ADVERTISEMENT

ಪ್ರಶ್ನೋತ್ತರ...

ಯು.ಪಿ.ಪುರಾಣಿಕ್
Published 17 ಏಪ್ರಿಲ್ 2012, 19:30 IST
Last Updated 17 ಏಪ್ರಿಲ್ 2012, 19:30 IST

ನಂದಿನಿ ಪಿ. ದೀವಗಿ, ಮುರ್ಡೇಶ್ವರ
ಪ್ರಶ್ನೆ: ನಾನು ಒಂದು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ತಿಂಗಳ ವರಮಾನ ರೂ. 3,750 ಅದರಲ್ಲಿ ಪಿ.ಎಫ್. ಕಟ್ಟಾಗಿ ತಿಂಗಳಿಗೆ 3,390 ಸಿಗುತ್ತದೆ. ಇದೇ ಹಣದಲ್ಲಿ ನಮ್ಮ ಮೂವರ ಜೀವನ ಆಗಬೇಕು. ಸದ್ಯ ಪೋಸ್ಟ್ ಆಫೀಸಿನಲ್ಲಿ ರೂ. 100 ತುಂಬುವ ಆರ್.ಡಿ. ಮಾಡಿದ್ದೇನೆ. ನನಗೆ ಒಂದೂವರೆ ವರ್ಷದ ಮಗಳಿದ್ದಾಳೆ. ನಾನು ತಿಂಗಳಿಗೆ 600-700 ಉಳಿಸಬೇಕೆಂದಿದ್ದೇನೆ. ನಮ್ಮ ಆಸ್ಪತ್ರೆಯ ಹತ್ತಿರ, ಸ್ಟೇಟ್ ಬ್ಯಾಂಕ್, ವಿಜಯಾ ಬ್ಯಾಂಕ್ ಹಾಗೂ ಸಿಂಡಿಕೇಟ್ ಬ್ಯಾಂಕ್ ಇರುತ್ತದೆ. ನನ್ನಂತಹ ಚಿಕ್ಕ ಸಂಬಳ ಬರುವವರಿಗೆ ಉಪಯೋಗವಾಗುವಂತೆ, ಉತ್ತಮ ಉಳಿತಾಯ ಮಾರ್ಗ ತಿಳಿಸಿರಿ.
ಉತ್ತರ: ನೀವು ಉಳಿಸಬಹುದಾದ ರೂ. 600-700 ನಿಮ್ಮ ಆಸ್ಪತ್ರೆಗೆ ಸಮೀಪವಿರುವ ಮೂರು ಬ್ಯಾಂಕುಗಳಲ್ಲಿ ಯಾರು ಠೇವಣಿ ಮೇಲೆ ಹೆಚ್ಚಿಗೆ ಬಡ್ಡಿ ಕೊಡುತ್ತಾರೆ ಎಂಬುದನ್ನು ವಿಚಾರಿಸಿ ಆ ಬ್ಯಾಂಕಿನಲ್ಲಿ ರೂ. 700 ಆರ್.ಡಿ. ಮಾಡಿ ಪ್ರತಿ ತಿಂಗಳೂ ತುಂಬುತ್ತಾ ಬನ್ನಿ ಈ ಖಾತೆಯ ಅವಧಿ 5 ವರ್ಷಗಳಿಗಿರಲಿ. 5 ವರ್ಷಗಳ ನಂತರ ಈ ಠೇವಣಿಯಿಂದ ನೀವು ರೂ. 54,000 ಪಡೆಯುತ್ತೀರಿ.

