ADVERTISEMENT

ಫ್ಲಿಪ್‌ಕಾರ್ಟ್‌ ಸ್ವಾಧೀನ ಒಪ್ಪಂದಕ್ಕೆ ಆಕ್ಷೇಪ

ಸ್ಪರ್ಧಾತ್ಮಕ ಆಯೋಗಕ್ಕೆ ವರ್ತಕರ ಒಕ್ಕೂಟದ ದೂರು

ಪಿಟಿಐ
Published 23 ಮೇ 2018, 19:30 IST
Last Updated 23 ಮೇ 2018, 19:30 IST
ಫ್ಲಿಪ್‌ಕಾರ್ಟ್‌ ಸ್ವಾಧೀನ ಒಪ್ಪಂದಕ್ಕೆ ಆಕ್ಷೇಪ
ಫ್ಲಿಪ್‌ಕಾರ್ಟ್‌ ಸ್ವಾಧೀನ ಒಪ್ಪಂದಕ್ಕೆ ಆಕ್ಷೇಪ   

ನವದೆಹಲಿ: ಉದ್ದೇಶಿತ ವಾಲ್‌ಮಾರ್ಟ್‌ – ಫ್ಲಿಪ್‌ಕಾರ್ಟ್‌ ಒಪ್ಪಂದದ ವಿರುದ್ಧ ನ್ಯಾಯಯುತ ವ್ಯಾಪಾರದ ನಿಯಂತ್ರಣ ಸಂಸ್ಥೆಯಾಗಿರುವ ಭಾರತದ ಸ್ಪರ್ಧಾತ್ಮಕ ಆಯೋಗಕ್ಕೆ (ಸಿಸಿಐ) ಆಕ್ಷೇಪಗಳನ್ನು ಸಲ್ಲಿಸುವುದಾಗಿ ಅಖಿಲ ಭಾರತ ವರ್ತಕರ ಒಕ್ಕೂಟವು (ಸಿಎಐಟಿ) ತಿಳಿಸಿದೆ.

ವಾಲ್‌ಮಾರ್ಟ್‌ನಿಂದ ಫ್ಲಿಪ್‌ಕಾರ್ಟ್‌ ಸ್ವಾಧೀನದಿಂದ  ರಿಟೇಲ್‌ ವಲಯದಲ್ಲಿ ಅಸಮತೋಲನ ಕಂಡು ಬರಲಿದೆ. ಗಮನಾರ್ಹ ಸಂಖ್ಯೆಯಲ್ಲಿ ಉದ್ಯೋಗ ನಷ್ಟ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಫ್ಲಿಪ್‌ಕಾರ್ಟ್‌ನ ಉದ್ದೇಶಿತ ಸ್ವಾಧೀನಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಅಂಗೀಕಾರ ನೀಡಬೇಕೆಂದು ವಾಲ್‌ಮಾರ್ಟ್‌ ಕಳೆದ ವಾರವೇ ‘ಸಿಸಿಐ’ಗೆ ಮನವಿ ಮಾಡಿಕೊಂಡಿದೆ. ಈ ಒಪ್ಪಂದದಿಂದಾಗಿ ನ್ಯಾಯಯುತ ವ್ಯಾಪಾರ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಗಳು ಉದ್ಭವಗೊಳ್ಳುವುದಿಲ್ಲ ಎಂದು ವಾಲ್‌ಮಾರ್ಟ್ ಹೇಳಿಕೊಂಡಿದೆ.

ADVERTISEMENT

ಸಿಐಎಟಿ ವಿರೋಧ: ಈ ಸ್ವಾಧೀನ ಒಪ್ಪಂದ ವಿರೋಧಿಸಿ ವಾಣಿಜ್ಯ ಸಚಿವ ಸುರೇಶ್‌ ಪ್ರಭು ಅವರಿಗೆ ‘ಸಿಎಐಟಿ’ ಸೋಮವಾರ ಪತ್ರ ಬರೆದಿದೆ. ಈ ಒಪ್ಪಂದದ ಬಗ್ಗೆ ಸರ್ಕಾರದ ನಿಲುವು ಏನು ಎನ್ನುವುದನ್ನು ಸ್ಪಷ್ಟಪಡಿಸಿ ಎಂದೂ ಒತ್ತಾಯಿಸಿದೆ.

ವಿದೇಶಿ ನೇರ ಬಂಡವಾಳ (ಎಫ್‌ಡಿಐ) ನೀತಿ, ಸೈಬರ್‌ ಸುರಕ್ಷತೆ, ರಿಟೇಲ್ ವ್ಯಾಪಾರ ಕ್ಷೇತ್ರಕ್ಕೆ ಧುಮುಕಲು ಇ–ಕಾಮರ್ಸ್‌ನ ಹಿಂಬಾಗಿಲು ಬಳಸಿಕೊಂಡಿರುವುದು,   ವ್ಯಾಪಾರಿ ಸಂಘಟನೆಗಳ ತೀವ್ರ ಪ್ರತಿಭಟನೆ ಮತ್ತಿತರ ಕಾರಣಗಳಿಗೆ ಸರ್ಕಾರ ಈ ಒಪ್ಪಂದವನ್ನು ವಿವರವಾಗಿ ಪರಾಮರ್ಶಿಸಿ ನಿರ್ಧಾರಕ್ಕೆ ಬರಬೇಕು ಎಂದು ಆಗ್ರಹಿಸಲಾಗಿದೆ.

ಈ ಎಲ್ಲ ಆಕ್ಷೇಪಗಳ ಹೊರತಾಗಿಯೂ ಕೇಂದ್ರ ಸರ್ಕಾರವು ಇದುವರೆಗೂ ವ್ಯಾಪಾರಿ ಸಂಘಟನೆಗಳನ್ನು ಸಂಪರ್ಕಿಸದಿರುವುದು ವಿಷಾದಕರ ಬೆಳವಣಿಗೆಯಾಗಿದೆ. ಸರ್ಕಾರದ ಈ ಧೋರಣೆಯು, ಬಹುರಾಷ್ಟ್ರೀಯ ಸಂಸ್ಥೆಗಳ ಪರ ಒಲವು ತಳೆದಿರುವ ಮತ್ತು ದೇಶಿ ಚಿಲ್ಲರೆ ವಹಿವಾಟನ್ನು ನಿರ್ಲಕ್ಷಿಸಿರುವುದರ ಸಂಕೇತವಾಗಿದೆ. ರಿಟೇಲ್‌ ಕ್ಷೇತ್ರದಲ್ಲಿ ಎಫ್‌ಡಿಐ ಉತ್ತೇಜಿಸುವುದಿಲ್ಲ ಎಂದು 2014ರಲ್ಲಿ ಬಿಜೆಪಿಯ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ವಾಗ್ದಾನಕ್ಕೂ ಇದು ವಿರುದ್ಧವಾಗಿದೆ ಎಂದು ‘ಸಿಎಐಟಿ’ ಆರೋಪಿಸಿದೆ.

**

ಕೇಂದ್ರ ಸರ್ಕಾರ ತನ್ನ ಘೋಷಿತ ಬದ್ಧತೆಯಿಂದ ದೂರ ಸರಿದಿದೆ.

ಪ್ರವೀಣ್ ಖಂಡೇಲ್‌ವಾಲ್‌, ‘ಸಿಎಐಟಿ’ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.