ADVERTISEMENT

ದೀರ್ಘಾವಧಿ ಹೂಡಿಕೆಗೆ ಮ್ಯೂಚುವಲ್‌ ಫಂಡ್‌

​ಕೇಶವ ಜಿ.ಝಿಂಗಾಡೆ
Published 27 ಫೆಬ್ರುವರಿ 2018, 19:30 IST
Last Updated 27 ಫೆಬ್ರುವರಿ 2018, 19:30 IST
ದೀರ್ಘಾವಧಿ ಹೂಡಿಕೆಗೆ ಮ್ಯೂಚುವಲ್‌ ಫಂಡ್‌
ದೀರ್ಘಾವಧಿ ಹೂಡಿಕೆಗೆ ಮ್ಯೂಚುವಲ್‌ ಫಂಡ್‌   

‘ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಇನ್‌ವೆಸ್ಟ್‌ಮೆಂಟ್ಸ್‌ (ಇಂಡಿಯಾ) ಸಂಸ್ಥೆಯು ದೇಶದಲ್ಲಿ 1995 ರಿಂದ ಸಂಪತ್ತು ನಿರ್ವಹಣೆಯ ಸೇವೆ ಒದಗಿಸುತ್ತಿದೆ. ಸಂಸ್ಥೆಯ ವಿವಿಧ ಬಗೆಯ ಹಣಕಾಸು ಉತ್ಪನ್ನಗಳು ಕಾಲದ ಪರೀಕ್ಷೆಯಲ್ಲಿ ಗೆದ್ದಿವೆ. ಈ ಅವಧಿಯಲ್ಲಿ ದೇಶದಲ್ಲಿ ನಡೆದ ಹಲವಾರು ಏರಿಳಿತಗಳ ಹೊರತಾಗಿಯೂ ಸಂಸ್ಥೆಯು ಹೂಡಿಕೆದಾರರ ವಿಶ್ವಾಸ ಕಾಯ್ದುಕೊಂಡು ಬಂದಿದೆ. ಮಾರುಕಟ್ಟೆಯ ಎಲ್ಲ ಏರಿಳಿತಗಳನ್ನು ಎದುರಿಸಿ ಹೂಡಿಕೆದಾರರಿಗೆ ಲಾಭ ಒದಗಿಸುತ್ತ ಬರಲಾಗಿದೆ’ ಎಂದು ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಅಸೆಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯ ರಾಷ್ಟ್ರೀಯ ಮಾರಾಟ ನಿರ್ದೇಶಕ ಪೆಶೊತನ್‌ ದಸ್ತೂರ್‌ ಅವರು ವಿಶ್ವಾಸದಿಂದ ಹೇಳುತ್ತಾರೆ.

1996ರಲ್ಲಿ ಯುಟಿಐ ಮ್ಯೂಚುವಲ್‌ ಫಂಡ್‌ನ ವಿವಾದದ ನಂತರ ಈ ಸಂಪತ್ತು ನಿರ್ವಹಣೆ ವಹಿವಾಟಿನ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳು ಜಾರಿಗೆ ಬಂದವು. ಭಾರತೀಯ ಷೇರು ನಿಯಂತ್ರಣ ಮಂಡಳಿಯು (ಸೆಬಿ) ಕಠಿಣ ನಿಯಮಗಳನ್ನು ಜಾರಿಗೆ ತಂದ ಕಾರಣಕ್ಕೆ ಸಾಮಾನ್ಯ ಹೂಡಿಕೆದಾರರಲ್ಲಿ ಮ್ಯೂಚುವಲ್‌ ಫಂಡ್‌ ವಹಿವಾಟಿನಲ್ಲಿ ವಿಶ್ವಾಸ ಮೂಡತೊಡಗಿತು. ಇದರಿಂದ ಸಂಪತ್ತು ನಿರ್ವಹಣಾ ಸಂಸ್ಥೆಗಳು ತಮ್ಮ ವಹಿವಾಟಿನಲ್ಲಿ ಹೆಚ್ಚೆಚ್ಚು ಪಾರದರ್ಶಕತೆ ಅಳವಡಿಸಿಕೊಳ್ಳಲಾರಂಭಿಸಿದವು. ಇದರಿಂದ ಹೂಡಿಕೆದಾರರಿಗೆ ಲಾಭ ವಿತರಣೆಯಲ್ಲಿನ ಅಡಚಣೆಗಳೆಲ್ಲವೂ ದೂರವಾದವು.

