ADVERTISEMENT

ಫೋನ್‌ಪೇ : ಡಿಜಿಟಲ್‌ ವಹಿವಾಟಿಗೆ ನೆರವಾಗುವ ಪಿಒಎಸ್ ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 19:30 IST
Last Updated 7 ನವೆಂಬರ್ 2017, 19:30 IST
ಫೋನ್‌ಪೇ : ಡಿಜಿಟಲ್‌ ವಹಿವಾಟಿಗೆ ನೆರವಾಗುವ ಪಿಒಎಸ್ ಮಾರುಕಟ್ಟೆಗೆ
ಫೋನ್‌ಪೇ : ಡಿಜಿಟಲ್‌ ವಹಿವಾಟಿಗೆ ನೆರವಾಗುವ ಪಿಒಎಸ್ ಮಾರುಕಟ್ಟೆಗೆ   

ನಗದುರಹಿತ (ಡಿಜಿಟಲ್) ವಹಿವಾಟಿಗೆ ಉತ್ತೇಜನ ನೀಡುವ ಉದ್ದೇಶದಿಂದ ಫೋನ್‌ಪೇ ಸಂಸ್ಥೆ, ಬ್ಲೂಟೂತ್ ಸಹಾಯದಿಂದ ಕಾರ್ಯನಿರ್ವಹಿಸುವ ಪಿಒಎಸ್‌ (‍ಪಾಯಿಂಟ್ ಆಫ್‌ ಸೇಲ್‌) ಸಾಧನವನ್ನು ಪರಿಚಯಿಸಿದೆ.

ಈ ಸಾಧನವನ್ನು ಕಿರಾಣಿ ಅಂಗಡಿ, ರೆಸ್ಟೊರೆಂಟ್, ಪೆಟ್ರೋಲ್‌ ಬಂಕ್‌, ಸೂಪರ್ ಮಾರ್ಕೆಟ್‌ ಹೀಗೆ ಎಲ್ಲ ಕಡೆ ಬಳಸಬಹುದು. ಇದರಿಂದ ವಹಿವಾಟು ಸುಲಭವಾಗಲಿದೆ.ಹಣ ವರ್ಗಾವಣೆ ಸಂದರ್ಭದಲ್ಲಿ ಮೊಬೈಲ್‌ಫೋನ್‌ ಅನ್ನು ಈ ಸಾಧನದ  ಹತ್ತಿರ ಇಡಬೇಕು. ಆಗ ವರ್ತಕರ ಮಾಹಿತಿ ಮತ್ತು ಪಾವತಿಸಬೇಕಾದ ಮೊತ್ತದ ವಿವರ ತೋರಿಸುತ್ತದೆ. ಇದಕ್ಕೆ ಅಂತರ್ಜಾಲ ಸಂಪರ್ಕ ಅಗತ್ಯವಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಇದಕ್ಕೆ ಬ್ಯಾಟರಿಗಳನ್ನು ಅಳವಡಿಸಲಾಗಿದ್ದು, ಇವುಗಳು 8–12 ತಿಂಗಳು ಕಾರ್ಯನಿರ್ವಹಿಸುತ್ತದೆ. ಮತ್ತೆ ಬ್ಯಾಟರಿಗಳನ್ನು ಬದಲಿಸಿ ಬಳಸಬಹುದಾಗಿದೆ. ನೋಡಲು ಸಾಮಾನ್ಯ ಕ್ಯಾಲ್ಕ್ಯುಲೇಟರ್‌ನಂತೆ ಇದೆ.

ADVERTISEMENT

‘ಈ ಸಾಧನವು  ಡಿಜಿಟಲ್‌ ವಹಿವಾಟು ಹೆಚ್ಚಳಕ್ಕೆ ಹೆಚ್ಚು ಉತ್ತೇಜನ ನೀಡಲಿದೆ. ಮುಖ್ಯವಾಗಿ ಸಣ್ಣ ವ್ಯಾಪಾರಿಗಳಿಗೆ ಹೆಚ್ಚು ನೆರವಾಗಲಿದೆ’ ಎಂದು ಮಾಹಿತಿ ನೀಡುತ್ತಾರೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಮೀರ್ ನಿಗಮ್‌.

‘ಪ್ರಾಯೋಗಿಕವಾಗಿ ಆಯ್ದ 5,000 ವರ್ತಕರಿಗೆ ಈ ಸಾಧನವನ್ನು ಉಚಿತವಾಗಿ ನೀಡಲಾಗುವುದು. ಇತರ ವರ್ತಕರು ಭದ್ರತಾ ಠೇವಣಿ ಇಟ್ಟು ಪಡೆಯಬಹುದು. ಖರೀದಿಸಲೂ ಅವಕಾಶವಿದೆ’ ಎನ್ನುತ್ತಾರೆ ಅವರು.

