ADVERTISEMENT

ಪ್ರಯಾಣಿಕ ಕಾರು ಮಾರಾಟ ಹೆಚ್ಚಳ

ಪಿಟಿಐ
Published 9 ಅಕ್ಟೋಬರ್ 2017, 19:30 IST
Last Updated 9 ಅಕ್ಟೋಬರ್ 2017, 19:30 IST
ಪ್ರಯಾಣಿಕ ಕಾರು ಮಾರಾಟ ಹೆಚ್ಚಳ
ಪ್ರಯಾಣಿಕ ಕಾರು ಮಾರಾಟ ಹೆಚ್ಚಳ   

ನವದೆಹಲಿ: ದೇಶದಲ್ಲಿ ಪ್ರಯಾಣಿಕ ವಾಹನ ಮಾರಾಟ ಸೆಪ್ಟೆಂಬರ್‌ನಲ್ಲಿ ಶೇ 11.32 ರಷ್ಟು ಹೆಚ್ಚಾಗಿದ್ದು, ಒಟ್ಟಾರೆ 3.09 ಲಕ್ಷ ವಾಹನಗಳು ಮಾರಾಟವಾಗಿವೆ.

ಕಾರು ಮಾರಾಟವೂ 1.95 ಲಕ್ಷದಿಂದ 2.08 ಲಕ್ಷಕ್ಕೆ ಶೇ 6.86 ರಷ್ಟು ಏರಿಕೆ ಕಂಡಿದೆ. ಒಟ್ಟಾರೆ ವಾಹನ ಮಾರಾಟವು ಸೆಪ್ಟೆಂಬರ್‌ನಲ್ಲಿ ಶೇ 10 ರಷ್ಟು ಪ್ರಗತಿ ದಾಖಲಿಸಿದೆ ಎಂದು ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ (ಎಸ್‌ಐಎಎಂ) ಮಾಹಿತಿ ನೀಡಿದೆ.

ನೋಟು ರದ್ದತಿ, ಬಿಎಸ್–4 ನಿಯಮ ಹಾಗೂ ಜಿಎಸ್‌ಟಿ ಜಾರಿಯಿಂದ ವಾಹನ ಉದ್ಯಮ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿತ್ತು. ಇದೀಗ ಚೇತರಿಕೆ ಹಾದಿ ಹಿಡಿದಿದೆ. ಮುಂದಿನ ದಿನಗಳಲ್ಲಿ ಉತ್ತಮ ಪ್ರಗತಿ ಕಾಣುವ ನಿರೀಕ್ಷೆ ಇದೆ ಎಂದು ಎಸ್‌ಐಎಎಂ ಅಧ್ಯಕ್ಷ ಅಭಯ್ ಫಿರೋಡಿಯಾ ಹೇಳಿದ್ದಾರೆ.

ADVERTISEMENT

ವಾಹನ ತಯಾರಿಕೆಯಲ್ಲಿ ದೇಶದ ಅತಿ ದೊಡ್ಡ ಕಂಪೆನಿ ಆಗಿರುವ ಮಾರುತಿ ಸುಜುಕಿ ಇಂಡಿಯಾ ಸಪ್ಟೆಂಬರ್‌ನಲ್ಲಿ 1.63 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳ ಮಾರಾಟಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಶೇ 9.3 ರಷ್ಟು ಮಾರಾಟ ಪ್ರಗತಿ ದಾಖಲಿಸಿದೆ.

ಯುಟಿಲಿಟಿ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಆ್ಯಂಡ್ ಮಹೀಂದ್ರಾ 53,663 ವಾಹನಗಳನ್ನು ಮಾರಾಟ ಮಾಡಿದ್ದು, ಶೇ 16 ರಷ್ಟು ಮಾರಾಟ ಪ್ರಗತಿ ದಾಖಲಿಸಿದೆ.

