ADVERTISEMENT

ತೆಲಗಿ ಕೆಂಪು ಈರುಳ್ಳಿಗೆ ರೋಗ

ವಿಜಾಪುರ ಜಿಲ್ಲೆಯ ರೈತರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2013, 19:59 IST
Last Updated 22 ಸೆಪ್ಟೆಂಬರ್ 2013, 19:59 IST
ವಿಜಾಪುರ ಜಿಲ್ಲೆಯ ತೆಲಗಿ ಗ್ರಾಮದಲ್ಲಿ ರೋಗಕ್ಕೆ ತುತ್ತಾಗಿರುವ ಈರುಳ್ಳಿ ಬೆಳೆಯನ್ನು ರೈತ ಹಣಮಂತ ದಡ್ಡಿಬಾಗಿಲು ತೋರಿಸಿದರು  	– ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಾಪುರ ಜಿಲ್ಲೆಯ ತೆಲಗಿ ಗ್ರಾಮದಲ್ಲಿ ರೋಗಕ್ಕೆ ತುತ್ತಾಗಿರುವ ಈರುಳ್ಳಿ ಬೆಳೆಯನ್ನು ರೈತ ಹಣಮಂತ ದಡ್ಡಿಬಾಗಿಲು ತೋರಿಸಿದರು – ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಾಪುರ: ಸತತ ಬರ ಮತ್ತು ಈಗ ಸುರಿದ ಹೆಚ್ಚಿನ ಮಳೆಯಿಂದ ಈರುಳ್ಳಿ ಬೆಳೆಗೆ ಹಾನಿಯಾಗಿದ್ದು, ದೇಶದೆಲ್ಲೆಡೆ ಖ್ಯಾತಿ ಗಳಿಸಿರುವ ಜಿಲ್ಲೆಯ ‘ತೆಲಗಿ ಕೆಂಪು ಈರುಳ್ಳಿ’ ಇಳುವರಿ ಈ ವರ್ಷ ಗಣನೀಯವಾಗಿ ಕುಸಿಯುವ ಆತಂಕ ಎದುರಾಗಿದೆ.

ಈರುಳ್ಳಿ ಉತ್ಪಾದನೆಗೆ ಬಸವನ ಬಾಗೇವಾಡಿ ತಾಲ್ಲೂಕಿನ ತೆಲಗಿ ಪ್ರದೇಶ ಹೆಸರು­ವಾಸಿ. ಬೆಳೆಗೆ ರೋಗಬಾಧೆ ಕಾಣಿಸಿ­ಕೊಂಡಿದೆ. ಮಳೆಯ ಅಭಾವ­ದಿಂದ ಬೆಳವಣಿಗೆ ಕುಂಠಿತವಾಗಿತ್ತು. ಈಗ ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ಹಳದಿ ಬಣ್ಣಕ್ಕೆ ತಿರುಗಿ ತೊಂದರೆ ಇನ್ನೂ ಹೆಚ್ಚಾಗಿದೆ. ಗಡ್ಡೆ ಕಟ್ಟುವ ಹಂತದಲ್ಲಿ ಬಾಣಂತಿ ರೋಗ ತಗುಲಿರುವುದರಿಂದ ಈರುಳ್ಳಿ ಗಾತ್ರ ದೊಡ್ಡದಾಗುವುದಿಲ್ಲ. ಮಳೆ ಮುಂದುವರೆದರೆ ಬೆಳೆ ಕೊಳೆ­ಯಲಿದೆ ಎಂದು ಬಸವನ ಬಾಗೇವಾಡಿ ತಾಲ್ಲೂಕು ತೆಲಗಿ ಗ್ರಾಮದ ರೈತ ಮೇಲಗಿರಿಯಪ್ಪಗೌಡ ರಾ.ಬಿರಾದಾರ ಆತಂಕ ವ್ಯಕ್ತಪಡಿಸಿದರು.

