ADVERTISEMENT

ಪರ್ಯಾಯ ವ್ಯವಸ್ಥೆಗೆ ಕಾರ್ಮಿಕರ ಮೊರೆ

ಸಾಂಪ್ರದಾಯಿಕ ಬೀಡಿ ಉದ್ಯಮಕ್ಕೆ ಸರಕು ಮತ್ತು ಸೇವಾ ತೆರಿಗೆಯಿಂದ ಭಾರಿ ಹೊರೆ

ಚಿದಂಬರ ಪ್ರಸಾದ್
Published 15 ಜೂನ್ 2017, 19:30 IST
Last Updated 15 ಜೂನ್ 2017, 19:30 IST
ಪರ್ಯಾಯ ವ್ಯವಸ್ಥೆಗೆ ಕಾರ್ಮಿಕರ ಮೊರೆ
ಪರ್ಯಾಯ ವ್ಯವಸ್ಥೆಗೆ ಕಾರ್ಮಿಕರ ಮೊರೆ   

ಮಂಗಳೂರು:  ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯ ಸಾಂಪ್ರದಾಯಿಕ  ಬೀಡಿ ಉದ್ಯಮಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಂಟಕವಾಗಿ ಪರಿಣಮಿಸಲಿದೆ ಎನ್ನುವ  ಆತಂಕ ವ್ಯಕ್ತವಾಗುತ್ತಿದೆ.

ಅವಸಾನದ ಅಂಚಿನಲ್ಲಿರುವ ಈ ಉದ್ಯಮಕ್ಕೆ ಜಿಎಸ್‌ಟಿ ಶಾಶ್ವತ ಬೀಗ ಹಾಕಲಿದೆ ಎನ್ನುವ ಮಾತು  ಕಾರ್ಮಿಕರಿಂದ ಕೇಳಿ ಬರುತ್ತಿದೆ.

ಜುಲೈ 1ರಿಂದ ಜಿಎಸ್‌ಟಿ ಜಾರಿಗೆ ಬರಲಿದ್ದು, ಬೀಡಿಗೆ ಶೇ 28 ರಷ್ಟು ತೆರಿಗೆ ನಿಗದಿಪಡಿಸಲಾಗಿದೆ. ತೆಂಡು ಎಲೆಗೆ ಶೇ 18 ಹಾಗೂ ತಂಬಾಕಿಗೆ ಶೇ 12 ರಷ್ಟು ತೆರಿಗೆ ಬೀಳಲಿದೆ. ಹೀಗಾಗಿ ಜುಲೈ 1ರ ಬಳಿಕ ಬೀಡಿ ದರದಲ್ಲಿ ₹ 4 ರಿಂದ 5 ರಷ್ಟು ಹೆಚ್ಚಳವಾಗಲಿದೆ.

ADVERTISEMENT

‘1 ಕೆ.ಜಿ. ತೆಂಡು ಎಲೆಯಿಂದ 2,000 ಬೀಡಿಗಳನ್ನು ಕಟ್ಟಲು ಸಾಧ್ಯವಾಗುತ್ತದೆ. ಬೀಡಿ ಕಟ್ಟಿದವರಿಗೆ ಒಂದು ಸಾವಿರಕ್ಕೆ ₹170.02 ಮಜೂರಿ, ₹16.43 ಬೋನಸ್‌ ಹಾಗೂ ಶೇ 10 ರಷ್ಟು ಭವಿಷ್ಯ ನಿಧಿಯನ್ನು ಕಂಪೆನಿಯ ಮಾಲೀಕರು ಪಾವತಿಸಬೇಕು. ಇದೆಲ್ಲವನ್ನು ಸರಿದೂಗಿಸಲು ಒಂದು ಕಟ್ಟು (25) ಬೀಡಿಯನ್ನು ₹18 ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಜಿಎಸ್‌ಟಿ ಜಾರಿಯಾದ ಬಳಿಕ ಹೆಚ್ಚಾಗುವ ಆರ್ಥಿಕ ಹೊರೆಯಿಂದಾಗಿ ಬೀಡಿ ಬೆಲೆ ಹೆಚ್ಚಿಸುವುದು ಅನಿವಾರ್ಯವಾಗಲಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬೀಡಿ ಉದ್ಯಮಿಯೊಬ್ಬರು ತಿಳಿಸಿದರು.

ಒಂದು ಕೆ.ಜಿ. ತೆಂಡು ಎಲೆಯ ದರವು ₹240 ರಿಂದ ₹340ಕ್ಕೆ ಹೆಚ್ಚಳವಾಗಿದೆ. ಜಿಎಸ್‌ಟಿಯ ಪರಿಣಾಮ ಈ ಬೆಲೆ ₹400ಕ್ಕೆ ಏರಲಿದೆ. ಜತೆಗೆ ತಂಬಾಕು ಸಹ ದುಬಾರಿ ಆಗಲಿದೆ ಎನ್ನುವುದು ಅವರ ವಿವರಣೆ.

