ADVERTISEMENT

ತೊಗರಿಗೆ ಬಂತು ಆನ್‌ಲೈನ್ ಬೆಲೆ

ಸಿದ್ದಯ್ಯ ಸ್ವಾಮಿ ಕುಕುನೂರು
Published 1 ಫೆಬ್ರುವರಿ 2011, 18:30 IST
Last Updated 1 ಫೆಬ್ರುವರಿ 2011, 18:30 IST

ಇನ್ನು ಮುಂದೆ ರೈತರಿಗೆ ಮಾರುಕಟ್ಟೆಯಲ್ಲಿ ಆಗುವ ಬೆಲೆ ತಾರತಮ್ಯ ನೀತಿಯಿಂದ ಮುಕ್ತಿ ಸಿಗಲಿದೆ. ತೊಗರಿ ಕಣಜ ಎಂದೇ ಕರೆಯುವ ಗುಲ್ಬರ್ಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೊಗರಿ ‘ಇ-ಹರಾಜು’ ಪ್ರಕ್ರಿಯೆ ಮೊಟ್ಟಮೊದಲ ಬಾರಿಗೆ ಆರಂಭವಾಗಿದೆ.

ಗುಲ್ಬರ್ಗದ ಜಿಲ್ಲಾ ಪಂಚಾಯಿತಿ ನೂತನ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರ, ಕೃಷಿ ಮಾರಾಟ ಇಲಾಖೆ, ಎನ್‌ಸಿಡಿಇಎಕ್ಸ್ ಸ್ಪಾಟ್ ಎಕ್ಸ್‌ಚೇಂಜ್ ಸಂಸ್ಥೆ ಹಾಗೂ ಗುಲ್ಬರ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಹಯೋಗದಲ್ಲಿ  ಈಚೆಗೆ ಹೊಸ ವ್ಯಾಪಾರ ತಂತ್ರಕ್ಕೆ ಚಾಲನೆ ನೀಡಲಾಯಿತು. ಬೆಲೆ ನೀತಿಯಿಂದ ಕಂಗಾಲಾಗುತ್ತಿದ್ದ ರೈತನಿಗೆ ಇದೊಂದು ವರದಾನವೇ ಸರಿ. ತನ್ನ ಬೆಳೆಯನ್ನು ದೇಶದ ಯಾವುದೇ ಮಾರುಕಟ್ಟೆಯಲ್ಲಿ ತನಗೆ ಗಿಟ್ಟುವ ಬೆಲೆಯಲ್ಲಿ ಮಾರುವ ಸ್ವಾತಂತ್ರ್ಯ ದಕ್ಕಲಿದೆ.

ಏನಿದು ಇ-ಹರಾಜು ?
ರೈತರು ತಮ್ಮ ಬೆಳೆಗೆ ಸೂಕ್ತ ಬೆಲೆ ಇಲ್ಲದೇ ದಲ್ಲಾಳಿಗಳು ನಿಗದಿಪಡಿಸಿದ ಬೆಲೆಗೆ ಮಾರುವ ತಾಪತ್ರಯ  ತಪ್ಪಿಸಬಹುದು. ದೇಶದ ಯಾವುದೇ ಮಾರುಕಟ್ಟೆಯಿಂದಲೂ ನಾವು ತೊಗರಿ  ಮಾರುವ, ಕೊಳ್ಳುವ ವ್ಯವಸ್ಥೆಯನ್ನೇ ‘ಇ-ಹರಾಜು’ ಪ್ರಕ್ರಿಯೆ ಎಂದು ಕರೆಯುತ್ತೇವೆ. ದೇಶದ ಎಲ್ಲ ಮಾರುಕಟ್ಟೆಯ ವ್ಯಾಪಾರಿಗಳು, ವರ್ತಕರು ಹಾಗೂ ರೈತರು ಇದರ ಉಪಯೋಗ ಪಡೆದುಕೊಳ್ಳಬಹುದು. ನಮ್ಮ ಬೆಳೆಗೆ ‘ಇ-ಹರಾಜು’ ಪ್ರಕ್ರಿಯೆಯನ್ವಯ ಸೂಕ್ತ ಬೆಲೆ ಇರುವ ಕೇಂದ್ರಗಳಿಗೆ ಮಾರಾಟ ಮಾಡಬಹುದು. ಎನ್‌ಡಿಇಎಕ್ಸ್ ಸ್ಪಾಟ್ ಎಕ್ಸ್‌ಚೇಂಜ್ ಸಂಸ್ಥೆ ಇದಕ್ಕೆ ಸಂಪೂರ್ಣ ಸಹಕರಿಸುತ್ತದೆ. ವಿವಿಧ ಮಾರುಕಟ್ಟೆಗಳನ್ನು ಸಮೀಕರಣ ಮಾಡುವ ಕೆಲಸ ಮಾಡುತ್ತದೆ. ಒಂದರ್ಥದಲ್ಲಿ ರೈತರಿಗೆ ಅನ್ಯಾಯವಾಗದಂತೆ ಬೆಲೆ ಸಮತೋಲನ ಕಾಯ್ದುಕೊಳ್ಳುವ ಮಹತ್ತರ ಉದ್ದೇಶ ಇದಾಗಿದೆ. ಹರಾಜು ಪ್ರಕ್ರಿಯೆಯನ್ನು ಸ್ಥಳೀಯ ಎಪಿಎಂಸಿ ಕೈಗೊಳ್ಳುತ್ತದೆ.

