ADVERTISEMENT

ಬಜೆಟ್:ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ?

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರವು 2012-13ನೇ ಸಾಲಿನ ಬಜೆಟ್‌ನಲ್ಲಿ ಆದಾಯ ತೆರಿಗೆ ಪಾವತಿಸುವ ವೇತನ ವರ್ಗಕ್ಕೆ ಕೆಲ ಮಟ್ಟಿಗೆ ನೆಮ್ಮದಿ ಒದಗಿಸುವ ಸಾಧ್ಯತೆಗಳಿವೆ.

ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಸದ್ಯದ ರೂ 1.80 ಲಕ್ಷದಿಂದ ರೂ 2 ಲಕ್ಷಕ್ಕೆ ಹೆಚ್ಚಿಸುವ ಮತ್ತು ವಿವಿಧ ಹಂತದ ಆದಾಯ ತೆರಿಗೆ ವ್ಯಾಪ್ತಿಗೆ ಬರುವವರಿಗೆ ತೆರಿಗೆ ದರಗಳನ್ನೂ ಕಡಿಮೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.

ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಆದಾಯ ತೆರಿಗೆ ನೀತಿ ಸಂಹಿತೆಯಡಿ   (ಡಿಟಿಸಿ), ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಲು ಉದ್ದೇಶಿಸಲಾಗಿದೆ. `ಸದ್ಯಕ್ಕೆ `ಡಿಟಿಸಿ~ಯು ಸಂಸತ್ತಿನ ಸ್ಥಾಯಿ ಸಮಿತಿಯ ಪರಿಶೀಲನೆಯಲ್ಲಿ ಇದೆ. ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ರೂ 2 ಲಕ್ಷಗಳಿಗೆ ಹೆಚ್ಚಿಸಬೇಕು ಎಂದು `ಡಿಟಿಸಿ~  ಕೂಡ ಸಲಹೆ ನೀಡಿದೆ.

ಗರಿಷ್ಠ ಆದಾಯ ತೆರಿಗೆ ದರವಾಗಿರುವ ಶೇ 30ರಷ್ಟನ್ನು ವಾರ್ಷಿಕ  ಆದಾಯ   ರೂ 8 ಲಕ್ಷದಿಂದ ರೂ 10 ಲಕ್ಷಕ್ಕೆ ಅನ್ವಯಿಸಬೇಕು ಎಂದೂ ಸಲಹೆ ನೀಡಲಾಗಿದೆ. ಹಣದುಬ್ಬರವು ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಆದಾಯ ತೆರಿಗೆ ಹಂತಗಳನ್ನು ಹೆಚ್ಚಿಸಬೇಕು ಎಂದು ಕೈಗಾರಿಕಾ ಸಂಘಟನೆಗಳೂ ಒತ್ತಾಯಿಸಿವೆ. ಮೂಲ ವಿನಾಯ್ತಿ ಮಿತಿಯನ್ನು ಸದ್ಯದ ರೂ1.80 ಲಕ್ಷದಿಂದ ರೂ 2.5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಮಹಾ ನಿರ್ದೇಶಕ ಚಂದ್ರಜೀತ್ ಬ್ಯಾನರ್ಜಿ ಹೇಳಿದ್ದಾರೆ.

ರೂ 2.5 ಲಕ್ಷದಿಂದ ರೂ 6 ಲಕ್ಷದವರೆಗೆ ಶೇ 10ರಷ್ಟು, ರೂ 10 ಲಕ್ಷದವರೆಗೆ ಶೇ 20ರಷ್ಟು ಮತ್ತು ರೂ 10 ಲಕ್ಷದಿಂದ ಹೆಚ್ಚಿನ ಮೊತ್ತಕ್ಕೆ ಶೇ 30ರಷ್ಟು ತೆರಿಗೆ ವಿಧಿಸಬೇಕು ಎಂದು `ಸಿಐಐ~ ಸಲಹೆ ನೀಡಿದೆ. ಸರ್ಕಾರ ವರಮಾನ ಖೋತಾ ಎದುರಿಸುತ್ತಿರುವ ಸಂದರ್ಭದಲ್ಲಿ ಆದಾಯ ತೆರಿಗೆ ದರಗಳನ್ನು ಕಡಿಮೆ ಮಾಡುವ ಅಗತ್ಯ ಇಲ್ಲ. ಆದರೆ, ಗರಿಷ್ಠ ಮಟ್ಟದ ತೆರಿಗೆ ದರವನ್ನು ಸದ್ಯದ ರೂ 8 ಲಕ್ಷದಿಂದ ರೂ 10 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ಅನ್ವಯಿಸಬಹುದು ಎಂದು ಭಾರತೀಯ ವಾಣಿಜ್ಯೋದ್ಯಮ ಸಂಘಟನೆಗಳ ಒಕ್ಕೂಟದ (ಫಿಕ್ಕಿ) ಪ್ರಧಾನ ಕಾರ್ಯದರ್ಶಿ ರಾಜೀವ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ರೂ 2 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಹೇಳಿರುವ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ ಅಧ್ಯಕ್ಷ ದಿಲೀಪ್ ಮೋದಿ, ಶೇ 10ರಷ್ಟು ತೆರಿಗೆ ದರಗಳನ್ನು  ರೂ 2 ಲಕ್ಷ ಮತ್ತು ರೂ 5 ಲಕ್ಷದಷ್ಟು ವಾರ್ಷಿಕ ವರಮಾನ ಇರುವವರಿಗೆ ಅನ್ವಯಿಸಬೇಕು ಎಂದೂ ಸಲಹೆ ನೀಡಿದ್ದಾರೆ.
ವೆಚ್ಚ ಮಾಡಬಹುದಾದ ವರಮಾನ ಹೆಚ್ಚಿಸಿ, ಬೇಡಿಕೆಗೆ ಉತ್ತೇಜನ ನೀಡಿದರೆ ಅರ್ಥ ವ್ಯವಸ್ಥೆಗೂ ಒಳಿತಾಗುತ್ತದೆ ಎಂದೂ ಕೈಗಾರಿಕೋದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.