ADVERTISEMENT

‘ಬಾಂಡ್‌ ಗಳಿಕೆ’ ಮತ್ತು ಷೇರುಪೇಟೆ ಸಂಬಂಧ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 19:30 IST
Last Updated 20 ಮಾರ್ಚ್ 2018, 19:30 IST
‘ಬಾಂಡ್‌ ಗಳಿಕೆ’ ಮತ್ತು ಷೇರುಪೇಟೆ ಸಂಬಂಧ
‘ಬಾಂಡ್‌ ಗಳಿಕೆ’ ಮತ್ತು ಷೇರುಪೇಟೆ ಸಂಬಂಧ   

ರಾಹುಲ್‌ ಅಗರ್ವಾಲ್‌

ಜಾಗತಿಕವಾಗಿ ಷೇರುಪೇಟೆಗಳಲ್ಲಿ ಆಗಾಗ ಅಸ್ಥಿರತೆ ಕಾಣಿಸುವುದಿದೆ. ಇಂಥ ಏರುಪೇರುಗಳು ಷೇರುಪೇಟೆಯಲ್ಲಿ ಸಹಜ. ಅಮೆರಿಕದ ಷೇರುಪೇಟೆಯೂ ಇಂಥ ಏರುಪೇರುಗಳಿಗೆ ಹೊರತಲ್ಲ. ಆದರೆ, ಮಾರುಕಟ್ಟೆಯ ಯಾವುದೇ ಸ್ಥಿತಿಯಲ್ಲೂ ಹೂಡಿಕೆದಾರರ ವಿಶ್ವಾಸವನ್ನು ಕಳೆದುಕೊಳ್ಳದಿರುವ ಮತ್ತು ಹೂಡಿಕೆದಾರರಿಗೆ ನಿರ್ದಿಷ್ಟ ಪ್ರಮಾಣದ ಆದಾಯ ತಂದುಕೊಟ್ಟಿರುವುದರಲ್ಲಿ ಅಮೆರಿಕದ ‘10ವರ್ಷ ಅವಧಿಯ ಸರ್ಕಾರಿ ಬಾಂಡ್‌ಗಳು’ (ಸಾಲಪತ್ರಗಳು) ಗಮನ ಸೆಳೆಯುತ್ತವೆ.

ಷೇರು ಮಾರುಕಟ್ಟೆಯು ಕುಸಿತದ ಹಾದಿ ಹಿಡಿದಾಗ ಸರ್ಕಾರಿ ಬಾಂಡ್‌ಗಳು ಮಾರುಕಟ್ಟೆಯ ಮೇಲಿನ ಒತ್ತಡವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುತ್ತವೆ. ಆದ್ದರಿಂದ ಹೂಡಿಕೆದಾರರು ಬಾಂಡ್‌ಗಳು ಗಳಿಸಿಕೊಡುವ ಆದಾಯ ಹಾಗೂ ಷೇರುಪೇಟೆಯಿಂದ ಗಳಿಸಬಹುದಾದ ಆದಾಯಗಳ ನಡುವಿನ ಸಂಬಂಧವನ್ನು ತಿಳಿದುಕೊಳ್ಳುವುದು ಅಗತ್ಯ.

ADVERTISEMENT

ಅಮೆರಿಕದ ಸರ್ಕಾರಿ ಬಾಂಡ್‌ಗಳ ಮಹತ್ವವೇನು?
ಅಮೆರಿಕದಲ್ಲಿ ಈ ಬಾಂಡ್‌ಗಳಿಂದ ಬರುವ ಗಳಿಕೆಯು ಬರಿಯ ‘ಆದಾಯ’ ಅಥವಾ ‘ಲಾಭ’ ಎಂಬ ಸಂಗತಿಗೆ ಮಾತ್ರ ಸೀಮಿತವಾಗಿಲ್ಲ. ಅಮೆರಿಕದ ಬಡ್ಡಿ ದರ ನಿರ್ಧರಿಸುವುದು, ವಿದ್ಯಾರ್ಥಿ ಸಾಲ ಮುಂತಾದ ಅನೇಕ ವಿಚಾರಗಳನ್ನು ಈ 10ವರ್ಷ ಅವಧಿಯ ಬಾಂಡ್‌ಗಳ ಸ್ಥಿತಿಗತಿಯ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಷೇರು ಪೇಟೆ ಚೇತರಿಸಿ, ಅದರ ಮೇಲಿನ ಭರವಸೆ ಹೆಚ್ಚಾದಾಗ ಹೂಡಿಕೆದಾರರು ಷೇರುಗಳಲ್ಲಿ ಹಣ ಹೂಡುತ್ತಾರೆ. ಇಂಥ ಸಂದರ್ಭದಲ್ಲಿ ಬಾಂಡ್‌ಗಳ ಮೌಲ್ಯ ಇಳಿಕೆಯಾಗುತ್ತದೆ. ಬಾಂಡ್‌ ಮೌಲ್ಯ ಇಳಿಕೆಯಾಯಿತೆಂದರೆ ಅದರಲ್ಲಿ ಹೂಡಿಕೆ ಮಾಡಿದವರ ಗಳಿಕೆ ಹೆಚ್ಚುತ್ತದೆ ಎಂದು ಅರ್ಥ. ಅದೇ, ಮಾರುಕಟ್ಟೆ ಸ್ವಲ್ಪ ಡೋಲಾಯಮಾನವಾದಾಗ ಜನರು ಸುರಕ್ಷಿತ ಹೂಡಿಕೆಯತ್ತ ಮುಖಮಾಡುತ್ತಾರೆ. ಪರಿಣಾಮ ಬಾಂಡ್‌ಗಳ ಬೇಡಿಕೆ ಹೆಚ್ಚುತ್ತದೆ. ಅದರ ಪರಿಣಾಮ ಬಾಂಡ್‌ಗಳ ಗಳಿಕೆಯ ಪ್ರಮಾಣ ಕಡಿಮೆ ಆಗುತ್ತದೆ.

