ADVERTISEMENT

ತೆರಿಗೆ ಮುಕ್ತ ಗ್ರ್ಯಾಚುಟಿ ಮಿತಿ ಹೆಚ್ಚಳ ಮಸೂದೆ ಶೀಘ್ರ

ಪಿಟಿಐ
Published 9 ಜುಲೈ 2017, 19:30 IST
Last Updated 9 ಜುಲೈ 2017, 19:30 IST
ಬಂಡಾರು
ಬಂಡಾರು   

ನವದೆಹಲಿ: ತೆರಿಗೆ ಮುಕ್ತ ಗ್ರ್ಯಾಚುಟಿ ಮಿತಿಯನ್ನು ₹ 20 ಲಕ್ಷಕ್ಕೆ ಹೆಚ್ಚಿಸುವುದಕ್ಕೆ ಸಂಬಂಧಿಸಿದ ಮಸೂದೆಯನ್ನು ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮಂಡಿಸಲಾಗುತ್ತಿದೆ.

‘ಇದೇ 17ರಿಂದ ಆರಂಭಗೊಳ್ಳಲಿರುವ ಅಧಿವೇಶನದಲ್ಲಿ ಈ ಮಸೂದೆ ಮಂಡಿಸಿ ಅಂಗೀಕಾರ ಪಡೆಯಲು ಯತ್ನಿಸಲಾಗುವುದು’ ಎಂದು  ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹೇಳಿದ್ದಾರೆ.

‘ಕರಡು ಮಸೂದೆಯನ್ನು ಕೇಂದ್ರ ಸಚಿವ ಸಂಪುಟವು ಇನ್ನೂ ಅನುಮೋದಿಸಬೇಕಾಗಿದೆ. ಶೀಘ್ರದಲ್ಲಿಯೇ ಮಸೂದೆಯನ್ನು ಸಂಪುಟದ ಮುಂದೆ ಮಂಡಿಸಲಾಗುವುದು.

ADVERTISEMENT

‘ಗ್ರ್ಯಾಚುಟಿ ಪಾವತಿ ತಿದ್ದುಪಡಿ ಮಸೂದೆಗೆ ಸಂಸತ್ತಿನ ಅನುಮೋದನೆ ದೊರೆತ ನಂತರ, ಕಾರ್ಮಿಕರು ₹ 20 ಲಕ್ಷದವರೆಗಿನ ಗ್ರ್ಯಾಚುಟಿಗೆ  ತೆರಿಗೆ ಪಾವತಿಸುವ ಅಗತ್ಯ ಇರಲಾರದು.

ಫೆಬ್ರುವರಿ ತಿಂಗಳಲ್ಲಿ ನಡೆದಿದ್ದ ತ್ರಿಪಕ್ಷೀಯ ಸಭೆಯಲ್ಲಿ ಈ ಪ್ರಸ್ತಾವನೆಗೆ ಕಾರ್ಮಿಕ ಸಂಘಟನೆಗಳು ಸಮ್ಮತಿ ನೀಡಿದ್ದವು.

ಗ್ರ್ಯಾಚುಟಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಉದ್ಯೋಗಿಗಳ ₹20 ಲಕ್ಷದವರೆಗಿನ ಗ್ರ್ಯಾಚುಟಿ ಮೊತ್ತವನ್ನು ತೆರಿಗೆ ಮುಕ್ತಗೊಳಿಸಲು ಕಾರ್ಮಿಕ ಸಚಿವಾಲಯ ಪ್ರಸ್ತಾವನೆ ಸಲ್ಲಿಸಿತ್ತು. ಇಲ್ಲಿಯವರೆಗೆ ಆ ಮೊತ್ತ ₹ 10 ಲಕ್ಷದ ಮಿತಿ ಹೊಂದಿತ್ತು.

ಗ್ರ್ಯಾಚುಟಿ ಸೌಲಭ್ಯ ಪಡೆಯಲು ಉದ್ಯೋಗಿಗಳು ಕಡ್ಡಾಯವಾಗಿ ಐದು ವರ್ಷಳವರೆಗೆ ಸೇವೆ ಸಲ್ಲಿಸಿರಬೇಕು ಮತ್ತು ಉದ್ಯೋಗದಾತ ಸಂಸ್ಥೆಯಲ್ಲಿ ಕನಿಷ್ಠ 10 ನೌಕರರು ಇರಬೇಕು ಎಂಬ ಷರತ್ತು ಕೈಬಿಡುವಂತೆಯೂ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟ (ಎಐಟಿಯುಸಿ) ಒತ್ತಾಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.