ADVERTISEMENT

ಪಡಿತರ ಸೋರಿಕೆ: ವಿಶ್ವಬ್ಯಾಂಕ್ ವರದಿ

​ಪ್ರಜಾವಾಣಿ ವಾರ್ತೆ
Published 22 ಮೇ 2011, 19:30 IST
Last Updated 22 ಮೇ 2011, 19:30 IST

ನವದೆಹಲಿ (ಪಿಟಿಐ): ಪಡಿತರ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ತಡೆಯಲು ಅಗತ್ಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ   ವಿಶ್ವಬ್ಯಾಂಕ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. 

ಸರ್ಕಾರ, ದೇಶದ ಒಟ್ಟು ಆಂತರಿಕ ಉತ್ಪನ್ನದ ಶೇ 2ರಷ್ಟನ್ನು  ಬಡತನ ನಿರ್ಮೂಲನೆ,  ಪಡಿತರ ವಿತರಣೆ ಹಾಗೂ ಇತರೆ ಸಮಾಜಿಕ ರಕ್ಷಣೆ ಕಾರ್ಯಕ್ರಮಗಳಿಗೆ ವ್ಯಯಿಸುತ್ತಿದೆ. ಆದರೆ, ಶೇ 59ರಷ್ಟು ಕುಟುಂಬಗಳಿಗೆ ಪಡಿತರ ಸಮರ್ಪಕವಾಗಿ ಲಭಿಸುತ್ತಿಲ್ಲ. 2004-05ನೇ ಸಾಲಿನಲ್ಲಿ ಪಡಿತರ ವ್ಯವಸ್ಥೆ ಮೂಲಕ ಬಿಡುಗಡೆ ಮಾಡಲಾದ ಶೇ 60ರಷ್ಟು ಆಹಾರಧಾನ್ಯಗಳು ಕುಟುಂಬಗಳಿಗೆ ಲಭಿಸಿಲ್ಲ.  ಪಡಿತರ ವಿತರಣೆಯಲ್ಲಿ ಭಾರಿ ಸೋರಿಕೆ ನಡೆಯುತ್ತಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.

`ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಎನ್‌ಆರ್‌ಇಜಿಎ) ಕೂಡ ಸಮರ್ಪಕವಾಗಿ ಜಾರಿಗೊಂಡಿಲ್ಲ. ಇತರೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗಿಂತ ಹೆಚ್ಚಿನ ಹಣವನ್ನು ಭಾರತದಲ್ಲಿ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುತ್ತಿದೆ. ಆದರೆ, ಇದು ನಿರೀಕ್ಷಿತ ಮಟ್ಟದ ಪ್ರಗತಿ ಕಂಡಿಲ್ಲ. ಬಡತನ ನಿರ್ಮೂಲನೆ ಹಾಗೂ ಜನರ ಜೀವನ ಮಟ್ಟ ಸುಧಾರಣೆ ಇನ್ನೂ ಕೆಳಹಂತದಲ್ಲಿ ಇದೆ ಎಂದು  ವಿಶ್ವಬ್ಯಾಂಕ್‌ನ ಹಿರಿಯ ಅರ್ಥಶಾಸ್ತ್ರಜ್ಞ ಜಾನ್ ಬ್ಲೊಂಕ್ವಿಸ್ಟ್ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

`ಕೇಂದ್ರ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಪಡೆದರೂ, ಕೆಲವು ರಾಜ್ಯಗಳು ತಂತ್ರಜ್ಞಾನ ಮತ್ತು ಸಿಬ್ಬಂದಿಯ ಕೊರತೆ ಇರುವುದರಿಂದ ನಿಧಿಯನ್ನು ಸಮರ್ಪಪಕವಾಗಿ ಬಳಸಿಕೊಳ್ಳುತ್ತಿಲ್ಲ~ ಎಂದು ವಿಶ್ಚಬ್ಯಾಂಕ್ ವರದಿಯನ್ನು ಉಲ್ಲೇಖಿಸಿ, ಕೇಂದ್ರ ಯೋಜನಾ ಆಯೋಗ ಹೇಳಿದೆ. ಸರ್ಕಾರ ವಿತರಿಸುತ್ತಿರುವ ಪಡಿತರ ಶೇ 41ರಷ್ಟು ಕುಟುಂಬಗಳನ್ನು ಮಾತ್ರ ತಲುಪುತ್ತಿದೆ ಎಂದು ವರದಿ ಬಹಿರಂಗಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.