ADVERTISEMENT

ಬಹುಮಾನಕ್ಕೆ ಬಲಿಯಾಗಬೇಡಿ: ಆರ್‌ಬಿಐ ಸಲಹೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 16:50 IST
Last Updated 25 ಫೆಬ್ರುವರಿ 2011, 16:50 IST

ನವದೆಹಲಿ(ಐಎಎನ್‌ಎಸ್): ಇ-ಮೇಲ್, ಪತ್ರ, ಮೊಬೈಲ್ ಕರೆ, ಎಸ್‌ಎಂಎಸ್ ಮತ್ತಿತರ ವಿದ್ಯುನ್ಮಾನ ಸಂಪರ್ಕ ಮಾಧ್ಯಮಗಳ ಮೂಲಕ ಒಡ್ಡಲಾಗುವ ಭಾರಿ ಮೊತ್ತದ ಬಹುಮಾನದ ವಿದೇಶಿ ಮೂಲದ ಆಮಿಷಗಳಿಗೆ ಬಲಿಯಾಗಬಾರದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಸಿದೆ.

ಲಾಟರಿಯಲ್ಲಿ ಗೆಲುವು, ವಿದೇಶಿ ಕರೆನ್ಸಿಗಳ ವರ್ಗಾವಣೆ ಮತ್ತಿತರ ಬಗೆಗಳಲ್ಲಿ  ಹಣದ ಆಮಿಷ ಒಡ್ಡುವ ವಿದೇಶಿ ಮೂಲದ ಖೊಟ್ಟಿ ಕೊಡುಗೆಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಎಂದೂ ಸೂಚಿಸಿದೆ. ಮೋಸದ ಲಾಟರಿ ಮತ್ತಿತರ ಯೋಜನೆಗಳಲ್ಲಿ ಭಾಗಿಯಾಗಲು ಹಣ ಪಾವತಿಸುವುದು  ಕೂಡ ಕಾನೂನುಬಾಹಿರವಾಗಿದೆ.  ವಿದೇಶಗಳಲ್ಲಿ ನೆಲೆಸಿ ಭಾರತದಿಂದ ಹಣ ಪಡೆಯುವುದು ಮತ್ತು ವರ್ಗಾಯಿಸುವುದು ಕೂಡ  ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಗೆ (ಫೆಮಾ ಕಾಯ್ದೆ -1999) ವಿರುದ್ಧವಾದದ್ದು ಎಂದು ‘ಆರ್‌ಬಿಐ’ ಅಭಿಪ್ರಾಯಪಟ್ಟಿದೆ.

 ಬಹುಮಾನ ಹಣದ ವರ್ಗಾವಣೆ ಶುಲ್ಕ, ಕರೆನ್ಸಿ ಪರಿವರ್ತನೆ ಶುಲ್ಕ ಮತ್ತಿತರ ಶುಲ್ಕಗಳ ಹೆಸರಿನಲ್ಲಿ ಸ್ಥಳೀಯ ನಿರ್ದಿಷ್ಟ ಬ್ಯಾಂಕ್‌ಗಳಲ್ಲಿ ಹಣ ಠೇವಣಿ ಇರಿಸಲು ಸೂಚಿಸಿ ವಂಚಿಸಲಾಗುತ್ತದೆ. ಈಗಾಗಲೇ ಹಲವಾರು ಜನರು ಇಂತಹ ಮೋಸದ ಬಲೆಗೆ ಬಿದ್ದು ಸಾಕಷ್ಟು ಹಣ ಕಳೆದುಕೊಂಡಿದ್ದಾರೆ. ಇದರಿಂದ ಜನರು ಪಾಠ ಕಲಿಯಬೇಕು ಎಂದೂ ಆರ್‌ಬಿಐ ಮನವಿ ಮಾಡಿ ಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.