ADVERTISEMENT

ಡೀಸಲ್, ಸೀಮೆ ಎಣ್ಣೆ, ಎಲ್‌ಪಿಜಿ ಬೆಲೆ ಏರಿಸಲು ಆರ್‌ಬಿಐ ಸಲಹೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 10:45 IST
Last Updated 17 ಏಪ್ರಿಲ್ 2012, 10:45 IST

ಮುಂಬೈ (ಪಿಟಿಐ): ಆರ್ಥಿಕ ಕುಸಿತವನ್ನು ತಡೆಯಲು ಪೆಟ್ರೋಲಿಯಂ ಉತ್ಪನ್ನಗಳಾದ ಡೀಸೆಲ್, ಸೀಮೆ ಎಣ್ಣೆ ಹಾಗೂ ಎಲ್‌ಪಿಜಿ ಬೆಲೆ ಏರಿಸುವುದು ಅನಿವಾರ್ಯ ಎಂದು ಆರ್‌ಬಿಐ ಸಲಹೆ ನೀಡಿದೆ.

ವಾರ್ಷಿಕ ಹಣಕಾಸು ನೀತಿ ವರದಿ ಸಲ್ಲಿಸಿರುವ ಆರ್‌ಬಿಐ ಗವರ್ನರ್ ಡಿ.ಸುಬ್ಬರಾವ್ ಅವರು `ಸಧ್ಯದ ಆರ್ಥಿಕ ಪರಿಸ್ಥಿಯನ್ನು ನಿಭಾಯಿಸಲು ಹಾಗೂ ವಿಶಾಲ ಅರ್ಥವ್ಯವಸ್ಥೆ ಸ್ಥಿರತೆಗೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಸುವುದು ಸೂಕ್ತ.
 
ಪೆಟ್ರೋಲಿಯಂ ಉತ್ಪನ್ನಗಳು ನೇರವಾಗಿ ಮಾರುಕಟ್ಟೆಯೊಂದಿಗೆ ಹೊಂದಿಕೊಂಡಿರುವುದರಿಂದ ಸರ್ಕಾರ ಅಡುಗೆ ಅನಿಲ, ಸೀಮೆ ಎಣ್ಣೆ ಹಾಗೂ ಡೀಸೆಲ್ ದರವನ್ನು ಸ್ಥಿರಗೊಳಿಸಿದರೆ ಅದರಿಂದ ಸಬ್ಸಿಡಿ ಹೊರೆ ಹೆಚ್ಚಾಗಲಿದೆ~ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿನ ರಾಜಕೀಯ ಬೆಳವಣಿಗೆ ಹಾಗೂ ಜಾಗತಿಕ ಆರ್ಥಿಕ ಪರಿಸ್ಥಿಗೆ ತಕ್ಕಂತೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ 2012ರ ಆರಂಭದಿಂದಲೇ ಏರಿಕೆಯ ಹಾದಿಯಲ್ಲಿದೆ. ಜನವರಿಯಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 111 ಅಮೆರಿಕನ್ ಡಾಲರ್‌ನಷ್ಟಿತ್ತು. ಆದರೆ, ಏಪ್ರಿಲ್ ಮಧ್ಯದಲ್ಲಿ ಇದರ ಬೆಲೆ 120 ಅಮೆರಿಕನ್ ಡಾಲರ್‌ಗೆ ಏರಿಕೆಯಾಗಿರುವುದು ಭಾರಿ ಅರ್ಥಿಕ ಹೊರೆಯಾಗಿ ಪರಿಣಮಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ADVERTISEMENT

ತೈಲ ಬೆಲೆ ಏರಿಕೆಯಿಂದಾಗಿ ಸಬ್ಸಿಡಿ ಮೊತ್ತವೂ ಹೆಚ್ಚಾಗಿರುವ ಕಾರಣ ಬಜೆಟ್ ಮೇಲಿನ ಹೊರೆ ಹೆಚ್ಚಾಗಿದೆ. ಏರುತ್ತಿರುವ ಸಬ್ಸಿಡಿ ಮೊತ್ತದಿಂದಾಗಿ ರಾಷ್ಟ್ರದ ಆರ್ಥಿಕ ಬೆಳವಣಿಗೆ ಕುಂಟಿತವಾಗಿದೆ. ಕಳೆದ ವರ್ಷ ಜಿಡಿಪಿ ದರ 5.9ರಷ್ಟಿತ್ತು. ಅದು 2012-13ನೇ ಸಾಲಿನಲ್ಲಿ 5.1ಕ್ಕೆ ಕುಸಿಯಲಿದೆ. ಭಾರತ ತನ್ನ ಅಗತ್ಯದ ಶೇ. 80ರಷ್ಟು ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಅಂದಾಜು ಮಾಡಲಾಗಿದೆ.

2012-13ರಲ್ಲಿ ಸರ್ಕಾರ ಇಂಧನ ಸಬ್ಸಿಡಿಗಾಗಿ 40 ಸಾವಿರ ಕೋಟಿ ರೂಪಾಯಿ ನಿಗಧಿಪಡಿಸಿದೆ. ಸರ್ಕಾರ ತಾನು ನೀಡುತ್ತಿರುವ ಸಬ್ಸಿಡಿ ಮೊತ್ತವನ್ನು ಶೇ. 2ಕ್ಕಿಂತ ಕಡಿಮೆ ಇಳಿಸಿದಲ್ಲಿ ಜಿಡಿಪಿ ದರ ಮುಂದಿನ ವರ್ಷಗಳಲ್ಲಿ ಶೇ. 1.75ರಷ್ಟು ವೃದ್ಧಿಯಾಗಬಹುದು ಎಂದು ಅಂದಾಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.