ಮ್ಯೂಚುವಲ್‌ ಫಂಡ್‌ ವಹಿವಾಟಿಗೆ ಒಳಪಡುವ ಪ್ರದೇಶವನ್ನು ಟಾ‍ಪ್‌ ಫಿಪ್ಟೀನ್‌ (ಟಿ–15) ಮತ್ತು ಬಿಯಾಂಡ್‌ ಫಿಪ್ಟೀನ್‌ (ಬಿ–15) ಎಂದು ವರ್ಗೀಕರಿಸಲಾಗಿದೆ. ಒಂದು ವರ್ಷದಿಂದೀಚೆಗೆ ‘ಟಿ–15’ ಪ್ರದೇಶದಲ್ಲಿನ ವಹಿವಾಟು ಶೇ 26 ರಷ್ಟು ಮತ್ತು ‘ಬಿ–15’ ನಗರಗಳಲ್ಲಿನ ವಹಿವಾಟು ಶೇ 47ರಷ್ಟು ಏರಿಕೆ ಕಂಡಿದೆ. ಈ ವಹಿವಾಟು ಇತ್ತೀಚೆಗೆ ವ್ಯಾಪಕವಾಗಿ ಬೆಳವಣಿಗೆ ದಾಖಲಿಸುತ್ತಿರುವುದನ್ನು ಇದು ಸೂಚಿಸುತ್ತದೆ.

ADVERTISEMENT

ಪ್ರತಿ ತಿಂಗಳೂ ನಿರ್ದಿಷ್ಟ ಮೊತ್ತವನ್ನು (ವ್ಯವಸ್ಥಿತ ಹೂಡಿಕೆ ಯೋಜನೆ–ಸಿಪ್‌) ಮ್ಯೂಚುವಲ್‌ ಫಂಡ್‌ಗಳಲ್ಲಿ ತೊಡಗಿಸುವ ಪ್ರವೃತ್ತಿಯು ಸಾಮಾನ್ಯ ಹೂಡಿಕೆದಾರರಲ್ಲಿ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ. ದೀರ್ಘಾವಧಿಯಲ್ಲಿ ಲಾಭ ನಿರೀಕ್ಷಿಸುವವರಿಗೆ ಈ ‘ಸಿಪ್‌’ ಹೆಚ್ಚು ಆಕರ್ಷಕವಾಗಿ ಕಂಡಿದೆ. ವೇತನ ವರ್ಗದವರು, ಇತರ ವಹಿವಾಟುದಾರರು ಕನಿಷ್ಠ 6 ತಿಂಗಳಿನಿಂದ ತಮಗಿಷ್ಟದ ಮತ್ತು ಅನುಕೂಲಕರ ಸಮಯದವರೆಗೆ ‘ಸಿಪ್‌’ ಮೂಲಕ ಹೂಡಿಕೆ ಮಾಡಲು ಹೆಚ್ಚು ಒಲವು ತೋರುತ್ತಿದ್ದಾರೆ.

ಈ ಹೂಡಿಕೆ ಪ್ರಕ್ರಿಯೆಯನ್ನು ಯಾವುದೇ ಸಮಯದಲ್ಲಾದರೂ ಸ್ಥಗಿತಗೊಳಿಸಬಹುದು. ವರ್ಷಕ್ಕೊಮ್ಮೆ ಸಂಬಳ ಹೆಚ್ಚುತ್ತಿದ್ದಂತೆ ಅದರಲ್ಲಿನ ಕೆಲ ಭಾಗವನ್ನು ಸ್ವಯಂಚಾಲಿತವಾಗಿ ಹೂಡಿಕೆ ಹೆಚ್ಚಳದ ಆಯ್ಕೆ ಮಾಡಿಕೊಳ್ಳಬಹುದು. ನಿರಂತರವಾಗಿ ಮುಂದುವರೆಯುವ ಯೋಜನೆಗೆ ತಮ್ಮ ಸಮ್ಮತಿ ನೀಡಬಹುದು. ತುರ್ತು ಸಂದರ್ಭಗಳಲ್ಲಿ, ಹಣಕಾಸಿನ ಬಿಕ್ಕಟ್ಟಿನ ವೇಳೆಯಲ್ಲಿ ‘ಸಿಪ್‌’ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಆಯ್ಕೆಗಳೂ ಇವೆ ಎಂದು ಅವರು ವಿವರಿಸುತ್ತಾರೆ.

