ADVERTISEMENT

`ನಮ್ಮ ಸಾಧನೆಯನ್ನೂ ಗುರುತಿಸಿ'

ಪ್ಯಾರಾ ಅಥ್ಲೀಟ್‌ಗಳ ಕಡೆಗಣನೆ; ಗಿರೀಶ್, ದೇವೇಂದ್ರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 31 ಜುಲೈ 2013, 19:59 IST
Last Updated 31 ಜುಲೈ 2013, 19:59 IST
ದೇವೇಂದ್ರ ಜಜಾರಿಯಾ
ದೇವೇಂದ್ರ ಜಜಾರಿಯಾ   

ನವದೆಹಲಿ (ಪಿಟಿಐ/ ಐಎಎನ್‌ಎಸ್): ಪ್ಯಾರಾ ಅಥ್ಲೀಟ್‌ಗಳ ಸಾಧನೆಯನ್ನು ಗುರುತಿಸಿ, ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ವಿಶ್ವ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿದ್ದ ದೇವೇಂದ್ರ ಜಜಾರಿಯಾ ಸರ್ಕಾರವನ್ನು ಕೋರಿದ್ದಾರೆ.

`ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆಲ್ಲುವ ಅಥ್ಲೀಟ್‌ಗಳನ್ನು ಕ್ರೀಡಾ ಸಚಿವಾಲಯ ತಕ್ಷಣವೇ ಅಭಿನಂದಿಸುತ್ತದೆ. ಆದರೆ ಅಭಿನಂದನೆ ಸಲ್ಲಿಸಲು ಸರ್ಕಾರದ ಯಾವುದೇ ಪ್ರತಿನಿಧಿ ಇದುವರೆಗೂ ನನ್ನನ್ನು ಸಂಪರ್ಕಿಸಿಲ್ಲ. ಈ ದೇಶದ ಪ್ಯಾರಾ ಅಥ್ಲೀಟ್‌ಗಳಿಗೆ ಒದಗಿರುವ ದುರಂತ ಇದು' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್‌ನ ಜಾವೆಲಿನ್ ಥ್ರೋ (ಎಫ್-47 ವಿಭಾಗ) ಸ್ಪರ್ಧೆಯಲ್ಲಿ ದೇವೇಂದ್ರ ಬಂಗಾರ ಜಯಿಸಿದ್ದರು. ಆದರೆ ಅವರು ಇನ್ನೂ ರೈಲ್ವೆ ಇಲಾಖೆಯಲ್ಲಿ ನಾಲ್ಕನೇ ದರ್ಜೆಯ ನೌಕರನಾಗಿಯೇ ಉಳಿದುಕೊಂಡಿದ್ದಾರೆ. ಕೆಲಸದಲ್ಲಿ ಬಡ್ತಿ ನೀಡಲು ಇಲಾಖೆ ಮುಂದಾಗಿಲ್ಲ.

ಭಾರತ ಪ್ಯಾರಾಲಿಂಪಿಕ್ ಸಮಿತಿ (ಪಿಸಿಐ) ಐದು ಲಕ್ಷ ರೂ. ನಗದು ಬಹುಮಾನ ನೀಡಿರುವುದು ಮಾತ್ರ ದೇವೇಂದ್ರಗೆ ಸಮಾಧಾನ ನೀಡಿರುವ ಅಂಶ. `ಪ್ಯಾರಾ ಅಥ್ಲೀಟ್‌ಗಳಿಗಾಗಿ ಒಂದು ಕ್ರೀಡಾ ನೀತಿ ರೂಪಿಸಲು ಸರ್ಕಾರ ಮುಂದಾಗಬೇಕು' ಎಂದು ದೇವೇಂದ್ರ ಹೇಳಿದ್ದಾರೆ.

ಇನ್ನೂ ದೊರೆಯದ ಉದ್ಯೋಗ: ಲಂಡನ್ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಎಚ್.ಎನ್. ಗಿರೀಶ್ ಕೂಡಾ ಕ್ರೀಡಾ ಸಚಿವಾಲಯದ ವಿರುದ್ಧ ಟೀಕೆ ಮಾಡಿದ್ದಾರೆ. ಭಾರತ ಕ್ರೀಡಾ ಪ್ರಾಧಿಕಾರದಲ್ಲಿ (ಎಸ್‌ಎಐ) ಉದ್ಯೋಗ ದೊರಕಿಸಿಕೊಡುತ್ತೇವೆ ಎಂಬ ಭರವಸೆಯನ್ನು ಕ್ರೀಡಾ ಸಚಿವಾಲಯ ಇನ್ನೂ ಈಡೇರಿಸಿಲ್ಲ ಎಂದು ಕರ್ನಾಟಕದ ಅಥ್ಲೀಟ್ ತಿಳಿಸಿದ್ದಾರೆ.

`ಲಂಡನ್ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಅಥ್ಲೀಟ್‌ಗೆ ಎಸ್‌ಎಐನಲ್ಲಿ ಪ್ರಮುಖ ಹುದ್ದೆ ನೀಡಲಾಗುವುದು ಎಂದು ಕ್ರೀಡಾ ಸಚಿವಾಲಯ ಭರವಸೆ ನೀಡಿತ್ತು. ಆದರೆ ನನಗೆ ಇದುವರೆಗೂ ಉದ್ಯೋಗ ದೊರೆತಿಲ್ಲ' ಎಂದು ಹೈಜಂಪ್ ಸ್ಪರ್ಧಿ ಗಿರೀಶ್ ಹೇಳಿದ್ದಾರೆ.

ಗಿರೀಶ್ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆರು ತಿಂಗಳ ಒಳಗಾಗಿ ಕೆಲಸಕ್ಕೆ ಸೇರಿಸಿಕೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಒಂದು ವರ್ಷ ಕಳೆದಿದ್ದು, ಕ್ರೀಡಾ ಸಚಿವಾಲಯ ಮತ್ತು ಎಸ್‌ಎಐಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.