ADVERTISEMENT

ಪೆಟ್ರೋಲ್‌, ಡೀಸೆಲ್‌ ದರ ಗರಿಷ್ಠ ಮಟ್ಟಕ್ಕೆ

ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಇಂಧನ ದರ

ಪಿಟಿಐ
Published 20 ಮೇ 2018, 19:30 IST
Last Updated 20 ಮೇ 2018, 19:30 IST
ಪೆಟ್ರೋಲ್‌, ಡೀಸೆಲ್‌ ದರ ಗರಿಷ್ಠ ಮಟ್ಟಕ್ಕೆ
ಪೆಟ್ರೋಲ್‌, ಡೀಸೆಲ್‌ ದರ ಗರಿಷ್ಠ ಮಟ್ಟಕ್ಕೆ   

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಜಿಗಿದಿವೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಭಾನುವಾರ ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 33 ಪೈಸೆ ಮತ್ತು ಡೀಸೆಲ್‌ ದರ 26 ಪೈಸೆ ಏರಿಕೆ ಮಾಡಿವೆ. ಇದರಿಂದ  ಪೆಟ್ರೋಲ್‌ನ ಪ್ರತಿ ಲೀಟರ್‌ ಮಾರಾಟ ದರ ₹ 76.24 ಮತ್ತು ಡೀಸೆಲ್‌ ₹ 67.57ಕ್ಕೆ ಏರಿಕೆ ಕಂಡಿವೆ. ಈ ಹಿಂದೆ 2013ರ ಸೆಪ್ಟೆಂಬರ್‌ 14 ರಂದು ಪೆಟ್ರೋಲ್‌ ₹ 76.06ಕ್ಕೆ ತಲುಪಿತ್ತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ನಾಲ್ಕು ವಾರಗಳಿಂದ ಕಚ್ಚಾ ತೈಲ ದರದಲ್ಲಿ ಏರಿಕೆಯಾಗುತ್ತಲೇ ಇದೆ. ಹೀಗಾಗಿ ದರ ಹೆಚ್ಚಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಪ್ರಕಟಣೆಯಲ್ಲಿ ತಿಳಿಸಿವೆ.

ADVERTISEMENT

ರಾಜ್ಯಗಳಲ್ಲಿ ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ವಿಧಿಸುವುದರಿಂದ ಇಂಧನ ದರದಲ್ಲಿ ವ್ಯತ್ಯಾಸವಾಗುತ್ತದೆ. ಸ್ಥಳೀಯ ತೆರಿಗೆಗಳು ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಮುಂಬೈನಲ್ಲಿ ಪೆಟ್ರೋಲ್‌ ದರ ₹ 84.07ಕ್ಕೆ ತಲುಪಿದೆ. ಭೋಪಾಲ್‌, ಪಟ್ನಾ, ಹೈದರಾಬಾದ್‌ ಮತ್ತು ಶ್ರೀನಗರಗಳಲ್ಲಿಯೂ
₹ 80ರ ಗಡಿ ದಾಟಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಕಾರಣದಿಂದ ದರ ಪರಿಷ್ಕರಣೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು.

ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ದರಗಳಲ್ಲಿ ಏರಿಕೆಯಾಗಿದೆ

ಮೇ 13 ರಿಂದ ಮೇ 20ರವರೆಗೆ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಕ್ರಮವಾಗಿ ₹ 1.66 ಪೈಸೆ ಮತ್ತು ₹ 1.69 ಪೈಸೆ ಹೆಚ್ಚಾಗಿದೆ. ಇದರಿಂದ ಭಾನುವಾರ ಪೆಟ್ರೋಲ್ ಮತ್ತು ಡೀಸೆಲ್‌ ದರಗಳು ಪ್ರತಿ ಲೀಟರಿಗೆ ಕ್ರಮವಾಗಿ ₹ 77.48 ಮತ್ತು ₹ 68.73ಕ್ಕೆ ಏರಿಕೆ ಕಂಡಿವೆ.

ಒಂದೇ ದಿನ ಪೆಟ್ರೋಲ್ 33 ಪೈಸೆ ಮತ್ತು ಡೀಸೆಲ್‌ 26 ‍ಪೈಸೆ ಏರಿಕೆ

ಕರ್ನಾಟಕ ಚುನಾವಣೆ ಬಳಿಕ ಮತ್ತೆ ನಿತ್ಯವೂ ದರ ಪರಿಷ್ಕರಣೆ

ಮೇ 14 ರಿಂದ ಮೇ 20ರವರೆಗೆ 7 ಬಾರಿ ದರ ಏರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.