ADVERTISEMENT

ಪಿಎನ್‌ಬಿ: ಹೆಚ್ಚಿದ ಸುಸ್ತಿ ಬಾಕಿ

ಪಿಟಿಐ
Published 17 ಜೂನ್ 2018, 18:49 IST
Last Updated 17 ಜೂನ್ 2018, 18:49 IST
ಪಿಎನ್‌ಬಿ: ಹೆಚ್ಚಿದ ಸುಸ್ತಿ ಬಾಕಿ
ಪಿಎನ್‌ಬಿ: ಹೆಚ್ಚಿದ ಸುಸ್ತಿ ಬಾಕಿ   

ನವದೆಹಲಿ: ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ಉದ್ದೇಶಪೂರ್ವಕ ಸುಸ್ತಿದಾರರು ಬಾಕಿ ಉಳಿಸಿಕೊಂಡಿರುವ ಸಾಲದ ಮೊತ್ತದಲ್ಲಿ ಏರಿಕೆಯಾಗುತ್ತಲೇ ಇದೆ.

ಉದ್ದೇಶಪೂರ್ವಕ ಸುಸ್ತಿದಾರರು ಬಾಕಿ ಉಳಿಸಿಕೊಂಡಿರುವ ಮೊತ್ತವು ಮೇ ತಿಂಗಳ ಅಂತ್ಯಕ್ಕೆ ಶೇ 2 ರಷ್ಟು ಹೆಚ್ಚಾಗಿದ್ದು, ₹ 15,490 ಕೋಟಿಗೆ ತಲುಪಿದೆ.

2018ರ ಏಪ್ರಿಲ್‌ನಲ್ಲಿ ಈ ಮೊತ್ತವು ₹ 15,199.57 ಕೋಟಿ ಇತ್ತು.

ADVERTISEMENT

₹ 25 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಸಾಲ ಪಡೆದು, ಮರುಪಾವತಿ ಸಾಮರ್ಥ್ಯ ಇದ್ದರೂ ಹಿಂದಿರುಗಿಸದೇ ಇರುವ ಉದ್ದೇಶಪೂರ್ವಕ ಸುಸ್ತಿದಾರರ ಬಗ್ಗೆ ಬ್ಯಾಂಕ್ ಮಾಹಿತಿ ನೀಡಿದೆ.

2018–18 ನೇ ಹಣಕಾಸು ವರ್ಷದ ಅಂತ್ಯಕ್ಕೆ ಸುಸ್ತಿದಾರರಿಂದ ಬ್ಯಾಂಕ್‌ಗೆ ಬರಬೇಕಿರುವ ಬಾಕಿ ಮೊತ್ತ ₹ 15,172 ಕೋಟಿ ಇತ್ತು.

ವಂಚನೆ ಹಗರಣ: ₹ 13 ಸಾವಿರ ಕೋಟಿಗಳ ವಂಚನೆ ಹಗರಣದಲ್ಲಿ ಸಿಲುಕಿರುವ ಬ್ಯಾಂಕ್‌, ತನ್ನ ಸಾಲದ ಹೊರೆ ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿದೆ. ಹಲವು ಸಂಸ್ಥೆಗಳು ಪ್ರಕರಣದ ತನಿಖೆ ನಡೆಸುತ್ತಿವೆ. ಪರಾರಿಯಾಗಿರುವ ವಜ್ರ ವ್ಯಾಪಾರಿ  ನೀರವ್‌ ಮೋದಿ ಅವರನ್ನು ದೇಶಕ್ಕರೆ ಕರೆತರುವ ಪ್ರಯತ್ನವೂ ನಡೆದಿದೆ.

ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ನಿಂದಲೇ ಪಡೆದಿರುವ ಸಾಲವೂ ಸುಸ್ತಿಯಾಗಿದೆ. ವಿನ್ಸಂ ಡೈಮಂಡ್ಸ್‌ ಆ್ಯಂಡ್‌ ಜುವೆಲರಿ ₹ 899.70 ಕೋಟಿ, ಫಾರೆವರ್‌ ಪ್ರೀಷಿಯ್ಸ್‌ ಡೆವಲಪರ್ಸ್‌ ₹ 410.18 ಕೋಟಿ, ನಾಫೆಡ್‌ ₹ 224.24 ಕೋಟಿ ಹಾಗೂ ಮಹುವಾ ಮೀಡಿಯಾ ಪ್ರವೇಟ್‌ ಲಿಮಿಟೆಡ್‌ ₹ 104.86 ಕೋಟಿ ಸಾಲ ಬಾಕಿ ಉಳಿಸಿಕೊಂಡಿವೆ.

ನಷ್ಟದಲ್ಲಿ ಬ್ಯಾಂಕ್

2017–18ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್‌ನ ನಷ್ಟ ₹ 12,283 ಕೋಟಿ ಇದೆ. 2016–17ನೇ ಹಣಕಾಸು ವರ್ಷದಲ್ಲಿ ₹ 1,325 ಕೋಟಿ ನಿವ್ವಳ ಲಾಭ ಗಳಿಸಿತ್ತು. ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ₹ 13,420 ಕೋಟಿ ನಷ್ಟ ಅನುಭವಿಸಿದೆ. ಬ್ಯಾಂಕ್‌ನ ವಸೂಲಿಯಾಗದ ಸಾಲದ (ಎನ್‌ಪಿಎ) ಪ್ರಮಾಣ  ₹ 32,702 ಕೋಟಿಗಳಿಂದ ₹ 48,684 ಕೋಟಿಗೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.