ಕ್ಲಿಯರ್‌ಟ್ರಿಪ್‌ಗೆ ಮೊಬೆಕ್ಸ್ ಪ್ರಶಸ್ತಿ: ಆನ್‌ಲೈನ್‌ ಪ್ರವಾಸಿ ಸೇವಾ ಕಂಪನಿ ಕ್ಲಿಯರ್‌ಟ್ರಿಪ್‌ಗೆ 2017ನೇ ಸಾಲಿನ ಮೊಬೆಕ್ಸ್ ಪ್ರಶಸ್ತಿ ಸಂದಿದೆ. ಡಿಜಿಟಲ್ ಮಾರುಕಟ್ಟೆ ವ್ಯವಸ್ಥೆಯಲ್ಲಿ ಈ ಕಂಪನಿ ಒಳ್ಳೆಯ ಹೆಸರು ಮಾಡಿದೆ. ಟ್ರಾವೆಲ್ ಆ್ಯಪ್ ಗೆ ಸಂಬಂಧಿಸಿದಂತೆ ಹಲವಾರು ಆವಿಷ್ಕಾರಗಳನ್ನು ಮಾಡಿದೆ. ಗ್ರಾಹಕ ಮತ್ತು ಚಾಲಕ ಸ್ನೇಹಿ ಅಪ್ಲಿಕೇಷನ್ ತಯಾರಿಕೆಯಲ್ಲಿ ಕ್ಲಿಯರ್‌ಟ್ರಿಪ್‌ ಮುಂಚೂಣಿಯಲ್ಲಿದೆ. ಕಳೆದೊಂದು ವರ್ಷದಲ್ಲಿ ಪ್ರವಾಸಿ ಆ್ಯಪ್‌ಗೆ ಸಂಬಂಧಿಸಿದಂತೆ 12 ಅಪ್ಲಿಕೇಷನ್ ಅಭಿವೃದ್ಧಿಪಡಿಸಿರುವುದು ವಿಶೇಷ. ಈ ಸಾಧನೆಗೆ ಈ ಮೊಬೆಕ್ಸ್ ಪ್ರಶಸ್ತಿ ಸಂದಿದೆ.

ಸ್ಯಾಮ್ಸಂಗ್‌ನಿಂದ ಬಿಕ್ಸ್‌ಬೈ ಮೊಬೈಲ್‌: ದಕ್ಷಿಣ ಕೊರಿಯಾದ ಸ್ಯಾಮ್ಸಂಗ್‌ ಕಂಪೆನಿ ಗ್ಯಾಲಕ್ಸಿ ಮೊಬೈಲ್ ಸರಣಿ ಮಾದರಿಯಂತೆ ಬ್ರಿಕ್ಸ್‌ಬೈ ತಂತ್ರಜ್ಞಾನ ಇರುವ ಅದೇ ಹೆಸರಿನ ಮೊಬೈಲ್ ತಯಾರಿಕೆಗೆ ಮುಂದಾಗಿದೆ. 2018ರಲ್ಲಿ ಬಿಕ್ಸ್‌ಬೈ 2.0 ಸರಣಿಯ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಲಿವೆ.

ಸ್ಯಾಮ್ಸಂಗ್ ಉತ್ಪನ್ನಗಳಿಗೆ ಭಾರತ ದೊಡ್ಡ ಮಾರುಕಟ್ಟೆಯಾಗಿದೆ. ಫ್ರಿಜ್‌, ಟಿ.ವಿ. ಸ್ಮಾರ್ಟ್‌ಫೋನ್‌ಗಳು ಅತಿ ಹೆಚ್ಚು ಮಾರಾಟವಾಗುವ ಉತ್ಪನ್ನಗಳಾಗಿವೆ. ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಆ್ಯಪಲ್, ಗೂಗಲ್ ಕಂಪೆನಿಗಳು ಪೈಪೋಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನೂತನ ಬಿಕ್ಸ್‌ಬೈ ತಂತ್ರಜ್ಞಾನದ ಮೊಬೈಲ್ ತಯಾರಿಕೆಗೆ ಸಂಸ್ಥೆ ಮುಂದಾಗಿದೆ.

ಈ ತಂತ್ರಜ್ಞಾನದ ಬಗ್ಗೆ ಗುಟ್ಟು ಬಿಟ್ಟುಕೊಡದ ಕಂಪೆನಿಯು ಮುಂದಿನ ವರ್ಷ 2018ರಲ್ಲಿ  ಈ  ಫೋನ್‌ಗಳು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿವೆ ಎಂದು ತಿಳಿಸಿದೆ.