ಪ್ರಯಾಣಿಕ ವಾಹನಗಳಾದ ಸ್ಕಾರ್ಪಿಯೊ, ಎಕ್ಸ್‌ಯುವಿ500, ಕ್ಸೈಲೊ, ಬೊಲೊರೊ ಮತ್ತು ವೆರಿಟೊ ಮಾರಾಟ ಶೇ 23 ರಷ್ಟು ಹೆಚ್ಚಾಗಿದೆ. ಅಂತೆಯೇ ವಾಣಿಜ್ಯ ವಾಹನ ಮಾರಾಟ ಶೇ 19 ರಷ್ಟು ಏರಿಕೆ ಕಂಡಿದೆ. ಕಂಪೆನಿಯ ರಫ್ತು ವಹಿವಾಟು ಶೇ 11 ರಷ್ಟು ಇಳಿಕೆಯಾಗಿದೆ.

ಹಬ್ಬದ ಸಂದರ್ಭ ಹತ್ತಿರ ಬರುತ್ತಿರುವುದರಿಂದ ನಗರ ಮತ್ತು ಗ್ರಾಮೀಣ ಭಾಗದಿಂದ ವಾಹನ ಖರೀದಿಸುವವರ ಸಂಖ್ಯೆ ಹೆಚ್ಚುತ್ತಿದೆ. ಸ್ಕಾರ್ಪಿಯೊ ಅತಿ ಹೆಚ್ಚು ಮಾರಾಟವಾಗಿದೆ ಎಂದು ಕಂಪೆನಿ ಅಧ್ಯಕ್ಷ ರಾಜನ್‌ ವಧೇರಾ ತಿಳಿಸಿದ್ದಾರೆ.

ಹೋಂಡಾ ಕಾರ್ಸ್ ಇಂಡಿಯಾದ ದೇಶಿ ಮಾರಾಟ ಶೇ 21 ರಷ್ಟು ಏರಿಕೆಯಾಗಿದೆ. ಅದರಲ್ಲಿ ಬ್ರಿಯೊ 504, ಜಾಜ್‌ 3,001, ಅಮೇಜ್‌ 2,561 ಹಾಗೂ ಸೆಡಾನ್ ಸಿಟಿ 6,010 ರಷ್ಟಿದೆ.

ಹೋಂಡಾ ಸಿಟಿ ಮತ್ತು ಡಬ್ಲ್ಯುಆರ್‌–ವಿ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ. ಇದರಿಂದ ಒಟ್ಟಾರೆ ಮಾರಾಟದಲ್ಲಿ ಹೆಚ್ಚಳವಾಗಿದೆ ಎಂದು ಅಧ್ಯಕ್ಷ ಯೊಚಿರೊ ಯುನೊ ತಿಳಿಸಿದ್ದಾರೆ.

ದ್ವಿಚಕ್ರ ವಾಹನ:  ಮೋಟಾರ್‌ ಸೈಕಲ್ಸ್ ಮಾರಾಟ ಶೇ 6.98 ರಷ್ಟು ಹೆಚ್ಚಾಗಿದ್ದು, 12.69 ಲಕ್ಷಕ್ಕೆ ತಲುಪಿದೆ. ದ್ವಿಚಕ್ರ ವಾಹನ ಮಾರಾಟ ಶೇ 9.05 ರಷ್ಟು, ವಾಣಿಜ್ಯ ಬಳಕೆ ವಾಹನಗಳ ಮಾರಾಟ ಶೇ 25.27ರಷ್ಟು ಏರಿಕೆಯಾಗಿವೆ.

ಹೀರೊ ಮೋಟೊಕಾರ್ಪ್‌ ಶೇ 7.77 ರಷ್ಟು ಮಾರಾಟ ಪ್ರಗತಿ ದಾಖಲಿಸಿದೆ. ಬಜಾಜ್ ಅಟೊ ಶೇ 7.34 ರಷ್ಟು, ಹೋಂಡಾ ಮೋಟಾರ್ ಸೈಕಲ್‌ ಆ್ಯಂಡ್ ಸ್ಕೂಟರ್‌ ಇಂಡಿಯಾದ ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ. ಟಿವಿಎಸ್‌ ಮೋಟಾರ್‌ ಕಂಪೆನಿ
ಶೇ 50.47 ರಷ್ಟು ಪ್ರಗತಿ ಸಾಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.