ಪರ್ಯಾಯ ವ್ಯವಸ್ಥೆ ಮಾಡಿ:
ಆರೋಗ್ಯಕ್ಕೆ ಹಾನಿಕರ ಎಂದು ಮೊದಲೇ ಬೀಡಿ ಉದ್ಯಮದ ಮೇಲೆ ನಿರ್ಬಂಧಗಳಿವೆ. ಅದರಲ್ಲಿಯೂ ಕಡಿಮೆ ಬೆಲೆಯ ಸಿಗರೇಟ್‌ಗಳ ಪೈಪೋಟಿಯನ್ನು ಈ ಉದ್ಯಮ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಶೇ 28 ರಷ್ಟು ಜಿಎಸ್‌ಟಿ ತೆರಿಗೆ ಹೊರೆಯನ್ನು ಹೆಚ್ಚಿಸಲಿದೆ ಎನ್ನುತ್ತಾರೆ ಎಸ್‌.ಕೆ. ಬೀಡಿ ವರ್ಕರ್ಸ್‌ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ವಿ. ಸೀತಾರಾಮ್‌ ಬೇರಿಂಜ.

ಬೀಡಿ ಕಟ್ಟುವುದು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ಕರಾವಳಿ ಜಿಲ್ಲೆಯ ಪ್ರಮುಖ ವಾಣಿಜ್ಯ ಚಟುವಟಿಕೆ. ಈ ಭಾಗದ ಆರ್ಥಿಕ ಪ್ರಗತಿಗೆ ಬೀಡಿ ಹಾಗೂ ಮೀನುಗಾರಿಕೆಯ ಪಾಲು ಹೆಚ್ಚಾಗಿದೆ. ಈ ಭಾಗದ ಸುಮಾರು 2.5 ಲಕ್ಷ ಕಾರ್ಮಿಕರು ಬೀಡಿ ಉದ್ಯಮದಲ್ಲಿ ದುಡಿಯುತ್ತಿದ್ದಾರೆ. ಸರ್ಕಾರಗಳು ಇಂತಹ ನಿರ್ಧಾರ ತೆಗೆದುಕೊಳ್ಳುವ ಮುನ್ನ, ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಕಲ್ಪಿಸುವ ವ್ಯವಸ್ಥೆ ಮಾಡಬೇಕು ಎನ್ನುವುದು ಬೇರಿಂಜ ಅವರ ಒತ್ತಾಯವಾಗಿದೆ.

‘ಹೆಚ್ಚಿನ ಪಾಲು ಮಹಿಳೆಯರೇ ಈ ಉದ್ಯಮದಲ್ಲಿದ್ದು, ಮನೆಯಲ್ಲಿಯೇ ಕುಳಿತು ಬೀಡಿ ಕಟ್ಟುತ್ತಾರೆ. ಇದರಿಂದಲೇ ಅದೆಷ್ಟೋ ಕುಟುಂಬಗಳು ಎರಡು ಹೊತ್ತಿನ ಊಟ ಕಾಣುತ್ತಿವೆ. ಜಿಎಸ್‌ಟಿ ಜಾರಿಯಾದ ನಂತರ ಬೀಡಿ ಉದ್ಯಮಕ್ಕೆ ಇನ್ನಷ್ಟು ಹೊಡೆತ ಬೀಳಲಿದೆ. ಇಂತಹ ಕಾನೂನುಗಳಿಗೆ ಅಗಾಧ ಸಂಖ್ಯೆಯ ಕಾರ್ಮಿಕರು ಬೀದಿಗೆ ಬೀಳಲಿದ್ದಾರೆ’ ಎಂದು  ಆತಂಕ ವ್ಯಕ್ತಪಡಿಸುತ್ತಾರೆ.

‘ಜಿಎಸ್‌ಟಿಯಲ್ಲಿ ಬೀಡಿಗೆ ಶೇ 28 ರಷ್ಟು ತೆರಿಗೆ ವಿಧಿಸಿರುವುದನ್ನು ನೋಡಿದರೆ, ಕೇಂದ್ರ ಸರ್ಕಾರ ಬೀಡಿ ಉದ್ಯಮವನ್ನು ಮುಚ್ಚುವ ಇರಾದೆ ಹೊಂದಿದಂತೆ ಕಾಣುತ್ತಿದೆ. ಮಹಿಳೆಯರಿಗೆ ಸ್ವ–ಉದ್ಯೋಗ ಕಲ್ಪಿಸುವ ಬೀಡಿ ಉದ್ಯಮಕ್ಕೆ ಜಿಎಸ್‌ಟಿಯಿಂದ ನಿಶ್ಚಿತವಾಗಿಯೂ ಹೊಡೆತ ಬೀಳಲಿದೆ’ ಎನ್ನುವುದು ಸೌತ್  ಕೆನರಾ ಬೀಡಿ ವರ್ಕರ್ಸ್‌ ಯೂನಿಯನ್‌ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ ಅವರ ಅಭಿಪ್ರಾಯವಾಗಿದೆ.
***

ಕೇವಲ ತೆರಿಗೆ ಹೆಚ್ಚಿಸುವುದು ಸರ್ಕಾರದ ಕೆಲಸವಲ್ಲ. ಇದರಿಂದಾಗಿ ಕೆಲಸ ಕಳೆದುಕೊಳ್ಳುವ ಕಾರ್ಮಿಕರಿಗೆ ಪರ್ಯಾಯ ಉದ್ಯೋಗಗಳನ್ನೂ ಕಲ್ಪಿಸಬೇಕು
ವಿ. ಸೀತಾರಾಮ್‌ ಬೇರಿಂಜ,
ಎಸ್‌.ಕೆ. ಬೀಡಿ ವರ್ಕರ್ಸ್‌ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.