ADVERTISEMENT

ಪೆಟ್ರೋಲ್‌: ಎಕ್ಸೈಸ್‌ ಡ್ಯೂಟಿ ಕಡಿತ ಇಲ್ಲ

ಬೆಲೆ ಏರಿಕೆಯಿಂದ ಗ್ರಾಹಕರ ಮೇಲಾಗುತ್ತಿರುವ ಪರಿಣಾಮಗಳ ಅರಿವಿದೆ: ಹಸ್ಮುಖ್‌ ಆಧಿಯಾ

ಪಿಟಿಐ
Published 2 ಏಪ್ರಿಲ್ 2018, 19:31 IST
Last Updated 2 ಏಪ್ರಿಲ್ 2018, 19:31 IST
ಪೆಟ್ರೋಲ್‌: ಎಕ್ಸೈಸ್‌ ಡ್ಯೂಟಿ ಕಡಿತ ಇಲ್ಲ
ಪೆಟ್ರೋಲ್‌: ಎಕ್ಸೈಸ್‌ ಡ್ಯೂಟಿ ಕಡಿತ ಇಲ್ಲ   

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ಗಳ ಮೇಲಿನ ಎಕ್ಸೈಸ್‌ ಡ್ಯೂಟಿಯನ್ನು ತಕ್ಷಣಕ್ಕೆ ಕಡಿತಗೊಳಿಸುವುದನ್ನು ಕೇಂದ್ರ ಸರ್ಕಾರ ಸ್ಪಷ್ಟವಾಗಿ ತಳ್ಳಿ ಹಾಕಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರುಗತಿಯಲ್ಲಿ ಇರುವುದರಿಂದ ಇಂಧನ ಬೆಲೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಲೇ ಇವೆ. ಬಳಕೆದಾರರಿಗೆ ಇದರ ಬಿಸಿ ತಗ್ಗಿಸಲು ಎಕ್ಸೈಸ್‌ ಡ್ಯೂಟಿ ತಗ್ಗಿಸಬೇಕಾಗುತ್ತದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು 2014ರ ನವೆಂಬರ್‌ನಿಂದ 2016ರ ಜನವರಿ ಅವಧಿಯಲ್ಲಿ  9 ಬಾರಿ ಎಕ್ಸೈಸ್‌ ಡ್ಯೂಟಿ ಹೆಚ್ಚಿಸಿ ತನ್ನ ಬೊಕ್ಕಸ ಭರ್ತಿ ಮಾಡಿಕೊಂಡಿತ್ತು. 2017ರ ಅಕ್ಟೋಬರ್‌ನಲ್ಲಿ ಮಾತ್ರ ಒಂದು ಬಾರಿ  ಪ್ರತಿ ಲೀಟರ್‌ಗೆ ₹ 2ರಂತೆ ಕಡಿತಗೊಳಿಸಿತ್ತು.

ADVERTISEMENT

ಸರ್ಕಾರವು ಎರಡನೆ ಬಾರಿಗೆ ತೆರಿಗೆ ಕಡಿತ ಮಾಡುವ ಸಾಧ್ಯತೆ ಇದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಹಣಕಾಸು ಕಾರ್ಯದರ್ಶಿ ಹಸ್ಮುಖ್‌ ಆಧಿಯಾ ಅವರು, ‘ಸದ್ಯಕ್ಕಂತೂ ಅಂತಹ ಪ್ರಸ್ತಾವ ಇಲ್ಲ. ಆ ನಿರ್ಧಾರ ಕೈಗೊಂಡಾಗ ನಿಮ್ಮ ಗಮನಕ್ಕೆ ತರಲಾಗುವುದು’ ಎಂದು ವರದಿಗಾರರಿಗೆ ಉತ್ತರಿಸಿದ್ದಾರೆ.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ಬೆಲೆ ಏರಿಕೆ ಪರಿಸ್ಥಿತಿಯನ್ನು ಸರ್ಕಾರ ಗಮನಿಸುತ್ತಿದೆ’ ಎಂದು ಹೇಳಿರುವ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌, ‘ಮುಕ್ತ ಮಾರುಕಟ್ಟೆಯ ಬೆಲೆ ನಿರ್ಧಾರ ವ್ಯವಸ್ಥೆಯಿಂದ ಹಿಂದೆ ಸರಿಯುವ ಹಾಗೂ ಮತ್ತೆ ಸರ್ಕಾರದ ನಿಯಂತ್ರಣಕ್ಕೆ ಒಳಪಡಿಸುವ ಯಾವುದೇ ಉದ್ದೇಶ ಇಲ್ಲ’ ಎಂದು ಹೇಳಿದ್ದಾರೆ.