ವರ್ಷಕ್ಕೊಮ್ಮೆ ಸಂಬಳ ಹೆಚ್ಚುವುದರ ಜತೆಗೆ ಜೀವನ ಶೈಲಿಯ ಇತರ ವೆಚ್ಚಗಳೂ ಸಹಜವಾಗಿಯೇ ಹೆಚ್ಚಳಗೊಳ್ಳುತ್ತವೆ.  ತಮ್ಮ ತಿಂಗಳ ನಿರ್ದಿಷ್ಟ ಹೂಡಿಕೆಯನ್ನೂ ಸಂಬಳ ಏರಿಕೆ ಜತೆಗೆ ಹೆಚ್ಚಿಸಬಹುದು. ಈ ಹೆಚ್ಚಳವು ವೇತನ ಏರಿಕೆಯ ಶೇಕಡಾವಾರು ಲೆಕ್ಕದಲ್ಲಿ ಇಲ್ಲವೇ ನಿರ್ದಿಷ್ಟ ಮೊತ್ತದಲ್ಲಿ ಇರಬಹುದು. ಈ ಬಗೆಯಲ್ಲಿ ಹೂಡಿಕೆ ಮಿತಿಯನ್ನು ವರ್ಷಕ್ಕೊಮ್ಮೆ ಇಲ್ಲವೇ  ನಿರ್ದಿಷ್ಟ ಕಾಲ ಕಾಲಕ್ಕೆ ಹೆಚ್ಚಿಸುವ ‘ಸ್ಟೆಪ್‌ ಅಪ್‌ ಎಸ್‌ಐಪಿ’ಯು ಹೂಡಿಕೆ ವಹಿವಾಟಿನಲ್ಲಿ ಹೆಚ್ಚಿನ ಶಿಸ್ತು ತರಲಿದೆ. ಕೆಲವರು ಉದ್ಯೋಗ ಬದಲಿಸಿದಾಗ, ದೀರ್ಘ ರಜೆ ಹೋದಾಗ, ಆಕಸ್ಮಿಕವಾಗಿ ಕುಟುಂಬದ ಬಜೆಟ್‌ ಏರುಪೇರು ಆದಾಗ ‘ಸಿಪ್‌’ಗೆ ತಾತ್ಕಾಲಿಕ ತಡೆ ನೀಡಲು ಕೋರಿಕೆ ಸಲ್ಲಿಸಲೂ ಅವಕಾಶ ಇರುತ್ತದೆ.

‘ಮ್ಯೂಚುವಲ್‌ ಫಂಡ್‌ ಯೋಜನೆಗಳಲ್ಲಿನ ಹೂಡಿಕೆ ದೀರ್ಘಾವಧಿಯಲ್ಲಿ ಭಾರಿ ಲಾಭ ತಂದುಕೊಡುತ್ತದೆ. ಉದಾಹರಣೆಗೆ ಹೇಳುವುದಾದರೆ 20 ವರ್ಷಗಳ ಹಿಂದಿನಿಂದ ಪ್ರತಿ ತಿಂಗಳೂ ₹ 25 ಸಾವಿರ ಹೂಡಿಕೆ ಮಾಡುತ್ತ ಬಂದಿದ್ದರೆ ಒಟ್ಟು ಹೂಡಿಕೆಯು ₹ 60 ಲಕ್ಷಕ್ಕೆ ತಲುಪಿರುತ್ತದೆ. ಈ ಹೂಡಿಕೆ ಮೇಲಿನ ಪ್ರತಿಫಲ ಸೇರಿ ಹೂಡಿಕೆದಾರರಿಗೆ ಸಿಗುವ ಒಟ್ಟಾರೆ ಪ್ರತಿಫಲ ₹ 18 ಕೋಟಿಗಳಷ್ಟಾಗಿರುತ್ತದೆ. ಆರ್ಥಿಕತೆ, ರಾಜಕೀಯ ಮತ್ತು ಸಾಮಾಜಿಕವಾಗಿ ಏನೆಲ್ಲಾ ಏರಿಳಿತಗಳು ಆಗಿರಲಿ. ದೀರ್ಘಾವಧಿಯಲ್ಲಿ ಹೂಡಿಕೆದಾರರ ಸಂಪತ್ತು ಖಚಿತವಾಗಿ ಹೆಚ್ಚಳಗೊಂಡಿರುತ್ತದೆ. ಇದು ’ಎಸ್‌ಐಪಿ’ಯ ನಿಜವಾದ ಶಕ್ತಿಯಾಗಿದೆ. ಇದರಿಂದ ಹೂಡಿಕೆದಾರರು ಸಹಜವಾಗಿಯೇ ತಮ್ಮ ನಿರ್ಧಾರದ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸುತ್ತಾರೆ’ ಎಂದು ದಸ್ತೂರ್‌ ಹೇಳುತ್ತಾರೆ.