ಹಾಗೆಯೇ ಪುನಹ ಹೊಸ ಆರ್.ಡಿ. ಪ್ರಾರಂಭಿಸಿರಿ. ಜೊತೆಗೆ ಈಗ ಬಂದಿರುವ ರೂ. 54,000 ಒಮ್ಮೆಲೇ ಅಸಲು ಬಡ್ಡಿ ಬರುವ ನಗದು ಸರ್ಟಿಫಿಕೇಟು ಠೇವಣಿಯಲ್ಲಿ 5 ವರ್ಷಗಳ ಅವಧಿಗೆ ಇರಿಸಿರಿ. ಈ ಠೇವಣಿ ರೂ. 54,000. 5 ವರ್ಷಗಳಲ್ಲಿ ರೂ. 86,500 ವಾಗುತ್ತದೆ. ನಾನು ತಿಳಿಸಿದಂತೆ ಹೀಗೆ ಮಾಡಿದಲ್ಲಿ 10 ವರ್ಷದಲ್ಲಿ ನಿಮ್ಮ ಉಳಿತಾಯ ಸುಮಾರು ಎರಡು ಲಕ್ಷವಾಗುತ್ತದೆ, ಎಂದರೆ ನೀವು ನಂಬುವಿರಾ?
1) 5 ವರ್ಷಗಳ ಆರ್.ಡಿ. ರೂ. 700 ರಂತೆ ರೂ. 54,000
2) ರೂ. 54,000 ಆರ್.ಡಿ. ಯಿಂದ ಬಂದ
    ಹಣ 5 ವರ್ಷಗಳ ನಗದು ಸರ್ಟಿಫಿಕೇಟ್
    ಇರಿಸಿದಾ ರೂ. 86,500
3) 5 ವರ್ಷದ ನಂತರ, ಎರಡನೆ ಸಾರಿ
    ಮಾಡಿದ ಆರ್.ಡಿ. ರೂ. 700 ರಂತೆ      ರೂ. 54,000 ಹತ್ತು ವರ್ಷಗಳ ಅಂತ್ಯಕ್ಕೆ-      ಜುಮ್ಲಾ-  ರೂ. 1,94,500.

ನಿಮ್ಮ ಪತ್ರದಲ್ಲಿ ನೀವು ಮೂವರು ಎಂದು ತಿಳಿಸಿದ್ದೀರಿ. ಈ ಮೂವರೆಂದರೆ ನೀವು ನಿಮ್ಮ ಚಿಕ್ಕ ಮಗು ಹಾಗೂ ನಿಮ್ಮ ಯಜಮಾನರು ಎಂದು ತಿಳಿಯುತ್ತೇನೆ. ನಿಮ್ಮ ಯಜಮಾನರ ವಿಚಾರ ಅವರ ಆದಾಯ ಪತ್ರದಲ್ಲಿ ತಿಳಿಸಿಲ್ಲ. ನಿಮಗೊಂದು ಸಲಹೆ: ನೀವು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವಾಗ, ನಿಮ್ಮ ಯಜಮಾನರು ಅದೇ ವಟಾರದಲ್ಲಿ ಎಳನೀರು (ಎಳೆ ತೆಂಗಿನಕಾಯಿ) ವ್ಯಾಪಾರ ಮಾಡುವಂತೆ ಪ್ರೇರಣೆ ಮಾಡಿರಿ. ಈ ವ್ಯವಹಾರಕ್ಕೆ ರೂ. 500 ಬಂಡವಾಳ ಸಾಕು. ಕೆಲಸ ಕೂಡಾ ತುಂಬಾ ಸುಲಭ. ಮುರ್ಡೇಶ್ವರ ಸಮುದ್ರ ತೀರವಾದ್ದರಿಂದ ತೆಂಗಿನ ಬೆಳೆ ಅಲ್ಲಿ ಇದ್ದೇ ಇರುತ್ತದೆ. ರೋಗಿಗಳ ಹಾಗೂ ಇತರ ಗಿರಾಕಿಗಳು ಎಳನೀರು ಬಯಸುತ್ತಾರೆ, ಜೊತೆಗೆ ಮುರ್ಡೇಶ್ವರ ಪ್ರವಾಸಿ ತಾಣ ಕೂಡಾ.
ಈ ವ್ಯವಹಾರ ನಿಮ್ಮ ಯಜಮಾನರು ಮಾಡಿದಲ್ಲಿ ನಿಮಗಿಂತ ಹೆಚ್ಚಿಗೆ ಸಂಪಾದಿಸಬಹುದು. ನೀವಿಬ್ಬರೂ ಸೇರಿ 10 ವರ್ಷಗಳಲ್ಲಿ ರೂ. 5 ಲಕ್ಷಗಳ ತನಕ ಉಳಿತಾಯ ಮಾಡಬಹುದು.

