ADVERTISEMENT

ಬಜೆಟ್: ವಾಹನಗಳ ಬಿಡಿಭಾಗಗಳು ತುಟ್ಟಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 19:30 IST
Last Updated 17 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಬಜೆಟ್‌ನಲ್ಲಿ ಅಬಕಾರಿ ತೆರಿಗೆ ಹೆಚ್ಚಿಸಿರುವುದರಿಂದ ವಾಹನಗಳ ಬಿಡಿಭಾಗಗಳು ತುಟ್ಟಿಯಾಗಲಿವೆ. ವಾಹನ ತಯಾರಿಕೆ ಕಂಪೆನಿಗಳು ಈ ವೆಚ್ಚವನ್ನು ಗ್ರಾಹಕರ ಮೇಲೆ ವರ್ಗಾಯಿಸುತ್ತವೆ.

ಇದರಿಂದ ವಾಹನಗಳ  ಬೆಲೆಗಳು ಶೀಘ್ರದಲ್ಲೇ ಗಣನೀಯ ಏರಿಕೆ ಕಾಣಲಿವೆ ಎಂದು ಭಾರತೀಯ ವಾಹನ ಬಿಡಿಭಾಗಗಳ ತಯಾರಿಕೆ ಸಂಸ್ಥೆಯ (ಎಸಿಎಂಎ) ಅಧ್ಯಕ್ಷ ವಿನ್ನಿ ಮಹ್ತಾ ಹೇಳಿದ್ದಾರೆ.

ಜಾಗತಿಕ ಆರ್ಥಿಕ ಅಸ್ಥಿರತೆ, ಯೂರೋಪ್ ಸಾಲದ ಬಿಕ್ಕಟ್ಟು, `ಆರ್‌ಬಿಐ~ ಬಡ್ಡಿ ದರ ಹೆಚ್ಚಳ, ಹಣದುಬ್ಬರ ಏರಿಕೆ, ಕಚ್ಚಾ ತೈಲ ಬೆಲೆ ಏರಿಕೆ ಹೀಗೆ ಹಲವು ಪ್ರತಿಕೂಲ ಸಂಗತಿಗಳಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ವಾಹನ ತಯಾರಿಕಾ ಉದ್ಯಮ ತೀವ್ರ ಹಿನ್ನಡೆ ಅನುಭವಿಸಿದೆ. ಹೀಗಿರುವ ಪರಿಸ್ಥಿತಿಯಲ್ಲಿ ಸರ್ಕಾರ ಅಬಕಾರಿ ತೆರಿಗೆ ಹೆಚ್ಚಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ಅಲ್ಪಾವಧಿ ಬಡ್ಡಿ ದರ ಏರಿಕೆಗೆ ತಡೆ ನೀಡಿದ ಹಿನ್ನೆಲೆಯಲ್ಲಿ, ಇತ್ತೀಚೆಗಷ್ಟೇ ವಾಹನ ತಯಾರಿಕೆ ಉದ್ಯಮ ಚೇತರಿಸಿಕೊಳ್ಳಲು ಪ್ರಾರಂಭಿಸಿತ್ತು. ಈಗ ವಾಹನಗಳ ಬಿಡಿಭಾಗಗಳ ಆಮದು ಶುಲ್ಕ ಹೆಚ್ಚಾಗಿದೆ.  ತೆಳು ಉಕ್ಕಿನ ಹಾಳೆಗಳ ಅಬಕಾರಿ ಸುಂಕ ಶೇ 5ರಿಂದ ಶೇ 7.5ಕ್ಕೆ ಹೆಚ್ಚಿಸಲಾಗಿದೆ.

ಇದು ವಾಹನ ತಯಾರಿಕೆ ಬಳಸುವ ಪ್ರಮುಖ ವಸ್ತು ಎಂದು ಬಿಡಿಭಾಗ ತಯಾರಿಕೆ ಕಂಪೆನಿ `ಸೊನಾ ಕೊಯ~ದ ಅಧ್ಯಕ್ಷ ಸುರೀಂದರ್ ಕಪೂರ್ ಹೇಳಿದ್ದಾರೆ.

`ಬಿಡಿಭಾಗ ತಯಾರಿಕೆ ಕಂಪೆನಿಗಳು ಹೆಚ್ಚುವರಿ ವೆಚ್ಚವನ್ನು ವಾಹನ ತಯಾರಿಕೆ ಕಂಪೆನಿಗಳ ಮೇಲೆ ವರ್ಗಾಯಿಸುತ್ತವೆ. ಕಂಪೆನಿಗಳು ಇದನ್ನು ಗ್ರಾಹಕರ ಮೇಲೆ ಹೊರಿಸುತ್ತವೆ~ ಎಂದು ಮದರ್‌ಸನ್ ಸುಮಿ ಸಿಸ್ಟ್ಸಂನ  ಮುಖ್ಯ ಹಣಕಾಸು ಅಧಿಕಾರಿ ಜಿ.ಎನ್ ಗೂಬಾ ಹೇಳಿದ್ದಾರೆ.
 
ಇದರ ನಡುವೆ, ಸಂಶೋಧನೆ ಮತ್ತು ಅಭಿವೃದ್ಧಿ  ಯೋಜನೆಗಳಿಗೆ ನೀಡುವ ಶೇ 200ರಷ್ಟು ವೆಚ್ಚ ಕಡಿತವನ್ನು ಮುಂದಿನ 5 ವರ್ಷಗಳಿಗೆ ವಿಸ್ತರಿಸಿರುವ ಕ್ರಮವು ಸ್ವಾಗತಾರ್ಹ. ಇದರಿಂದ ವಾಹನ ತಯಾರಿಕೆ ಕಂಪೆನಿಗಳು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಮತ್ತು ಅಭಿವೃದ್ಧಿಪಡಿಸಲು ಸಹಕಾರಿ ಎಂದು ಮೆಹ್ತಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.