ADVERTISEMENT

ಡೀಸೆಲ್ ಬೆಲೆ ಏರಿಕೆ ಇಲ್ಲ: ಜೈಪಾಲ್‌ರೆಡ್ಡಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 19:30 IST
Last Updated 20 ಜನವರಿ 2011, 19:30 IST

ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಪ್ರತೀ ಲೀಟರ್ ಮಾರಾಟದಿಂದ ರೂ 7 ರಂತೆ ನಷ್ಟಕ್ಕೆ ಗುರಿಯಾಗುತ್ತಿದ್ದರೂ, ಸದ್ಯಕ್ಕೆ ಡೀಸೆಲ್ ಬೆಲೆ ಏರಿಕೆ ಸಾಧ್ಯತೆ ಇಲ್ಲ ಎಂದು ಹೊಸ ಪೆಟ್ರೋಲಿಯಂ ಸಚಿವ ಎಸ್. ಜೈಪಾಲ್‌ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಇಲ್ಲಿ ಹೊಸ ಹೊಣೆಗಾರಿಕೆ ವಹಿಸಿಕೊಂಡ ನಂತರ ಸುದ್ದಿಗಾರರ ಜತೆ ಮಾತನಾಡುತ್ತಿದ್ದ ಅವರು, ಡೀಸೆಲ್ ಬೆಲೆ ಏರಿಕೆಯನ್ನೂ ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ದೀರ್ಘಾವಧಿ ಪರಿಣಾಮ ಬೀರುವ ನಿರ್ಧಾರವನ್ನು ಯಾರೊಬ್ಬರೂ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು.

ಜೂನ್ 2010ರಿಂದ  ನಿಯಂತ್ರಣ ಮುಕ್ತ ವ್ಯವಸ್ಥೆ ಜಾರಿಗೆ ಬಂದ ನಂತರ  7 ಬಾರಿ ಹೆಚ್ಚಿಸಿರುವ ಪೆಟ್ರೋಲ್ ಬೆಲೆಯನ್ನು ರದ್ದುಗೊಳಿಸುವ ಸಾಧ್ಯತೆಗಳೂ ಇಲ್ಲ ಎನ್ನುವ ಇಂಗಿತ ವ್ಯಕ್ತಪಡಿಸಿದರು.ಸಬ್ಸಿಡಿ ದರಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಿಂದ ಸರ್ಕಾರಿ ಒಡೆತನದ ಮೂರು ತೈಲ ಮಾರಾಟ ಸಂಸ್ಥೆಗಳು ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ 72,000 ಕೋಟಿಗಳಷ್ಟು ನಷ್ಟಕ್ಕೆ ಗುರಿಯಾಗಲಿವೆ.

ಈ  ಕಾರಣಕ್ಕೆ ಕಚ್ಚಾ ತೈಲ ಆಮದು ಮೇಲಿನ ಕಸ್ಟಮ್ಸ್ ಸುಂಕ ಮತ್ತು ಡೀಸೆಲ್ ಮೇಲೆ ವಿಧಿಸುತ್ತಿರುವ ಅಬಕಾರಿ ಸುಂಕ ಕಡಿಮೆ ಮಾಡಲು ತಾವು ಒತ್ತಾಯಿಸುವುದಾಗಿ ರೆಡ್ಡಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.