‘ಬ್ಯಾಂಕ್‌ಗಳಲ್ಲಿ ಸ್ಥಿರ ಠೇವಣಿ,  ಅಂಚೆ ಕಚೇರಿಯ ಸಾಂಪ್ರದಾಯಿಕ ಉಳಿತಾಯ ಯೋಜನೆಗಳಿಗೆ ಇತ್ತೀಚೆಗೆ ಕಡಿಮೆ ಬಡ್ಡಿ ದರ ನೀಡಲಾಗುತ್ತಿದೆ. ಈ ಉಳಿತಾಯ ಯೋಜನೆಗಳಲ್ಲಿನ ಹೂಡಿಕೆಗಳಿಂದ ಬರುವ ಲಾಭವು ಹಣದುಬ್ಬರ ಹೆಚ್ಚಳಕ್ಕೆ ರಕ್ಷಣೆ ಒದಗಿಸುವುದಿಲ್ಲ. ಮ್ಯೂಚುವಲ್‌ ಫಂಡ್‌ಗಳಲ್ಲಿನ ಹೂಡಿಕೆಯು ದೀರ್ಘಾವಧಿಯಲ್ಲಿ ಗರಿಷ್ಠ ಶೇ 12 ರಿಂದ ಶೇ 15ರವರೆಗೆ ಲಾಭ ತಂದುಕೊಡುತ್ತದೆ. ಉಳಿತಾಯ ಯೋಜನೆಗಳಿಗಿಂತ ಮ್ಯೂಚುವಲ್‌ ಫಂಡ್‌ಗಳೇ ಉತ್ತಮ ಎನ್ನುವುದು ನಮ್ಮ ಧೋರಣೆಯಲ್ಲ. ಅದು (ಉಳಿತಾಯ ಯೋಜನೆ) ಇರಬೇಕು. ಅದರ ಜತೆಗೆ ಇದು ಕೂಡ (ಮ್ಯೂಚುವಲ್ ಫಂಡ್‌) ಇರಬೇಕು ಎನ್ನುವುದು ನಮ್ಮ ನಿಲುವಾಗಿದೆ. ಮ್ಯೂಚುವಲ್‌ ಫಂಡ್‌ಗಳಲ್ಲಿನ ಹೂಡಿಕೆಗೆ ವಿಪುಲ ಅವಕಾಶಗಳು ಇವೆ.  ಆರ್ಥಿಕ ಸೇರ್ಪಡೆ ಹೆಚ್ಚುತ್ತಿದ್ದಂತೆ ಈ ವಹಿವಾಟಿನತ್ತ ಆಕರ್ಷಿತರಾಗುವವರ ಸಂಖ್ಯೆಯೂ ಹೆಚ್ಚಲಿದೆ. ಹೂಡಿಕೆಗೆ ಅಗಣಿತ ಅವಕಾಶಗಳಿವೆ.

‘ಈ ವಹಿವಾಟಿನಲ್ಲಿ ಎಷ್ಟು ಜನರ ಸಂಪತ್ತು ವೃದ್ಧಿಯಾಗಿದೆ ಎನ್ನುವುದು ಮುಖ್ಯವಾಗಬೇಕು. ಲಕ್ಷಾಧಿಪತಿ, ಕೋಟ್ಯಧಿಪತಿಗಳನ್ನು ಸೃಷ್ಟಿಸುವುದು ನಮ್ಮ ಮುಖ್ಯ ಗುರಿಯಾಗಿದೆ. ಈ ವಹಿವಾಟಿನ ಬಗ್ಗೆ ಹೂಡಿಕೆದಾರರಲ್ಲಿ ಸಮಗ್ರ ಮಾಹಿತಿ ನೀಡುವುದೂ ಮುಖ್ಯವಾಗಿರುತ್ತದೆ. ಮ್ಯೂಚುವಲ್‌ ಫಂಡ್‌ಗಳು ಅಂದರೆ ಏನು, ಅವು ಹೇಗೆ ಕಾರ್ಯನಿರ್ವಹಿಸುತ್ತವೆ. ಅದರಲ್ಲಿನ ಹೂಡಿಕೆಯಿಂದ ಎಷ್ಟು ಪ್ರಯೋಜನ ಲಭಿಸಲಿದೆ. ವ್ಯಕ್ತಿಯ ಅಗತ್ಯಗಳಿಗೆ ತಕ್ಕಂತೆ ಯಾವ ಯೋಜನೆ ಹೆಚ್ಚು ಸೂಕ್ತ ಎನ್ನುವುದರ ವಿವರ ಲಭ್ಯ ಇರಬೇಕು.

