ADVERTISEMENT

ಪ್ಯಾನ್ ನಮೂದು ಕಡ್ಡಾಯ

ವಿಶ್ವನಾಥ ಬಸವನಾಳಮಠ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ಈಗಂತೂ ಪ್ಯಾನ್ (ಪರ್ಮನೆಂಟ್ ಅಕೌಂಟ್ ನಂಬರ್) ಎಲ್ಲ  ಬಗೆಯ ವಹಿವಾಟುಗಳಿಗೂ ಕಡ್ಡಾಯವಾಗುತ್ತಿದೆ. ಇದಕ್ಕೆ ಇತ್ತೀಚಿನ ಸೇರ್ಪಡೆ ಜೀವವಿಮೆ ಪ್ರೀಮಿಯಂ ಪಾವತಿ.

ನೀವು ರೂ50 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಪ್ರೀಮಿಯಂ ಅನ್ನು ನಗದು ರೂಪದಲ್ಲಿ ಪಾವತಿಸುವವರಾಗಿದ್ದರೆ ಪ್ಯಾನ್ ನಮೂದಿಸುವುದನ್ನು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಕಡ್ಡಾಯಗೊಳಿಸಿದೆ.

ಯಾವ ಮೂಲದಿಂದ ಪ್ರೀಮಿಯಂ ಹಣ ಕಟ್ಟಲಾಗಿದೆ ಎಂಬುದನ್ನು ನಿಖರವಾಗಿ ಪತ್ತೆ ಹಚ್ಚಲು `ಐಆರ್‌ಡಿಎ~ ಈ ಕ್ರಮ ಕಡ್ಡಾಯಗೊಳಿಸಿದೆ. ನವೆಂಬರ್ 1 ರಿಂದಲೇ ಇದು ಜಾರಿಗೆ ಬಂದಿದೆ.  5 ಲಕ್ಷಕ್ಕಿಂತಲೂ ಹೆಚ್ಚು ಮೌಲ್ಯದ ಚಿನ್ನ ಖರೀದಿಸುವಾಗ ಪ್ಯಾನ್ ಒದಗಿಸುವುದನ್ನೂ ಈಚೆಗಷ್ಟೇ ಕಡ್ಡಾಯಗೊಳಿಸಲಾಗಿದೆ. ನೀವು ಬ್ಯಾಂಕ್ ಒಂದರಲ್ಲಿ ಡೆಬಿಟ್ ಕಾರ್ಡ್ ಪಡೆಯಬೇಕಿದ್ದರೂ ಪ್ಯಾನ್ ಬೇಕೇ ಬೇಕು.

ಇವಲ್ಲದೇ ಕಡ್ಡಾಯವಾಗಿ ಪ್ಯಾನ್ ಒದಗಿಸಬೇಕಿರುವ ದೈನಂದಿನ ಇತರ ಪ್ರಮುಖ ವಹಿವಾಟುಗಳೆಂದರೆ-್ಙ5 ಲಕ್ಷ ಅಥವಾ ಅದಕ್ಕೂ ಹೆಚ್ಚಿನ ಆಸ್ತಿಯ ಖರೀದಿ ಅಥವಾ ಮಾರಾಟ. ದ್ವಿಚಕ್ರ ವಾಹನ ಹೊರತುಪಡಿಸಿ ಇತರ ವಾಹನಗಳ ಖರೀದಿ ಅಥವಾ ಮಾರಾಟ. ರೂ50 ಸಾವಿರಕ್ಕಿಂತಲೂ ಹೆಚ್ಚಿನ ಮೊತ್ತದ ಬ್ಯಾಂಕ್ ಠೇವಣಿ. ರೂ 25 ಸಾವಿರಕ್ಕಿಂತಲೂ ಹೆಚ್ಚಿನ ಮೊತ್ತದ ಹೊಟೆಲ್ ಶುಲ್ಕ ಪಾವತಿ, ರೂ50 ಸಾವಿರಕ್ಕಿಂತ ಹೆಚ್ಚಿನ ಮ್ಯೂಚುವಲ್ ಫಂಡ್ ಹೂಡಿಕೆ.

ಕೆಲ ದಿನಗಳ ಹಿಂದೆ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು ನೀವು ಪ್ಯಾನ್ ಒದಗಿಸದಿದ್ದರೆ ಮೂಲ ಆದಾಯಕ್ಕೆ ತೆರಿಗೆ (ಟಿಡಿಎಸ್) ರೂಪವಾಗಿ ಇಲಾಖೆ ನಿಮಗೆ ಶೇ20 ರಷ್ಟು ತೆರಿಗೆ ವಿಧಿಸಬಹುದು. ಸಾಮಾನ್ಯವಾಗಿ ಟಿಡಿಎಸ್ ದರ ಶೇ2 ರಿಂದ ಶೇ10.