ಮಹೇಶ, ನೆಲಮಂಗಲ
ಪ್ರಶ್ನೆ: ನನಗೆ ನಿರ್ದಿಷ್ಟ ಆದಾಯ ಅಥವಾ ಸಂಬಳ ಬರುವುದಿಲ್ಲ. ರೂ. 3,000-8,000 ಆದಾಯವಿದೆ. ಬ್ಯಾಂಕಿನಲ್ಲಿ ರೂ. 20,000 ಇದೆ. ನನ್ನಲ್ಲಿ ಕೆನರಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಷೇರುಗಳಿವೆ. ರೂ. 600ರಂತೆ ಖರೀದಿಸಿದ್ದು, ಈಗ ಬೆಲೆ ರೂ. 500ರ ಸಮೀಪದಲ್ಲಿದೆ. ಷೇರು ಮಾರ್ಕೆಟ್ ಇಳಿದಾಗ ನನ್ನ ಹತ್ತಿರ ಹಣ ಇರಲಿಲ್ಲ. ಈಗ ಹಣ ಇದೆ. ಷೇರು ಬೆಲೆ ಈಗ ಏರಿದೆ. ಷೇರು ಮಾರ್ಕೆಟ್ಟಿನಲ್ಲಿ ಮುಂದುವರಿಯಬೇಕೇ ಬೇಡವೇ ತಿಳಿಸಿರಿ.

ಉತ್ತರ: ನಿಮ್ಮ ಹೇಳಿಕೆ ಪ್ರಕಾರ ಕೆನರಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಷೇರಿನ ಬೆಲೆ ನೀವು ಖರೀದಿಸಿದ ಕ್ರಯಕ್ಕಿಂತ ಕಡಿಮೆ ಇರುತ್ತದೆ. ನಿಮ್ಮ ಆದಾಯದ ಪ್ರಕಾರ ನೀವು ಮಧ್ಯಮವರ್ಗಕ್ಕೆ ಸೇರಿದವರು.

ನಿಮಗೆ ಕಂಟಕ (ರಿಸ್ಕ್) ರಹಿತ ಹೂಡಿಕೆ ಬೇಕಾದಲ್ಲಿ, ನಿಮ್ಮ ಮನೆಗೆ ಸಮೀಪದ ಬ್ಯಾಂಕ್ ಒಂದರಲ್ಲಿ ನೀವು ತಿಂಗಳು ಉಳಿಸಬಹುದಾದ ಹಣಕ್ಕೆ ಆರ್.ಡಿ. ಖಾತೆ ತೆರೆದು ಜಮಾ ಮಾಡುತ್ತಾ ಬನ್ನಿ.

 ಈಗಾಗಲೇ ಖರೀದಿಸಿರುವ ಬ್ಯಾಂಕ್ ಷೇರುಗಳನ್ನು ಸಂವೇದಿಸಿ ಸೂಚ್ಯಂಕ ಮೇಲಕ್ಕೆ ಹೋಗಿ, ನಿಮ್ಮ ಹೂಡಿಕೆ ವಾಪಸು ಬರುವಲ್ಲಿ ಮಾರಾಟ ಮಾಡಿರಿ. ಆ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿ ನಿಶ್ಚಿಂತರಾಗಿರಿ.

ಶಾರದ, ಹೊಳಲ್ಕೆರೆ
ಪ್ರಶ್ನೆ: ಭಾರತೀಯ ಜೀವವಿಮಾ ನಿಗಮಕ್ಕೆ ಕೇಂದ್ರ ಸರ್ಕಾರ ಸಾವರಿನ್ ಗ್ಯಾರಂಟಿ ಕೊಟ್ಟಿದ್ದು, ಇತರೆ ಖಾಸಗಿ ಕಂಪೆನಿಗಳಿಗೆ ಕೊಟ್ಟಿಲ್ಲ. ಹಾಗೆಂದರೇನು? ಇತರೆ ಕಂಪೆನಿಗಳಲ್ಲಿ ಹಣ ಹೂಡಿಕೆ ತಪ್ಪೆ?

