ADVERTISEMENT

ಬಜೆಟ್:ಆರ್ಥಿಕ ಪ್ರಗತಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 19:30 IST
Last Updated 12 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಪಂಚ ರಾಜ್ಯಗಳ ಚುನಾವಣೆ ಸಮರ ಮುಗಿದಿರುವ ಬೆನ್ನಲ್ಲೆ, ಸರ್ಕಾರ ಈಗ ದೇಶದ ಆರ್ಥಿಕ ಪ್ರಗತಿಯತ್ತ ಹೆಚ್ಚಿನ ಗಮನ ಹರಿಸುತ್ತಿದೆ. ಸೋಮವಾರದಿಂದಲೇ ಪ್ರಮುಖ ಆರ್ಥಿಕ ವಿದ್ಯಮಾನಗಳಿಗೆ ಚಾಲನೆ ಲಭಿಸಿದೆ. 

  ಸದ್ಯಕ್ಕೆ ದೇಶದ ಆರ್ಥಿಕ ವೃದ್ಧಿ ದರವು ಮೂರು ವರ್ಷಗಳ ಹಿಂದಿನ ಮಟ್ಟ ಶೇ 6.9ಕ್ಕೆ ಕುಸಿದಿರುವುದು ನೀತಿ ನಿರೂಪಕರ ಮೇಲೆ ಒತ್ತಡ ಹೆಚ್ಚುವಂತೆ ಮಾಡಿದೆ.  ದೇಶದ ವಿತ್ತೀಯ ಕೊರತೆ ಅಂತರ ಹೆಚ್ಚುತ್ತಿರುವ ಸಂಗತಿ ಕೂಡ ವೃದ್ಧಿ ದರದ ಹಿನ್ನಡೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಪ್ರಣವ್ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸಬ್ಸಿಡಿ ಕಡಿತಕ್ಕೆ ಆದ್ಯತೆ ನೀಡಿ, ವಿತ್ತೀಯ ಕೊರತೆ ಅಂತರ ಕಡಿಮೆ ಮಾಡಲು ಕ್ರಮ ಕೈಗೊಳ್ಳಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನೇರ ತೆರಿಗೆ ನೀತಿ ಸಂಹಿತೆಯಡಿ (ಡಿಟಿಸಿ) ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ತೆರಿಗೆ ಉಳಿತಾಯ ಹೂಡಿಕೆ ಮಿತಿಯನ್ನೂ ಹೆಚ್ಚಿಸುವ ಸಾಧ್ಯತೆ ಇದೆ ಎನ್ನುವ ವಿಶ್ಲೇಷಣೆಗಳೂ ನಡೆಯುತ್ತಿವೆ.

ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ದೇಶದ ಬಹುಬ್ರ್ಯಾಂಡ್ ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ನೀಡಬೇಕು ಎನ್ನುವ ಸಂಗತಿಗಳು ಬಜೆಟ್ ಅನ್ನು ಅವಲಂಬಿಸಿವೆ. ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ  ಈ ಬಾರಿ ಬಜೆಟ್ ಮಂಡನೆ ಮುಂದೂಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.