ADVERTISEMENT

ದೇವನಹಳ್ಳಿ ಬಳಿ ಐಟಿ ಹೂಡಿಕೆ ವಲಯ

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 19:59 IST
Last Updated 13 ಜುಲೈ 2013, 19:59 IST

ಮೈಸೂರು: `ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಏಷ್ಯಾದಲ್ಲೇ ಅತಿ ದೊಡ್ಡದಾದ ಮಾಹಿತಿ ತಂತ್ರಜ್ಞಾನ ಬಂಡವಾಳ ಹೂಡಿಕೆ ವಲಯವನ್ನು (ಐಟಿಐಆರ್) ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಯೋಜಿಸಿದ್ದು, 2,072 ಎಕರೆ ಭೂಸ್ವಾಧೀನಕ್ಕೆ ನೋಟಿಸ್ ಜಾರಿಗೊಳಿಸಲಾಗಿದೆ' ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಎಸ್.ಆರ್. ಪಾಟೀಲ ತಿಳಿಸಿದರು.

ನಗರದ ಹೆಬ್ಬಾಳ ಕೈಗಾರಿಕಾ ವಲಯದಲ್ಲಿ ಸಾಫ್ಟವೇರ್ ಪ್ಯಾರಡೈಮ್ಸ ಇನ್ಫೋಟೆಕ್ (ಎಸ್‌ಪಿಐ) ಕಂಪೆನಿಯ `ಸ್ಪೈಸಿಟಿ' ಎರಡನೇ ಹಂತದ ನೂತನ ಕಚೇರಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

`ದೇವನಹಳ್ಳಿ ಮತ್ತು ಚಿಕ್ಕಬಳ್ಳಾಪುರ ನಡುವೆ 10,500 ಎಕರೆ ವಿಸ್ತೀರ್ಣದಲ್ಲಿ ಐಟಿ ಬಂಡವಾಳ ಹೂಡಿಕೆ ವಲಯವನ್ನು ಎರಡು ಹಂತದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ. 2013ರಿಂದ 2020ರವರೆಗೆ ಮೊದಲನೇ ಹಂತ ಹಾಗೂ 2021ರಿಂದ 2032ರವರೆಗೆ ಎರಡನೇ ಹಂತದಲ್ಲಿ ಐಟಿಐಆರ್ ಅಭಿವೃದ್ಧಿಪಡಿಸಲಾಗುವುದು. ಇದಕ್ಕೆ ಅಗತ್ಯವಾದ ರಸ್ತೆ, ರೈಲು ಸಂಪರ್ಕ ಮತ್ತು ಸಂವಹನ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಏಳು ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಲಿದೆ' ಎಂದು ಹೇಳಿದರು.

`ಮಹತ್ವಾಕಾಂಕ್ಷಿ ಯೋಜನೆ ಪೂರ್ಣಗೊಂಡರೆ ಐಟಿ ಕ್ಷೇತ್ರದಲ್ಲಿ ಭಾರತವು ಜಾಗತಿಕ ನಾಯಕನಾಗಿ ಹೊರಹೊಮ್ಮಲಿದೆ. ಇದರಿಂದ ರೂ 1.06 ಲಕ್ಷ ಕೋಟಿ ಬಂಡವಾಳ ಹೂಡಿಕೆ ನಿರೀಕ್ಷಿಸಲಾಗಿದ್ದು, ರಾಜ್ಯದ ಅಭಿವೃದ್ಧಿಯ ಗತಿಯನ್ನು ಬದಲಾಯಿಸಲಿದೆ. 12 ಲಕ್ಷ ಜನರಿಗೆ ನೇರ ಹಾಗೂ 28 ಲಕ್ಷ ಮಂದಿಗೆ ಪರೋಕ್ಷ ಉದ್ಯೋಗ ದೊರೆಯಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದ್ವಿತೀಯ ಶ್ರೇಣಿ ನಗರಕ್ಕೆ ಬನ್ನಿ: `ರಾಜ್ಯದ ದ್ವಿತೀಯ ಶ್ರೇಣಿ ನಗರಗಳಿಗೂ ಮಾಹಿತಿ ತಂತ್ರಜ್ಞಾನದ ಕಂಪೆನಿಗಳನ್ನು ಸರ್ಕಾರ ಆಹ್ವಾನಿಸುತ್ತದೆ. ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಶಿವಮೊಗ್ಗ, ಗುಲ್ಬರ್ಗ ನಗರಗಳಲ್ಲಿ ಐಟಿ ಕಂಪೆನಿಗಳ ಸ್ಥಾಪನೆಗೆ ಉತ್ತೇಜನ ನೀಡಲಾಗುವುದು. ಹುಬ್ಬಳ್ಳಿ- ಧಾರವಾಡದಲ್ಲಿ ಇನ್‌ಫೋಸಿಸ್ ವಿಭಾಗೀಯ ಕೇಂದ್ರ ಸ್ಥಾಪನೆಗೆ ಮಾತುಕತೆ ನಡೆಸಲಾಗಿದೆ. ಈ ಸಂಬಂಧ ಸರ್ಕಾರ 50 ಎಕರೆ ಭೂಮಿಯನ್ನು ಇನ್‌ಫೋಸಿಸ್‌ಗೆ ಹಸ್ತಾಂತರಿಸಲಿದೆ' ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

`ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರ ಬೆಂಗಳೂರಿನಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ರಾಜಧಾನಿಯ 33 ಲಕ್ಷ ಜನ ಐಟಿ ಕ್ಷೇತ್ರವನ್ನು ಅವಲಂಬಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.