವೇಳೆ, 2014ರಲ್ಲಿ ಭಾರತದಲ್ಲಿ ಹೊಸದಾಗಿ ಯಾವುದೇ ನೇಮಕ ಮಾಡಿಕೊಳ್ಳುವುದಿಲ್ಲ ಎಂದೂ ಕಂಪೆನಿ ಸ್ಪಷ್ಟಪಡಿಸಿದೆ.
ಸದ್ಯ ಭಾರತದಲ್ಲಿ ಇಂಟೆಲ್‌ನ ಆರು ಸಾವಿರ ಉದ್ಯೋಗಿಗಳಿದ್ದಾರೆ. ಇದರಲ್ಲಿ ಶೇ 70ರಷ್ಟು ಮಂದಿ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ರುವ ಕಂಪೆನಿಯ ‘ಆರ್‌ಅಂಡ್‌ಡಿ’ ಕೇಂದ್ರ ಬಲಪಡಿಸಲು 12 ಕೋಟಿ ಡಾಲರ್(ರೂ. 732 ಕೋಟಿ) ಹೂಡಿಕೆ ಮಾಡುವುದಾಗಿಯೂ ಕಂಪೆನಿ ಹೇಳಿದೆ.
‘ಯಾವ ಕ್ಷೇತ್ರದಲ್ಲಿ ಮಾರುಕಟ್ಟೆ ವಿಸ್ತ ರಿಸಲು ಅವಕಾಶ ಇದೆಯೋ, ಆ ಕ್ಷೇತ್ರಗಳತ್ತ ಮಾತ್ರ ಈಗ ಗಮನ ಹರಿಸುತ್ತಿದ್ದೇವೆ. ಅದರ ಭಾಗವಾಗಿ ಮಾನವ ಸಂಪನ್ಮೂಲ ವರ್ಗಾವಣೆ ನಡೆಯುತ್ತಿದೆ. ಪಿ.ಸಿ ಮಾರುಕಟ್ಟೆ ವರ್ಷದಿಂದ ವರ್ಷಕ್ಕೆ ಗಣನೀಯ ಕುಸಿತ ಕಾಣುತ್ತಿರುವ ಹಿನ್ನೆಲೆ ಯಲ್ಲಿ, ಹೊಸ ಮಾರುಕಟ್ಟೆ ಅವಕಾಶ ಗಳತ್ತ ಗಮನ ಹರಿಸುವುದು ಅನಿವಾರ್ಯವಾಗಿದೆ’ ಎಂದು ಇಂಟೆಲ್ ಇಂಡಿಯಾ ಅಧ್ಯಕ್ಷ ಕುಮುದ್ ಶ್ರೀನಿವಾಸನ್ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.
ಭಾರತದಲ್ಲಿ ಪಿ.ಸಿ ಮಾರುಕಟ್ಟೆಯ ಬೆಳವಣಿಗೆ ಕೇವಲ ಶೇ 10ರಷ್ಟಿದೆ. ಆದರೆ, ಟ್ಯಾಬ್ಲೆಟ್ ಮಾರುಕಟ್ಟೆ ದ್ವಿಗುಣ ವೇಗದಲ್ಲಿ ಏರಿಕೆ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.