ಯಾರಿಗೆ ಉಪಯೋಗ ?
‘ಇ-ಪದ್ಧತಿ’ ಮುಖ್ಯವಾಗಿ ಗಡಿಮುಕ್ತ ಮಾರುಕಟ್ಟೆ ವಾತಾವರಣ ನಿರ್ಮಿಸುತ್ತದೆ. ರೈತರಿಗೆ ತೃಪ್ತಿಯೆನಿಸಿದರೆ ಆ ಬೆಲೆಗೆ ಮಾರಾಟ ಮಾಡಬಹುದು. ಅಲ್ಲದೇ ದಲ್ಲಾಳಿಗಳು, ವರ್ತಕರೂ ‘ಇ-ಹರಾಜು’ ಮೂಲಕ ಬೇರೆ ರಾಜ್ಯಗಳಿಂದ ವ್ಯಾಪಾರ ಮಾಡಲು ಅವಕಾಶವಿದೆ. ಜಿಲ್ಲೆ, ರಾಜ್ಯಗಳ ನಿಬಂಧನೆಗಳಿಲ್ಲದೇ ವಹಿವಾಟು ನಡೆಸಬಹುದು. ಹೆಚ್ಚಿನ ಲಾಭದ ದುರುದ್ದೇಶ ಅಲ್ಲದಿದ್ದರೂ, ರೈತನ ಹೂಡಿಕೆಯ ಬಂಡವಾಳ ಹಿಂಪಡೆಯುವಲ್ಲಿಯಾದರೂ ಇದು ಪ್ರಮುಖ ಪಾತ್ರ ವಹಿಸಲಿದೆ. 

ವ್ಯಾಪಾರದ ನಿಬಂಧನೆಗಳು:
ಇದು ರೈತರ ಸ್ವ-ಇಚ್ಛೆಯಿಂದ ಮಾಡಬಹುದಾದ ವ್ಯಾಪಾರ. ಆದರೂ ಧಾನ್ಯ ಮಾರಲು ಕೆಲವು ನಿಬಂಧನೆಗಳಿವೆ. ತೊಗರಿ ಪರಿಪಕ್ವವಾದ ನಂತರ ಕಸಕಡ್ಡಿ, ಕಲ್ಲು, ಮಣ್ಣು, ಜೊಳ್ಳು ಕಾಳುಗಳಿಂದ ಬೇರ್ಪಡಿಸಿ ಚೆನ್ನಾಗಿ ಒಣಗಿಸಬೇಕು. ತೊಗರಿ ಒಂದೇ ಗಾತ್ರ, ಬಣ್ಣ ಹಾಗೂ ರೂಪ ಹೊಂದಿರಬೇಕು, ಚೂರಾದ ಕಾಳುಗಳು, ತುಂಡಾದ ಧಾನ್ಯಗಳ ಮಿಶ್ರಣ ಪ್ರಮಾಣ 0.5 ಮೀರಬಾರದು, ಅನ್ಯ ಕಾಳು ಕಡಿಗಳ ಪ್ರಮಾಣ ಶೇ 1.5 ಕ್ಕಿಂತ ಹೆಚ್ಚಾಗಬಾರದು. ಮುಖ್ಯವಾಗಿ  ಹಾಳಾದ ಧಾನ್ಯಗಳ ಪ್ರಮಾಣ ಶೇ 2, ತೊಗರಿ ಕಾಳುಗಳ ತೇವಾಂಶ ಶೇ 12  ಮೀರಬಾರದು. ಒಟ್ಟಾರೆಯಾಗಿ ರೈತರು ತಮ್ಮ ಧಾನ್ಯ ಸಂರಕ್ಷಣೆಯಲ್ಲಿ ಹೆಚ್ಚು ಕಾಳಜಿ ವಹಿಸಿದಷ್ಟು ಹೆಚ್ಚಿನ ಬೆಲೆ ದಕ್ಕಲು ಸಾಧ್ಯ. 