‘ಹೂಡಿಕೆದಾರರಲ್ಲಿ ಅರಿವು ಮೂಡಿಸುವುದಕ್ಕೆ ನಾವು ಹೆಚ್ಚು ಆದ್ಯತೆ ನೀಡುತ್ತೇವೆ. ಹೂಡಿಕೆ ಮಹತ್ವ ಏನು ಎನ್ನುವುದನ್ನು ತಿಳಿಸಿ ಕೊಡಲಾಗುವುದು. ನಮ್ಮ ವಿತರಕರು ಮತ್ತು ಸಲಹೆಗಾರರರು ವ್ಯಕ್ತಿಗಳ ಅಗತ್ಯಕ್ಕೆ ತಕ್ಕಂತೆ ಸೂಕ್ತ ಸಲಹೆ ನೀಡುತ್ತಾರೆ. ಮ್ಯೂಚುವಲ್‌ ಫಂಡ್‌ಗಳು ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಸುವ ಸಂಸ್ಥೆಗಳಾಗಿವೆ. ದೀರ್ಘ ಸಮಯದವರೆಗೆ ಸಹನೆಯಿಂದ ಕಾಯುವವರಿಗೆ ‘ಎಂಎಫ್‌’ಗಳು  ಸೂಕ್ತವಾಗಿವೆ.

‘ಸರ್ಕಾರಿ ಸ್ವಾಮ್ಯ, ಖಾಸಗಿ, ವಿದೇಶಿ ಬ್ಯಾಂಕ್‌ಗಳೂ ಈಗ ‘ಎಂಎಫ್‌’ ವಹಿವಾಟಿನ ಮಾರುಕಟ್ಟೆ ಪ್ರವೇಶಿಸಿವೆ. ಬೆಂಗಳೂರು ನಗರವು ಮುಂಬೈ, ದೆಹಲಿ ನಂತರದ  ಅತಿದೊಡ್ಡ ಮಾರುಕಟ್ಟೆಯಾಗಿದೆ. ಬೆಂಗಳೂರಿನಲ್ಲಿ ಎಲ್ಲ ಬಗೆಯ ಹೂಡಿಕೆದಾರರು ಇದ್ದಾರೆ. ಈ ವಹಿವಾಟಿನ ಬಗೆಗಿನ ಸಾಕ್ಷರತೆ ಪ್ರಮಾಣವೂ ಕಡಿಮೆ ಇದೆ. ಇಂತಹ ತಿಳಿವಳಿಕೆಯು ರಾತ್ರಿ ಬೆಳಗಾಗುವುದರೊಳಗೆ ಆಗಲಾರದು. ಸಾಕ್ಷರತೆ ನಿಧಾನವಾಗಿ ನಡೆಯುತ್ತದೆ. ಈ ನಿಟ್ಟಿನಲ್ಲಿ ‘ಸೆಬಿ’ ಮತ್ತು ಮ್ಯೂಚುವಲ್ ಫಂಡ್‌ ಸಂಸ್ಥೆಗಳು ವ್ಯಾಪಕ ‍ಪ್ರಮಾಣದಲ್ಲಿ ಪ್ರಚಾರ ಅಭಿಯಾನ ಹಮ್ಮಿಕೊಂಡಿವೆ. ಮ್ಯೂಚುವಲ್‌ ಫಂಡ್‌ ಮೂಲಕ ಷೇರುಪೇಟೆಯಲ್ಲಿ ಹಣ ತೊಡಗಿಸಿ ಎಂದು ಯಾರೊಬ್ಬರೂ ನೇರವಾಗಿ ಹೇಳುತ್ತಿಲ್ಲ. ‘ಮ್ಯೂಚುವಲ್‌ ಫಂಡ್‌’ ಹೂಡಿಕೆ ಸಮರ್ಪಕವಾಗಿದೆ ಎಂದಷ್ಟೇ ಜಾಹೀರಾತುಗಳಲ್ಲಿ ಹೇಳಲಾಗುತ್ತಿದೆ. ಇತರ ಉಳಿತಾಯ ಯೋಜನೆಗಳಲ್ಲಿನ ಹೂಡಿಕೆಯಿಂದ ಹಣದುಬ್ಬರ ಹೆಚ್ಚಳ ಮತ್ತು ತೆರಿಗೆ ಹೊರೆ ಎದುರಿಸಲು ಸಾಧ್ಯವಾಗಲಾರದು. ಸಂಪತ್ತು ತ್ವರಿತವಾಗಿ ಹೆಚ್ಚಳಗೊಳ್ಳಲಾರದು. ಮ್ಯೂಚುವಲ್‌ ಫಂಡ್‌ಗಳು ದೀರ್ಘಾವಧಿಯಲ್ಲಿ  ಶೇ 12 ರಿಂದ ಶೇ 15 ರಷ್ಟು ಲಾಭಾಂಶ ನೀಡುತ್ತಿದ್ದರೆ ಅದು ಖಂಡಿತವಾಗಿಯೂ ಲಾಭಕರ’ ಎಂದೂ ಪೆಶೊತನ್‌ ದಸ್ತೂರ್‌ ಅವರು ಹೇಳುತ್ತಾರೆ.

