ADVERTISEMENT

ತೆರಿಗೆ: ಪ್ರತ್ಯೇಕ ಘಟಕ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 19:30 IST
Last Updated 27 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ತೆರಿಗೆ ವಂಚಕರನ್ನು ಪತ್ತೆ ಹಚ್ಚಲು ಆದಾಯ ತೆರಿಗೆ ಇಲಾಖೆ ಪ್ರತ್ಯೇಕ `ನಿಗಾ ಘಟಕ~ವೊಂದನ್ನು ಆರಂಭಿಸಿದೆ.

ಆದಾಯ ತೆರಿಗೆ ಇಲಾಖೆ ಮೂಲಗಳ ಪ್ರಕಾರ ಅಂದಾಜು ್ಙ1 ಲಕ್ಷ ಕೋಟಿಗಳಷ್ಟು ಮೊತ್ತದ ತೆರಿಗೆ ಹಣ ಸರ್ಕಾರಕ್ಕೆ ಬರಬೇಕಿದೆ. ಆದರೆ, ಅನೇಕರು ತೆರಿಗೆ ಪಾವತಿಸದೆ ತಪ್ಪಿಸಿಕೊಂಡಿದ್ದಾರೆ. ಇಂತಹ ವ್ಯಕ್ತಿಗಳ ವಿವರವನ್ನು `ವಿಶೇಷ ನಿಗಾ ಘಟಕ~ ಕಲೆ ಹಾಕಿ, ಬಾಕಿ ಉಳಿಸಿಕೊಂಡಿರುವ ತೆರಿಗೆ  ವಸೂಲಿ ಮಾಡಲಿದೆ.  ತೆರಿಗೆ ವಂಚಕರ ಕುರಿತು, ಸಾರ್ವಜನಿಕರು, ಅಧಿಕಾರಿಗಳು, ಏಜೆನ್ಸಿಗಳು, ಕಂಪೆನಿ ರಿಜಿಸ್ಟ್ರಾರ್, ಪೊಲೀಸ್ ಠಾಣೆ ಮತ್ತಿತರ ಮೂಲಗಳ ಮೂಲಕ ಮಾಹಿತಿ ಕಲೆ ಹಾಕಲಾಗುವುದು. ತೆರಿಗೆ ಪಾವತಿಸದ ವ್ಯಕ್ತಿಗಳ ಕುರಿತು ಶೀಘ್ರದಲ್ಲೇ ವರದಿ ನೀಡುವಂತೆ ದೇಶದಾದ್ಯಂತ ವಿವಿಧ ಇಲಾಖೆಗಳ ಆಯುಕ್ತರಿಗೆ ಸೂಚಿಸಲಾಗಿದೆ.

ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಕಳೆದ ಜೂನ್ ತಿಂಗಳಲ್ಲಿ ತೆರಿಗೆ ವಂಚನೆ ಮತ್ತು ನೆನೆಗುದಿಗೆ ಬಿದ್ದಿರುವ ಪ್ರಕರಣಗಳ ಕುರಿತು ಅಧ್ಯಯನ ನಡೆಸಲು ಮಹಾನಿರ್ದೇಶಕರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿ ನೀಡಿರುವ ಶಿಫಾರಸಿನ ಅನ್ವಯ `ಪ್ರತ್ಯೇಕ ನಿಗಾ ಘಟಕ~ ಅಸ್ತಿತ್ವಕ್ಕೆ ಬಂದಿದೆ. 10 ಕೋಟಿಗಿಂತಲೂ ಹೆಚ್ಚಿನ ಮೊತ್ತದ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿರುವ ವ್ಯಕ್ತಿಗಳ ಹೆಸರನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಮತ್ತು ಅವರಿಗೆ ಶೋಕಾಸ್ ನೊಟೀಸ್ ಜಾರಿಗೊಳಿಸಲೂ ಇಲಾಖೆ ಇತ್ತೀಚೆಗೆ ನಿರ್ಧಾರ ಕೈಗೊಂಡಿದೆ. ಪ್ರತ್ಯೇಕ  ತೆರಿಗೆ ನಿಗಾ ಘಟಕವು ನೆನೆಗುದಿಗೆ ಬಿದ್ದಿರುವ ಪ್ರಕರಣಗಳನ್ನೂ ಪರಿಶೀಲಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.