ADVERTISEMENT

`ನಗರೀಕರಣದಿಂದ ಆರ್ಥಿಕ ಪ್ರಗತಿ'

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 19:59 IST
Last Updated 21 ಡಿಸೆಂಬರ್ 2012, 19:59 IST

ಬೀಜಿಂಗ್ (ಪಿಟಿಐ): `ನಗರೀಕರಣವೇ ಭವಿಷ್ಯದ ಆರ್ಥಿಕ ಪ್ರಗತಿಯ ಪ್ರಮುಖ ಮಾನದಂಡ' ಎಂದು ಚೀನಾ ಉಪ ಪ್ರಧಾನಿ ಲಿ ಕ್ವಿಯಾಂಗ್ ಹೇಳಿದ್ದಾರೆ.

ನಗರೀಕರಣದಿಂದ ದೇಶೀಯ  ಮಾರುಕಟ್ಟೆಯಲ್ಲಿ ಸರಕುಗಳ ಬೇಡಿಕೆ ಹೆಚ್ಚುತ್ತಿದೆ. ಇದು ದೇಶದ ಒಟ್ಟಾರೆ ರಫ್ತು ವಹಿವಾಟು ಮೀರಿಸುವ ಸಾಧ್ಯತೆ ಇದೆ. ಇದೇ ವೇಳೆ ಹೊಸ ಉದ್ಯೋಗಾವಕಾಶ ಮತ್ತು ಜನರ ವರಮಾನವೂ ಹೆಚ್ಚುತ್ತಿದೆ. ಚೀನಾದ ಶೇ 50ರಷ್ಟು ಜನತೆ ನಗರಗಳಲ್ಲಿಯೇ ನೆಲೆಸಿರುವುದು ನಗರೀಕರಣಕ್ಕೆ ಉತ್ತಮ ಉದಾಹರಣೆ  ಎಂದು ಲಿ ಅವರ ಹೇಳಿಕೆ ಆಧರಿಸಿ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

ದೊಡ್ಡ ಪ್ರಮಾಣದ ನಗರೀಕರಣದಿಂದ ಚೀನಾದ ಒಟ್ಟಾರೆ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) 2013ರ ವೇಳೆಗೆ ಶೇ 8.4ರಷ್ಟು ಪ್ರಗತಿ ದಾಖಲಿಸಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.

ಚೀನಾ ಸರ್ಕಾರ ಶೇ 7.5ರಷ್ಟು `ಜಿಡಿಪಿ' ಅಂದಾಜಿಸಿದೆ. ಸಗಟು ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ ದರ ಶೇ 3.54ರಷ್ಟು ಇರಲಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ಶೇ 6.5ರಷ್ಟು ಜಿಡಿಪಿ
ನವದೆಹಲಿ(ಪಿಟಿಐ): ಜಾಗತಿಕ ಆರ್ಥಿಕ ಚೇತರಿಕೆಯಿಂದ ಭಾರತದ ಒಟ್ಟಾರೆ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 6.5ರಷ್ಟು ಪ್ರಗತಿ ದಾಖಲಿಸಿದೆ ಎಂದು ಕ್ರೆಡಿಂಟ್ ರೇಟಿಂಗ್ ಸಂಸ್ಥೆ     ಸ್ಟಾಂಡರ್ಡ್ ಅಂಡ್ ಪೂರ್ಸ್‌(ಎಸ್ ಅಂಡ್ ಪಿ)ಅಂದಾಜಿಸಿದೆ. 

ಸರ್ಕಾರ ಇತ್ತೀಚೆಗೆ ಕೈಗೊಂಡಿರುವ ಸುಧಾರಣಾ ಕ್ರಮಗಳು `ಜಿಡಿಪಿ'ಗೆ ಉತ್ತೇಜನ ನೀಡಿದೆ ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.