ಒಂದುವೇಳೆ ವ್ಯಕ್ತಿಯೊಬ್ಬ ಇನ್ನೊಬ್ಬರಿಗೆ ಬಡ್ಡಿ ನೀಡುವಾಗ, ಬಾಡಿಗೆ ನೀಡುವಾಗ, ಅಥವಾ ವೃತ್ತಿಪರ ಸೇವೆಗಳನ್ನು ಒದಗಿಸುವಾಗ ಪ್ಯಾನ್ ನಮೂದಿಸದಿದ್ದರೆ ಗರಿಷ್ಠ ಮೊತ್ತದ (ಶೇ20) ಟಿಡಿಎಸ್ ತೆರಬೇಕಾದ್ದು ಅನಿವಾರ್ಯ.

ಏನಿದು ಪ್ಯಾನ್‌ನಂಬರ್?
10 ಸಂಖ್ಯಾಕ್ಷರ (ಅಕ್ಷರ ಮತ್ತು ಸಂಖ್ಯೆ)ಗಳನ್ನೊಳಗೊಂಡ ಗುರುತಿನ ಪತ್ರವೇ ಪ್ಯಾನ್. ಇದನ್ನು `ಯುಟಿಐ~ ಮತ್ತು ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಟರೀಸ್ ಸಹಯೋಗದೊಂದಿಗೆ  ಆದಾಯ ತೆರಿಗೆ ಇಲಾಖೆ ನೀಡುತ್ತದೆ. ಪ್ಯಾನ್ ಪಡೆಯುವುದು ತುಂಬಾ ಸರಳ.

ಪ್ಯಾನ್ ಅರ್ಜಿ 49ಎ ಯನ್ನು ಭರ್ತಿ ಮಾಡಿ, ನಿಮ್ಮ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಅಗತ್ಯ ದಾಖಲೆಗಳನ್ನು ಒದಗಿಸಿ, ನಿಗದಿತ ಶುಲ್ಕ ಭರಿಸಿದರೆ 30 ರಿಂದ 45 ದಿನಗಳಲ್ಲಿ ಪ್ಯಾನ್ ಕಾರ್ಡ್ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ಪ್ಯಾನ್ ಅರ್ಜಿಯಲ್ಲಿ ನೀವು ನೌಕರರಾಗಿದ್ದರೆ ನಿಮ್ಮ ಹುದ್ದೆ ಅಥವಾ ಸ್ವ ಉದ್ಯೋಗಿಯಾಗಿದ್ದರೆ ಆ ಸಂಬಂಧ ವಿವರಗಳನ್ನು ಭರ್ತಿ ಮಾಡಬೇಕು. ಆದಾಯ ತೆರಿಗೆ ಪಾವತಿಸುವ ಕೇಂದ್ರದ ಸಂಕೇತವನ್ನು ಒದಗಿಸಿರಬೇಕು. ಅರ್ಜಿಯ ಜೊತೆ ನಿಮ್ಮ ಗುರುತು ಮತ್ತು ವಿಳಾಸದ ದಾಖಲೆಯ ಛಾಯಾಪ್ರತಿ ಒದಗಿಸಬೇಕು.

ಆದಾಯ ತೆರಿಗೆ ಇಲಾಖೆ ಈ ವರೆಗೆ ಸುಮಾರು ಒಂದು ಕೋಟಿ ಪ್ಯಾನ್ ಕಾರ್ಡ್‌ಗಳನ್ನು ಒದಗಿಸಿದೆ. ಈ ಇಲಾಖೆಯ ಜೊತೆಗಿನ ಪ್ರತಿಯೊಂದು ಸಂವಹನಕ್ಕೂ (ತೆರಿಗೆ ಪಾವತಿ, ಚಲನ್ ಮತ್ತು ಇತರೆ)  ಪ್ಯಾನ್ ನಮೂದಿಸುವುದು ಕಡ್ಡಾಯವಾಗಿರುವುದರಿಂದ ಪ್ರತಿದಿನ ಸಾವಿರಾರು ಜನ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ವ್ಯಕ್ತಿಯ ಆದಾಯದ ಜೊತೆಗೆ ಆತನ ಖರ್ಚನ್ನು ತಾಳೆಹಾಕಲು ಆದಾಯ ತೆರಿಗೆ ಇಲಾಖೆಗೆ ಪ್ಯಾನ್ ಸಹಾಯ ಮಾಡುತ್ತದೆ. ಒಂದುವೇಳೆ ವ್ಯಕ್ತಿಯೊಬ್ಬ ತನ್ನ ಆದಾಯಕ್ಕೂ ಮೀರಿ ಖರ್ಚು ಮಾಡುತ್ತಿದ್ದರೆ ಅದು ತೆರಿಗೆ ಇಲಾಖೆಯ ಗಮನಕ್ಕೆ ಬರುತ್ತದೆ.

ಇಂದು ಪ್ರತಿಯೊಂದು ವಹಿವಾಟಿಗೂ ಪ್ಯಾನ್ ಕಡ್ಡಾಯ. ನಿಮ್ಮ ಬಳಿ ಪ್ಯಾನ್ ಕಾರ್ಡ್ ಇಲ್ಲದಿದ್ದರೆ ಇಂದೇ ಅರ್ಜಿ ಸಲ್ಲಿಸಿ. ಆದರೆ ಒಂದು ಮಾತು ನೆನಪಿರಲಿ, ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿರುವುದು ಕಾನೂನು ಪ್ರಕಾರ ಅಪರಾಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.