ಪಿನ್ ಆನ್ ಮೊಬೈಲ್‌: ಮೈ ಪಿನ್‌ ಪ್ಯಾಡ್‌ ಕಂಪನಿಯು ಹೊಸ ಮಾದರಿಯ ಡಿಜಿಟಲ್ ಸ್ವೈಪ್ ಯಂತ್ರಗಳ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಇದು ಬಳಕೆದಾರರ ಸ್ನೇಹಿಯಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಪಿನ್ ಆನ್ ಮೊಬೈಲ್ ತಂತ್ರಾಂಶ ಜಾಗತಿಕವಾಗಿ ಬಳಕೆಯಲ್ಲಿರುವ ಸ್ವೈಪ್ ಯಂತ್ರಗಳ ತಂತ್ರಾಂಶಕ್ಕಿಂತ ಭಿನ್ನವಾಗಿದೆ. ಇದರಲ್ಲಿ ಹಣ ಸೋರಿಕೆ ಅಥವಾ ಮೋಸ ಮಾಡುವುದನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಈ ತಂತ್ರಾಂಶದ ಮೂಲಕ ಗ್ರಾಹಕರು ಸುಲಭವಾಗಿ ಕಾರ್ಡ್‌ಗಳ ಮೂಲಕ ಹಣ ಪಾವತಿ ಮಾಡಬಹುದು. ಪಾವತಿಯ ಸಂಪೂರ್ಣ ಮಾಹಿತಿ ಮೊಬೈಲ್ ಫೋನ್‌ನಲ್ಲಿ ಲಭ್ಯವಾಗಲಿದೆ. ಇದರ ಮತ್ತೊಂದು ವಿಶೇಷತೆ ಎಂದರೆ ಆಫ್‌ಲೈನ್‌ ಮೋಡ್‌ನಲ್ಲೂ ಪಾವತಿ ಮಾಡಬಹುದು.

ಬಗ್ ಬೌಂಟಿ ಕ್ಲೀನ್ ಆ್ಯಪ್‌: ಗೂಗಲ್ ಕಂಪೆನಿಯು  ಆಂಡ್ರಾಯ್ಡ್‌ ಫೋನ್‌ಗಳಲ್ಲಿನ ತೊಂದರೆಗಳನ್ನು ಸ್ವಚ್ಛಗೊಳಿಸುವ ಉಚಿತ ಬಗ್ ಬೌಂಟಿ ಆ್ಯಂಟಿ ವೈರಸ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದೆ. ಇದು ಗೂಗಲ್ ಪ್ಲೇಸ್ಟೋರ್‌ನಲ್ಲಿ ಉಚಿತವಾಗಿ ದೊರೆಯಲಿದೆ. ಇದು ಮೊಬೈಲ್ ಫೋನ್‌ಗಳಲ್ಲಿ ಇರುವ ಆ್ಯಪ್‌ಗಳನ್ನು ಸ್ಕ್ಯಾನ್ ಮಾಡುತ್ತದೆ. ಹಾಗೂ ಬಗ್‌ಗಳನ್ನು ಅಳಿಸಿ ಹಾಕುತ್ತದೆ. ಕುತಂತ್ರಾಂಶಗಳನ್ನು ಪತ್ತೆ ಹಚ್ಚಲಿದೆ ಎಂದು ಗೂಗಲ್ ತಿಳಿಸಿದೆ.

ಆಂಡ್ರಾಯ್ಡ್‌ ಫೋನ್‌ ಬಳಕೆದಾರರು ಈ ಅಪ್ಲಿಕೇಷನ್ ಡೌನ್ಲೋಡ್‌ ಮಾಡಿಕೊಂಡ ಆ್ಯಪ್‌ಗಳನ್ನು ಸ್ಕ್ಯಾನ್ ಮಾಡಿಕೊಳ್ಳಬಹುದು.

ಫೇಸ್‌ಬುಕ್‌ ಹೊಸ ವೈಶಿಷ್ಟ್ಯ: ಕೆಲವು ಪತ್ರಿಕೆಗಳಿಗೆ ಚಂದಾದಾರನ್ನು ಒದಗಿಸಿಕೊಡುವ ಸಲುವಾಗಿ ಫೇಸ್‌ಬುಕ್‌, ಚಂದದಾರರ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದು ಅಮೆರಿಕದ ಹತ್ತು ಜನಪ್ರಿಯ ಪತ್ರಿಕೆಗಳ ಫೇಸ್‌ಬುಕ್‌ ಆ್ಯಪ್‌ನಲ್ಲಿ ಮಾತ್ರ ಲಭ್ಯವಿದೆ. ಓದುಗರು ಪತ್ರಿಕೆಯ ಅಂತರ್ಜಾಲ ತಾಣಕ್ಕೆ ಹೋಗದೆ ಪತ್ರಿಕೆಯ ಫೇಸ್‌ಬುಕ್‌ ಆ್ಯಪ್ ಮೂಲಕವೇ ಚಂದಾದಾರರಾಗಬಹುದು. ಈ ವೈಶಿಷ್ಟ್ಯವನ್ನು ಮುಂದಿನ ದಿನಗಳಲ್ಲಿ ಭಾರತದಲ್ಲೂ ಪರಿಚಯಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.