ಜಾಗತಿಕ ಹೂಡಿಕೆ ನಿರ್ವಹಣಾ ಸಂಸ್ಥೆ
ಜಾಗತಿಕ ಹೂಡಿಕೆ ನಿರ್ವಹಣಾ ಸಂಸ್ಥೆಯಾಗಿರುವ ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಇನ್‌ವೆಸ್ಟಮೆಂಟ್ಸ್‌, ರಿಟೇಲ್‌, ಸಾಂಸ್ಥಿಕ ಮತ್ತು ಸಿರಿವಂತ ಗ್ರಾಹಕರ ಸಂಪತ್ತು ನಿರ್ವಹಣೆ ಸೇವೆ ಒದಗಿಸುತ್ತಿದೆ. ಸಂಸ್ಥೆಯು 65 ವರ್ಷಗಳಷ್ಟು ಹೂಡಿಕೆ ನಿರ್ವಹಣೆಯ ಅನುಭವ ಹೊಂದಿದೆ.

ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಇನ್‌ವೆಸ್ಟ್‌ಮೆಂಟ್ಸ್‌ (ಇಂಡಿಯಾ)– ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿದೊಡ್ಡ ವಿದೇಶಿ ನಿಧಿ ಸಂಸ್ಥೆಯಾಗಿದೆ. ಸಂಸ್ಥೆಯು 33 ಬಗೆಯ ಮ್ಯೂಚುವಲ್ ಫಂಡ್ಸ್‌ಗಳನ್ನು ನಿರ್ವಹಿಸುತ್ತಿದೆ. ದೇಶದಾದ್ಯಂತ 33 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ದೇಶಿ ಮ್ಯೂಚುವಲ್‌ ಫಂಡ್‌ಗಳ ವಹಿವಾಟಿನಲ್ಲಿ ಇದು 8ನೇ ಸ್ಥಾನದಲ್ಲಿ ಇದೆ.  ₹ 1.05 ಲಕ್ಷ ಕೋಟಿ ಮೊತ್ತದ ಸಂಪತ್ತು ನಿರ್ವಹಣೆ ಮಾಡುತ್ತಿದೆ.

ದೇಶಿ ಮ್ಯೂಚುವಲ್‌ ಫಂಡ್‌ ವಹಿವಾಟಿನ ಚಿತ್ರಣ

₹1.9 ಕೋಟಿ            -   ವ್ಯವಸ್ಥಿತ ಹೂಡಿಕೆ ಯೋಜನೆ (ಸಿಪ್‌) ಸಂಖ್ಯೆ
₹ 6,300 ಕೋಟಿ       – ‘ಎಸ್‌ಐಪಿ’ನಿಂದ ಪ್ರತಿ ತಿಂಗಳೂ ಹೂಡಿಕೆಯಾಗುವ ಮೊತ್ತ
₹ 80 ಸಾವಿರ ಕೋಟಿ  – ‘ಎಸ್‌ಐಪಿ’ಗಳ ವಾರ್ಷಿಕ ಹೂಡಿಕೆ ಮೊತ್ತ
₹ 22 ಲಕ್ಷ ಕೋಟಿ       – ದೇಶಿ ‘ಎಂಎಫ್‌’ ಒಟ್ಟಾರೆ ವಹಿವಾಟು

3 – ಹೂಡಿಕೆ ವಹಿವಾಟಿನಲ್ಲಿ ಬೆಂಗಳೂರಿನ ಸ್ಥಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.