 ಮಾರಾಟದ ವಿಧ ಹೇಗೆ
ಈಗಾಗಲೇ ಮಾರುಕಟ್ಟೆಯಲ್ಲಿ ಇ-ಟೆಂಡರ್ ಪದ್ಧತಿ ಜಾರಿಗೊಳಿಸಲಾಗಿತ್ತು. ಈಗ ‘ಇ-ಹರಾಜು’ ಪ್ರಕ್ರಿಯೆ ಆರಂಭಗೊಂಡಿದೆ. ಇಲ್ಲಿ ರೈತನ ನಿರ್ಧಾರವೇ ಅಂತಿಮ. ಮೊದಲಿಗೆ ಕಂಪ್ಯೂಟರ್‌ನಲ್ಲಿ ದರ ನಿಗದಿಗೊಳಿಸಬೇಕು. ಹರಾಜು ಆರಂಭವಾದ ನಂತರ ಎಲ್ಲ ವ್ಯಾಪಾರಿಗಳು ಕಂಪ್ಯೂಟರ್ ಮೂಲಕ ನೇರವಾಗಿ ವೀಕ್ಷಿಸಬಹುದು. ಪ್ರತಿಲಾಟ್‌ಗೆ ದೊರಕುವ ಹೆಚ್ಚು ದರವನ್ನು ‘ಇ-ಹರಾಜು’ ಮುಗಿದ ನಂತರ ಪ್ರಕಟಿಸಲಾಗುವುದು. ಮೊಬೈಲ್ ಮೂಲಕವೂ ನಾವು ದರವನ್ನು ತಿಳಿಯಬಹುದು. ವ್ಯಾಪಾರವಾದ ಮೂರನೇ ದಿನಕ್ಕೆ ಲೆಕ್ಕ ತೀರಿಕೆ ಪ್ರಕ್ರಿಯೇ ಇತ್ಯರ್ಥಗೊಳ್ಳುತ್ತದೆ. ತೊಗರಿ ದಾಸ್ತಾನು ಮಾಡಿ ರಶೀದಿ ಪಡೆದ ನಂತರ ನೋಂದಾಯಿತ ಸಂಸ್ಥೆಗೆ ಮಾರಾಟದ ಬೆಲೆ ತಿಳಿಸಿದರೆ ಸಾಕು. ಮುಂದಿನದು ಎಪಿಎಂಸಿ ಕೆಲಸ.

‘ಇ-ಹರಾಜು ರೈತಸ್ನೇಹಿ ವ್ಯವಸ್ಥೆ. ಇಲ್ಲಿ ಸ್ಪಾಟ್ ಎಕ್ಸ್‌ಚೆಂಜ್ ಸಂಸ್ಥೆಯದು ಕೇವಲ ಮಧ್ಯವರ್ತಿ ಕೆಲಸ. ನಿರ್ಭಯದಿಂದ ರೈತ ವ್ಯಾಪಾರ ಮಾಡಬಹುದು. ತನಗೆ ಬೇಕೆನಿಸಿದ ಬೆಲೆ ಹಾಗೂ ವರ್ತಕರಿಗೆ ವ್ಯಾಪಾರ ನಡೆಸಲು ಮುಕ್ತ ಅವಕಾಶವಿದೆ.

 ಇಂದು ಆವಕ -ಬೇಡಿಕೆ ಆಧಾರದ ಮೇಲೆ ವ್ಯಾಪಾರದ ಗುಣಮಟ್ಟ ನಿರ್ಧರಿಸಲಾಗುತ್ತದೆ. ವರ್ಷವಿಡಿ ಶ್ರಮ ವಹಿಸಿದ ರೈತನ ಫಲವನ್ನು ಇನ್ನಾರೋ ಉಣ್ಣುವ ಬದಲಿಗೆ, ರೈತನಿಗೆ ಸೂಕ್ತ ನ್ಯಾಯ ದಕ್ಕುವ ಯೋಜನೆ ಇದಾಗಿದೆ’ ಎನ್ನುತ್ತಾರೆ ಸಂಸ್ಥೆಯ ದಕ್ಷಿಣ ಭಾರತ ನಿರ್ವಾಹಕ ರಮೇಶಚಂದ್.  ಯಾವುದೇ ಬೆಳೆ ಬೆಳೆದರೂ ಒಂದಲ್ಲ ಒಂದು ಸಂಕಷ್ಟಕ್ಕೆ ಗುರಿಯಾಗುತ್ತಿದ್ದ ರೈತನಿಗೆ ಇ-ಹರಾಜು ಪ್ರಕ್ರಿಯೆ ಮುಳುಗುವವನಿಗೆ ಹುಲ್ಲು ಕಡ್ಡಿ ಆಸರೆಯಂತಾಗಿದೆ. ಆದರೆ ಅದೆಷ್ಟೋ ಬಾರಿ ಕಣ್ಣೆದುರಿಗೆ ದಲ್ಲಾಳಿಗಳು ಮಾಡುವ ಮೋಸವನ್ನು ಗುರುತಿಸದ ರೈತರು, ಆನ್‌ಲೈನ್ ವ್ಯಾಪಾರ ಮಾಡುವಷ್ಟು ಜಾಣತನ ತೋರಿದರೆ ಅದಕ್ಕಿಂತ ಸಂತಸ ಮತ್ತೊಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.