‘ಪೆಟ್ರೋಲ್‌ ಮತ್ತು ಡೀಸೆಲ್‌ಗಳನ್ನು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ತಂದರೆ ಗ್ರಾಹಕರಿಗೆ ಬೆಲೆ ಕಡಿತದ ಪ್ರಯೋಜನ ಲಭಿಸಲಿದೆ. ಜಾಗತಿಕ ಪೇಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳಗೊಂಡಾಗ ಸಹಜವಾಗಿಯೇ ಗ್ರಾಹಕರಿಗೆ ಅದರ ಬಿಸಿ ತಟ್ಟಲಿದೆ. ಬೆಲೆ ಏರಿಕೆಯಿಂದ ಗ್ರಾಹಕರ ಮೇಲೆ ಆಗುತ್ತಿರುವ ಪರಿಣಾಮಗಳ ಅರಿವು ನಮಗೆ ಇದೆ’ ಎಂದು ಹೇಳಿದ್ದಾರೆ.

ಬೆಲೆ ಹೆಚ್ಚಳದ ಹೊರೆ ಕಡಿಮೆ ಮಾಡಲು ಎಕ್ಸೈಸ್‌ ಡ್ಯೂಟಿ ತಗ್ಗಿಸುವ ಸಾಧ್ಯತೆಯನ್ನೂ ಅವರು ತಳ್ಳಿಹಾಕಿದ್ದಾರೆ. ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಭಿವೃದ್ಧಿ ಯೋಜನೆಗಳಿಗಾಗಿ ತೆರಿಗೆ ವರಮಾನವನ್ನೇ ಹೆಚ್ಚಾಗಿ ಅವಲಂಬಿಸಿರುತ್ತವೆ. ಇಂಧನಗಳ ಮೇಲಿನ ಎಕ್ಸೈಸ್‌ ಡ್ಯೂಟಿಯಲ್ಲಿನ ಶೇ 42 ವರಮಾನವು ರಾಜ್ಯಗಳಿಗೆ ಹಂಚಿಕೆಯಾಗುತ್ತದೆ. ಉಳಿದ ಮೊತ್ತವು ರಾಜ್ಯಗಳಲ್ಲಿನ ಅಭಿವೃದ್ಧಿ ಯೋಜನೆಗಳಲ್ಲಿನ ಕೇಂದ್ರದ ಪಾಲು ಭರಿಸಲು ವಿನಿಯೋಗ ಆಗುತ್ತದೆ’ ಎಂದು ವಿವರಿಸಿದ್ದಾರೆ.

ಬೆಲೆ ಹೆಚ್ಚಳ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಸೋಮವಾರ ಪೆಟ್ರೋಲ್‌ ಮತ್ತು ಡೀಸೆಲ್‌ಗಳ ಪ್ರತಿ ಲೀಟರ್‌ ಬೆಲೆಯನ್ನು ಕ್ರಮವಾಗಿ 10 ಪೈಸೆ ಮತ್ತು 11 ಪೈಸೆಗಳಷ್ಟು ಹೆಚ್ಚಿಸಿವೆ.

**

ಇಂಧನಗಳ ಬೆಲೆಯನ್ನು ಪಾರದರ್ಶಕವಾಗಿ ನಿರ್ಧರಿಸಲಾಗುತ್ತಿದೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳ ಇಲ್ಲಿಯೂ ಪ್ರತಿಫಲನಗೊಳ್ಳುತ್ತಿದೆ
– ಧರ್ಮೇಂದ್ರ ಪ್ರಧಾನ್‌, ಪೆಟ್ರೋಲಿಯಂ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.