‘ಒಂದು ಎಕರೆಗೆ ₨ 25,000 ಖರ್ಚು ಮಾಡಿದ್ದೇವೆ. ದರ ಚೆನ್ನಾಗಿದ್ದು, ಹುಲುಸಾಗಿ ಬೆಳೆಯಲಿ ಎಂಬ ಕಾರಣಕ್ಕೆ ದುಬಾರಿ ಬೆಲೆಯ ಕ್ರಿಮಿನಾಶಕ–ಔಷಧಿ, ಗೊಬ್ಬರ ಹಾಕಿದ್ದೇವೆ. ತಕ್ಷಣ ಮಳೆ ನಿಂತು ವಾತಾವರಣ ಸುಧಾರಿಸಿದರೂ ಅರ್ಧದಷ್ಟು ಇಳುವರಿ ಬರುವ ಸಾಧ್ಯತೆಯೂ ಇಲ್ಲ’ ಎಂದು ಅದೇ ಗ್ರಾಮದ ರೈತ ಹಣಮಂತ ದಿಡ್ಡಿಬಾಗಿಲು ಹೇಳಿದರು.

‘ನಮ್ಮ ಭಾಗದ ಈರುಳ್ಳಿ ತೆಲಗಿ ತಳಿ ಎಂದೇ ಪ್ರಸಿದ್ಧಿ. ಬೆಂಗಳೂರು ಮಾರುಕಟ್ಟೆಯಲ್ಲಿ ಬಲು ಬೇಡಿಕೆ. ಒಂದು ಎಕರೆಗೆ ಕಡಿಮೆ ಎಂದರೂ ಒಂದು ಲೋಡ್‌ (11ರಿಂದ 12 ಮೆ.ಟನ್‌) ಫಸಲು ಬರುತ್ತದೆ. ಈ ಬಾರಿ  ಹಾಕಿದ ಹಣವೂ ಸಿಗುವ ನಂಬಿಕೆ ಇಲ್ಲ’ ಎಂದು ಬಸಪ್ಪ ದಿಡ್ಡಿಬಾಗಿಲು ವಿಷಾದಿಸಿದರು.

‘ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 12,364 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಬೇಕಿತ್ತು. ಆ ಪೈಕಿ 9,240 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಪ್ರತಿ ಹೆಕ್ಟೇರ್‌ಗೆ 20 ಮೆ.ಟನ್‌ನಂತೆ 2.85 ಲಕ್ಷ ಮೆ. ಟನ್‌ ಈರುಳ್ಳಿ ಉತ್ಪಾದನೆಯಾಗಬೇಕು ಎಂಬುದು ನಮ್ಮ ನಿರೀಕ್ಷೆ’ ಎಂಬುದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ವಿವರಣೆ.

ಕೊಳೆಯುವ ಆತಂಕ
‘ಮಳೆಯ ಕೊರತೆಯಿಂದ ತಡವಾಗಿ ಬಿತ್ತನೆ ಆಗಿದೆ. ಇತ್ತೀಚಿನ ಮಳೆಯಿಂದ ಬೆಳೆಯಲ್ಲಿ ನೀರು ನಿಂತಿದ್ದು, ಈರುಳ್ಳಿ ಕೊಳೆಯುವ ಆತಂಕ ಎದುರಾಗಿದೆ. ತೇವಾಂಶ ಹೆಚ್ಚಿದ್ದರಿಂದ ಕೆಲವೆಡೆ ಮಜ್ಜಿಗೆ ರೋಗವೂ ಕಾಣಿಸಿಕೊಂಡಿದೆ’ ಎಂದರು.

‘ನಮ್ಮಲ್ಲಿ ಪ್ರತಿ ಬುಧವಾರ ಮತ್ತು ಭಾನುವಾರ ಈರುಳ್ಳಿ ಹರಾಜು ನಡೆಯುತ್ತಿದ್ದು, ಈ ವಾರ ಕೇವಲ 322 ಕ್ವಿಂಟಲ್‌ ಆವಕವಾಗಿತ್ತು. ದರ ₨1500ರಿಂದ ₨4000 ವರೆಗೆ ಇತ್ತು’ ಎಂದು ಸ್ಥಳೀಯ ಎಪಿಎಂಸಿ ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.