ADVERTISEMENT

ದೂರಸಂಪರ್ಕ ನೀತಿ: ಉಚಿತ ರೋಮಿಂಗ್?

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2011, 19:30 IST
Last Updated 6 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ರಾಷ್ಟ್ರೀಯ ಉಚಿತ ರೋಮಿಂಗ್ ಸೌಲಭ್ಯ, ದೂರಸಂಪರ್ಕ ಹಣಕಾಸು ನಿಗಮ ಸ್ಥಾಪನೆ ಮತ್ತಿತರ ಪ್ರಸ್ತಾವಗಳನ್ನು  ಒಳಗೊಂಡ `ಹೊಸ ದೂರಸಂಪರ್ಕ ನೀತಿ-2011~ ಮುಂದಿನ ವಾರ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

ಬಂಡವಾಳ ಹೂಡಿಕೆಗೆ ದೂರಸಂಪರ್ಕ ಹಣಕಾಸು ನಿಗಮ ಸ್ಥಾಪನೆ,  ಲೈಸೆನ್ಸ್ ಮರಳಿಸಲು ಅವಕಾಶ ಮಾಡಿಕೊಡುವುದು ಸೇರಿದಂತೆ ಹಲವಾರು ಹೊಸ ಉಪಕ್ರಮಗಳನ್ನು ಒಳಗೊಂಡ ನೀತಿಯನ್ನು ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಮುಂದಿನ ವಾರ ಅನಾವರಣ ಮಾಡುವ ನಿರೀಕ್ಷೆ ಇದೆ.

2008ರಲ್ಲಿ ಲೈಸೆನ್ಸ್ ಪಡೆದುಕೊಂಡಿರುವ ಕೆಲ ಸಂಸ್ಥೆಗಳು, ಬಂಡವಾಳ ಹೊಂದಿಸಿಕೊಳ್ಳುವಲ್ಲಿ ಇದುವರೆಗೂ ವಿಫಲವಾಗಿ  ಸೇವೆಯನ್ನೇ ಆರಂಭಿಸಿಲ್ಲ. ಹಣಕಾಸು ನಿಗಮ ಸ್ಥಾಪನೆ ಮೂಲಕ, ನಿಗದಿತ ಕಾಲಮಿತಿಯಲ್ಲಿ ಮೊಬೈಲ್ ಸೇವೆ ಆರಂಭಿಸಲು ಅಗತ್ಯವಾದ ಬಂಡವಾಳವನ್ನು ಈ ನಿಗಮದ ಮೂಲಕ  ಒದಗಿಸಲು ಉದ್ದೇಶಿಸಲಾಗಿದೆ.

ಸದ್ಯಕ್ಕೆ ಜಾರಿಯಲ್ಲಿ ಇರುವ ಮೊಬೈಲ್ ಸಂಖ್ಯೆ ಸ್ಥಿರವಾಗಿ ಉಳಿಸಿಕೊಂಡು ಸಂಸ್ಥೆ ಬದಲಿಸುವ  ನಿರ್ದಿಷ್ಟ ವರ್ತುಲದಲ್ಲಿನ ಸೌಲಭ್ಯವನ್ನು ದೇಶದಾದ್ಯಂತ ವಿಸ್ತರಿಸಲೂ ಉದ್ದೇಶಿಸಲಾಗಿದೆ.   ಮೊಬೈಲ್ ಬಳಕೆದಾರರು ಒಂದು ಸೇವಾ  ವಲಯದಿಂದ ಇನ್ನೊಂದು ಸೇವಾ ವಲಯಕ್ಕೆ ವರ್ಗಾವಣೆಗೊಂಡ ಸಂದರ್ಭದಲ್ಲಿಯೂ `ಎಂಎನ್‌ಪಿ~ ಸೌಲಭ್ಯ ದೊರೆಯುವಂತೆ ಮಾಡಲು  ಹೊಸ ನೀತಿಯಲ್ಲಿ  ಉದ್ದೇಶಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.