ಲಂಡನ್: `ನನಗೆ ನಿರಾಸೆಯಾಗಿಲ್ಲ. ಕಳೆದ ಕೆಲ ವರ್ಷಗಳಲ್ಲಿ ನನ್ನ ಪ್ರದರ್ಶನಮಟ್ಟದಲ್ಲಿ ಚೇತರಿಕೆ ಕಂಡುಬರುತ್ತಿದೆ. ಕಾಮನ್‌ವೆಲ್ತ್ ಕ್ರೀಡಾಕೂಟ, ಏಷ್ಯನ್ ಕ್ರೀಡಾಕೂಟ ಹಾಗೂ ವಿಶ್ವಚಾಂಪಿಯನ್‌ಷಿಪ್ ಒಳಗೊಂಡಂತೆ ಎಲ್ಲ ಕೂಟಗಳಲ್ಲೂ ನಾನು ಉತ್ತಮ ಸಾಮರ್ಥ್ಯ ತೋರಿದ್ದೇನೆ~.
-ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನ ಪುರುಷರ ಡಿಸ್ಕಸ್ ಥ್ರೋನಲ್ಲಿ ಎಂಟನೇ ಸ್ಥಾನ ಪಡೆದ ಭಾರತದ ವಿಕಾಸ್ ಗೌಡ ಪ್ರತಿಕ್ರಿಯಿಸಿದ್ದು ಹೀಗೆ. ಮಂಗಳವಾರ ನಡೆದ ಸ್ಪರ್ಧೆಯಲ್ಲಿ ಕನ್ನಡಿಗ ವಿಕಾಸ್ ಡಿಸ್ಕ್‌ಅನ್ನು 64.79 ಮೀ. ದೂರ ಎಸೆಯಲಷ್ಟೇ ಯಶಸ್ವಿಯಾಗಿದ್ದರು.
`ವಿಶ್ವದ ಶ್ರೇಷ್ಠ ಸ್ಪರ್ಧಿಗಳ ಜೊತೆ ಪೈಪೋಟಿ ನಡೆಸುವುದು ಸಂತಸದ ಸಂಗತಿ. ಆದರೆ ಇನ್ನಷ್ಟು ಮೇಲಿನ ಸ್ಥಾನ ಲಭಿಸಿದ್ದರೆ ಚೆನ್ನಾಗಿತ್ತು~ ಎಂದರು.
`ಮೊದಲ ಪ್ರಯತ್ನ ಉತ್ತಮವಾಗಿತ್ತು. ಆದರೆ ಇತರ ಸ್ಪರ್ಧಿಗಳು ಮೊದಲ ಎಸೆತದಲ್ಲೇ 67ರಿಂದ 68 ಮೀ. ದೂರ ಎಸೆಯುವಲ್ಲಿ ಯಶಸ್ವಿಯಾದರು. ಬಳಿಕದ ಅವಕಾಶಗಳಲ್ಲಿ ಇನ್ನಷ್ಟು ಪ್ರಯತ್ನ ನಡೆಸಿದರೂ ಅವರನ್ನು ಹಿಂದಿಕ್ಕಲು ಆಗಲಿಲ್ಲ. ಏನೇ ಆಗಲಿ, ಇಲ್ಲಿ ನೀಡಿದ ಪ್ರದರ್ಶನ ತೃಪ್ತಿ ನೀಡಿದೆ~ ಎಂದು ನುಡಿದರು.
ಹರ್ಟಿಂಗ್‌ಗೆ ಚಿನ್ನ: ಈ ವಿಭಾಗದ ಚಿನ್ನವನ್ನು ಜರ್ಮನಿಯ ರಾಬರ್ಟ್ ಹರ್ಟಿಂಗ್ ಜಯಿಸಿದರು.
ಹರ್ಟಿಂಗ್ ಡಿಸ್ಕ್‌ಅನ್ನು 68.27 ಮೀ. ದೂರ ಎಸೆಯುವಲ್ಲಿ ಯಶಸ್ವಿಯಾದರು. ಇರಾನ್‌ನ ಎಹ್ಸಾನ್ ಹಡದಿ (68.18 ಮೀ.) ಮತ್ತು ಎಸ್ಟೊನಿಯಾದ ಗರ್ಡ್ ಕ್ಯಾಂಟರ್ (68.03 ಮೀ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದುಕೊಂಡರು.
ಹರ್ಟಿಂಗ್ ಚಿನ್ನದ ಸಾಧನೆ ಐದನೇ ಪ್ರಯತ್ನದಲ್ಲಿ ಮೂಡಿಬಂತು. ಅವರ ಎರಡನೇ ಪ್ರಯತ್ನ ಫೌಲ್ ಆಗಿದ್ದರೆ, ಉಳಿದ ಎಲ್ಲ ಪ್ರಯತ್ನಗಳಲ್ಲೂ ಡಿಸ್ಕ್ ಅನ್ನು 66.00 ಮೀ. ಗಿಂತ ದೂರ ಎಸೆಯುವಲ್ಲಿ ಶಕ್ತರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.