ADVERTISEMENT

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ

ಪಿಟಿಐ
Published 14 ಮೇ 2018, 19:57 IST
Last Updated 14 ಮೇ 2018, 19:57 IST
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ   

ನವದೆಹಲಿ: ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದ ಕಾರಣಕ್ಕೆ ಸ್ಥಗಿತಗೊಳಿಸಲಾಗಿದ್ದ ಪೆಟ್ರೋಲ್‌, ಡೀಸೆಲ್‌ ಬೆಲೆಗಳನ್ನು ಸೋಮವಾರ ಹೆಚ್ಚಿಸಲಾಗಿದೆ.

ಪೆಟ್ರೋಲ್‌ ಪ್ರತಿ ಲೀಟರ್‌ ಬೆಲೆ 17 ಪೈಸೆ ಮತ್ತು ಡೀಸೆಲ್‌ ಬೆಲೆಯನ್ನು 21 ಪೈಸೆಗಳಷ್ಟು ಹೆಚ್ಚಿಸಲಾಗಿದೆ.

ಇದುವರೆಗೆ ತಡೆಹಿಡಿದಿದ್ದ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಹೆಚ್ಚಳದ ಹೊರೆಯನ್ನು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಮತ್ತೆ ಈಗ ಗ್ರಾಹಕರಿಗೆ ವರ್ಗಾಯಿಸಲು ಮುಂದಾಗಿವೆ.

ADVERTISEMENT

ಬೆಲೆ ಹೆಚ್ಚಳದಿಂದ ಈ ಎರಡೂ ಇಂಧನಗಳ ಬೆಲೆಗಳು ಈಗ 56 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದಂತಾಗಿದೆ.

ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿದ್ದ ಕಾರಣಕ್ಕೆ ತೈಲ ಮಾರಾಟ ಸಂಸ್ಥೆಗಳು ಮೂರು ವಾರಗಳ ಕಾಲ ಬೆಲೆ ಏರಿಕೆ ಮಾಡಲು ಮುಂದಾಗಿರಲಿಲ್ಲ. ತೈಲ ಬೆಲೆ ಹೆಚ್ಚಳ ಮತ್ತು ಡಾಲರ್‌ ಎದುರು ರೂಪಾಯಿ ವಿನಿಮಯ ದರ ಕುಸಿತದ ಕಾರಣಕ್ಕೆ ₹ 500 ಕೋಟಿಗಳಷ್ಟು ನಷ್ಟಕ್ಕೆ ಗುರಿಯಾಗಿವೆ ಎಂದು ಅಂದಾಜಿಸಲಾಗಿದೆ.

ಚುನಾವಣೆಯಲ್ಲಿ ಬಿಜೆಪಿ ಮೇಲೆ ವ್ಯತಿರಿಕ್ತ ಪ್ರಭಾವ ಬೀರಬಾರದು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರವು ಬೆಲೆ ಏರಿಕೆ ತಡೆಹಿಡಿಯಲು ಸೂಚಿಸಿತ್ತು ಎಂದು ವರದಿಯಾಗಿತ್ತು. ಈ ವರದಿಯನ್ನು ತೈಲ ಮಾರಾಟ ಸಂಸ್ಥೆಗಳು ತಳ್ಳಿ ಹಾಕಿದ್ದವು.

‘ಜಾಗತಿಕ ಮಾರುಕಟ್ಟೆಯಲ್ಲಿನ ಇಂಧನ ಬೆಲೆಗಳ ಹಠಾತ್‌ ಏರಿಕೆಯಿಂದ ಬಳಕೆದಾರರು ಆತಂಕಕ್ಕೆ ಒಳಗಾಗಬಾರದು ಎನ್ನುವ ಕಾರಣಕ್ಕಾಗಿ ಬೆಲೆ ಏರಿಕೆ ಮಾಡುತ್ತಿಲ್ಲ’ ಎಂದು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ಅಧ್ಯಕ್ಷ ಸಂಜೀವ್‌ ಸಿಂಗ್‌ ಅವರು ಹೇಳಿಕೊಂಡಿದ್ದರು.

ಇಂಧನ ಬೇಡಿಕೆ ಹೆಚ್ಚಳ

ಏಪ್ರಿಲ್‌ ತಿಂಗಳಿನಲ್ಲಿ ಇಂಧನದ ಬೇಡಿಕೆಯು ಶೇ 4.4ರಷ್ಟು ಹೆಚ್ಚಳಗೊಂಡಿದೆ. ವಾಹನಗಳ ಇಂಧನ ಮತ್ತು ಅಡುಗೆ ಅನಿಲ (ಎಲ್‌ಪಿಜಿ) ಬಳಕೆ ಹೆಚ್ಚಳಗೊಂಡಿದ್ದರಿಂದ ಈ ಏರಿಕೆ ಕಂಡು ಬಂದಿದೆ.

1.76 ಕೋಟಿ ಟನ್‌ಗಳಷ್ಟು ಇಂಧನ ಬಳಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1.69 ಕೋಟಿ ಟನ್‌ ಬಳಕೆಯಾಗಿತ್ತು. ಪೆಟ್ರೋಲ್‌  22 ಲಕ್ಷ ಟನ್‌ ಮತ್ತು ಡೀಸೆಲ್‌ 71 ಲಕ್ಷ ಟನ್‌ಗಳಷ್ಟು ಮಾರಾಟವಾಗಿದೆ.

ವಿಮಾನ ಇಂಧನವು 6.92 ಲಕ್ಷ ಟನ್‌ಗಳಷ್ಟು ಬಳಕೆಯಾಗಿದೆ. ಅಡುಗೆ ಅನಿಲ ಬಳಕೆಯು ಶೇ 13ರಷ್ಟು ಹೆಚ್ಚಾಗಿ 18 ಲಕ್ಷ ಟನ್‌ಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.