ಉತ್ತರ: ಭಾರತೀಯ ಜೀವವಿಮಾ ಕಂಪೆನಿ (ಎಲ್.ಐ.ಸಿ) ಭಾರತ ಸರ್ಕಾರದ ಸ್ವಾಮ್ಯಕ್ಕೊಳಪಟ್ಟ ಒಂದು ನಿಗಮ. ಭಾರತ ಸರ್ಕಾರದ ಉದಾರೀಕರಣ ಯೋಜನೆಯಿಂದಾಗಿ, ಬಹಳಷ್ಟು ಖಾಸಗಿ ವಿಮಾ ಕಂಪನಿಗಳು ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಎಲ್.ಐ.ಸಿ. ಹಾಗೂ ಉಳಿದ ಎಲ್ಲಾ ವಿಮಾ ಕಂಪನಿಗಳನ್ನು `ಇನ್ಶುರೆನ್ಸ್ ರೆಗ್ಯುಲಾರಿಟಿ ಅಂಡ್ ಡೆವಲಪ್‌ಮೆಂಟ್ ಅಥಾರಿಟಿ~ ಎನ್ನುವ ಭಾರತ ಸರ್ಕಾರದ ಇಲಾಖೆ ನಿಯಂತ್ರಿಸುತ್ತದೆ. (ಟೋಲ್ ಫ್ರೀ ದೂರವಾಣಿ ಸಂಖ್ಯೆ 155255) ಬ್ಯಾಂಕಿಂಗ್ ವಲಯದಲ್ಲಿ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕುಗಳಿರುವಂತೆ ಜೀವವಿಮಾ ಕ್ಷೇತ್ರದಲ್ಲಿ ಎಲ್.ಐ.ಸಿ. ಹಾಗೂ ಖಾಸಗಿ ಕಂಪನಿಗಳಿರುತ್ತವೆ. ಖಾಸಗಿ ವಿಮಾ ಕಂಪನಿಗಳಲ್ಲಿ ವಿಮಾ ಪಾಲಿಸಿ ಮಾಡಿಸುವುದರಲ್ಲಿ ತಪ್ಪೇನಿಲ್ಲ.
 

ಪ್ರತಿಭಾ, ಧಾರವಾಡ
ಪ್ರಶ್ನೆ: ನಾನು ಪಿ.ಪಿ.ಎಫ್. ಅಕೌಂಟ್ ತೆರೆಯಬೇಕಾಗಿದೆ. ಐ.ಸಿ.ಐ.ಸಿ.ಐ. ಬ್ಯಾಂಕಿನಲ್ಲಿ ಈಗಾಗಲೇ ನನ್ನ ಉಳಿತಾಯ ಖಾತೆ ಇದೆ(ಇಂಟರ್‌ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಸಹಿತ). ಪಿ.ಪಿ.ಎಫ್. ಖಾತೆ ಐಸಿಐಸಿಐ ಬ್ಯಾಂಕಿನ ಮುಖಾಂತರ ತೆರೆಯಬಹುದೇ?

ಉತ್ತರ: ಪಿ.ಪಿ.ಎಫ್. ಖಾತೆ, ಅಂಚೆ ಕಚೇರಿ ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಅಥವಾ ಆಯ್ದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ತೆರೆಯಬಹುದು. ಇಲ್ಲಿ ತಿಳಿಸಿದಂತೆ, ನಿಮಗೆ ಸಮೀಪ ಇರುವ ಅಂಚೆ ಕಚೇರಿಯಲ್ಲಿ ಅಥವಾ ಬ್ಯಾಂಕಿನಲ್ಲಿ ಪಿ.ಪಿ.ಎಫ್. ಖಾತೆ ತೆರೆಯಿರಿ. ಐ.ಸಿ.ಐ.ಸಿ.ಐ. ಬ್ಯಾಂಕ್ ಮುಖಾಂತರ ಪಿ.ಪಿ.ಎಫ್. ಖಾತೆ ತೆರೆಯಲು ಬರುವುದಿಲ್ಲ.

ಪಿ.ಪಿ.ಎಫ್. ಖಾತೆಗೆ, ವಾರ್ಷಿಕ ಕನಿಷ್ಠ ರೂ. 500, ಗರಿಷ್ಠ ರೂ. 1 ಲಕ್ಷ ತುಂಬಬಹುದು. ಇದೊಂದು 15 ವರ್ಷಗಳ ಅವಧಿಯ ಠೇವಣಿ. ಹಣಕಾಸು ವರ್ಷದಲ್ಲಿ ಗರಿಷ್ಠ ರೂ. 1 ಲಕ್ಷದವರೆಗೆ ಜಮಾ ಮಾಡಿಯೂ ಆದಾಯ ತೆರಿಗೆ ಸೆಕ್ಷನ್ 80ಸಿ ಆಧಾರದ ಮೇಲೆ ಇಲ್ಲಿ ಆದಾಯ ತೆರಿಗೆ ಕಡಿಮೆ ಮಾಡಿಕೊಳ್ಳಬಹುದು. ಜೊತೆಗೆ ಈ ಖಾತೆಯಲ್ಲಿ ಬರುವ ಬಡ್ಡಿಗೂ ಆದಾಯ ತೆರಿಗೆ ಇರುವುದಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.