ನವದೆಹಲಿ (ಪಿಟಿಐ): ಸಂಪನ್ಮೂಲ ಕ್ರೋಡೀಕರಣ ಹೆಚ್ಚಿಸಬೇಕಾದರೆ ನಿಟ್ಟಿನಲ್ಲಿ ನೇರ ತೆರಿಗೆ ಸಂಹಿತೆ ಪದ್ಧತಿ ಹಾಗೂ ಇಡೀ ರಾಷ್ಟ್ರಕ್ಕೆ ಅನ್ವಯವಾಗುವ ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಪದ್ಧತಿಯನ್ನು ತ್ವರಿತವಾಗಿ ಜಾರಿಗೊಳಿಸುವುದು ಅಗತ್ಯ ಎಂದು ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ ಸಚಿವ ಪ್ರಣವ್ ಮುಖರ್ಜಿ ಪ್ರತಿಪಾದಿಸಿದರು.
ಸ್ಥಿರಾಸ್ತಿ ವರ್ಗಾವಣೆ ಹಾಗೂ ಚಿನ್ನ ಖರೀದಿ ಮೇಲೆ ಮೂಲದಲ್ಲೇ ತೆರಿಗೆ ಕಡಿತ (ಟಿಡಿಎಸ್) ಮಾಡುವ ಪದ್ಧತಿ ಜಾರಿಗೊಳಿಸಲಾಗುವುದು. ಕಾರ್ಪೊರೇಟ್ ವಲಯಕ್ಕೆ ವಿಧಿಸುತ್ತಿದ್ದ ತೆರಿಗೆ ಪ್ರಮಾಣದಲ್ಲಿ ಯಾವ ಬದಲಾವಣೆಯನ್ನೂ ಮಾಡಿಲ್ಲ. ಆದರೆ ಉದ್ಯಮದ ವಿಸ್ತರಣೆ ಸಂದರ್ಭದಲ್ಲಿ ಸುಲಭವಾಗಿ ನಿಧಿ ಲಭ್ಯವಾಗುವಂತೆ ಮಾಡುವ ಭರವಸೆ ನೀಡಲಾಗಿದೆ.
ಬಂಡವಾಳ ಮಾರುಕಟ್ಟೆಯನ್ನು ಮತ್ತಷ್ಟು ಉದಾರೀಕರಣಗೊಳಿಸುವ ನಿಟ್ಟಿನಲ್ಲಿ 10 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಹೊಂದಿರುವವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ 50,000 ರೂಪಾಯಿವರೆಗಿನ ಮೊತ್ತಕ್ಕೆ ಶೇ 50ರಷ್ಟು ತೆರಿಗೆ ವಿನಾಯಿತಿ ನೀಡುವ `ಷೇರು ಉಳಿತಾಯ ಸ್ಕೀಮ್~ ಪ್ರಕಟಿಸಲಾಗಿದೆ.
ಇದೇ ವೇಳೆ, ಷೇರು ವಹಿವಾಟು ತೆರಿಗೆಯನ್ನು ಶೇ 0.125ರಿಂದ ಶೇ 0.1ಕ್ಕೆ ಇಳಿಸಲಾಗಿದೆ. ಕಾರ್ಪೊರೇಟ್ ತೆರಿಗೆ ಹಾಗೂ ಕಸ್ಟಮ್ಸ ತೆರಿಗೆಯನ್ನು ಸರ್ಕಾರ ಮುಟ್ಟಲು ಹೋಗಿಲ್ಲ. ಮೂಲಭೂತ ವಲಯಗಳಾದ ವಿದ್ಯುತ್, ವಿಮಾನಯಾನ ಉದ್ದಿಮೆ, ರಸ್ತೆ, ಆಸ್ಪತ್ರೆ, ಶೀತಲೀಕರಣ ಸೌಲಭ್ಯ ಹಾಗೂ ಕಡಿಮೆ ವೆಚ್ಚದ ಗೃಹ ನಿರ್ಮಾಣಗಳಿಗೆ ರಿಯಾಯಿತಿ ಕಲ್ಪಿಸಲಾಗಿದೆ.
ಇದರಿಂದ ಆರ್ಥಿಕತೆಗೆ ಹಿನ್ನಡೆಯಾಗಲಿದೆ. ಸರ್ಕಾರ ಅನುಭವಗಳಿಂದ ಪಾಠ ಕಲಿಯುವಂತೆ ಕಾಣುತ್ತಿಲ್ಲ ಎಂದು ಕಾರ್ಪೊರೇಟ್ ವಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.