ಅಮೆರಿಕದಲ್ಲಿ 10ವರ್ಷ ಅವಧಿಯ ಸರ್ಕಾರಿ ಬಾಂಡ್‌ಗಳನ್ನು ಹೂಡಿಕೆಗೆ ಅತ್ಯಂತ ಸುರಕ್ಷಿತ ಎಂದೇ ಪರಿಗಣಿಸಲಾಗುತ್ತದೆ. ಯಾವಾಗ ಬೇಕಾದರೂ ನಗದೀಕರಿಸಬಹುದು ಎಂಬುದು ಇದಕ್ಕೆ ಒಂದು ಕಾರಣವಾದರೆ, ಹೂಡಿರುವ ಹಣಕ್ಕೆ ಸರ್ಕಾರದ ಖಾತರಿ ಇದೆ ಎಂಬುದು ಇನ್ನೊಂದು ಕಾರಣ.

ಬಾಂಡ್‌ ಎಂದರೇನು?
ಸರಳವಾಗಿ ಹೇಳಬೇಕೆಂದರೆ, ಬಾಂಡ್‌ಗಳೆಂದರೆ ‘ಸಾಲಪತ್ರ’ಗಳು. ಸರ್ಕಾರ ಅಥವಾ ಯಾವುದಾದರೂ ನಿಗಮವು ತನ್ನ ಹಣದ ಅಗತ್ಯಕ್ಕೆ ಅನುಗುಣವಾಗಿ ಸಾಲಪತ್ರ ಅಥವಾ ಬಾಂಡ್‌ಗಳನ್ನು ನೀಡುತ್ತವೆ. ಈ ಬಾಂಡ್‌ಗಳಿಗೆ ಕಾಲದ ಮಿತಿ (10 ವರ್ಷ, 20ವರ್ಷ...) ಇರುತ್ತದೆ. ಜೊತೆಗೆ ಬದಲಾಗುವ ಅಥವಾ ನಿಗದಿತ ಬಡ್ಡಿಯ ಭರವಸೆಯೂ ಇರುತ್ತದೆ. ಬಾಂಡ್‌ಗಳನ್ನು ವಿತರಿಸಿದ ನಿಗಮ ಅಥವಾ ಸರ್ಕಾರವು ಹೂಡಿಕೆದಾರರಿಗೆ ಕೊಡುವ ಬಡ್ಡಿಯೇ ‘ಬಾಂಡ್‌ ಗಳಿಕೆ’. ಬಾಂಡ್‌ ಖರೀದಿಸುವುದೆಂದರೆ, ಹೂಡಿಕೆದಾರರು ಬಾಂಡ್‌ ವಿತರಿಸುವ ಸಂಸ್ಥೆಗೆ ಸಾಲ ಕೊಡುತ್ತಿದ್ದಾರೆ ಎಂದರ್ಥ. ಇದಕ್ಕೆ ಪ್ರತಿಯಾಗಿ ಸರ್ಕಾರ ಅಥವಾ ನಿಗಮವು ಬಾಂಡ್‌ನ ಜೀವಿತಾವಧಿಯವರೆಗೂ ಹೂಡಿಕೆದಾರರಿಗೆ ಬಡ್ಡಿ ನೀಡಲು ಬದ್ಧವಾಗಿರುತ್ತದೆ. ಅಲ್ಲದೆ ಬಾಂಡ್‌ ಪಕ್ವವಾದಾಗ ಅದರ ಮುಖಬೆಲೆಯ ಹಣವನ್ನು ಸಹ ಮರಳಿಸುತ್ತದೆ.

ಇಲ್ಲಿ ಹೂಡಿಕೆದಾರರು ಬಾಂಡ್‌ ಪಕ್ವವಾಗುವವರೆಗೆ (ಕಾಲಮಿತಿ ಮುಗಿಯುವವರೆಗೆ) ಕಾಯುವ ಅಗತ್ಯವಿಲ್ಲ. ಷೇರುಗಳಂತೆ ಅವುಗಳನ್ನು ಹೆಚ್ಚಿನ ಅಥವಾ ಕಡಿಮೆ ಬೆಲೆಗೆ ಮಾರಾಟವನ್ನೂ ಮಾಡಬಹುದು. ಷೇರುಗಳ ಬೆಲೆ ಏರಿಳಿಕೆಯಾಗುವಂತೆ ಈ ಬಾಂಡ್‌ಗಳ ಮುಖಬೆಲೆಯೂ ಮಾರುಕಟ್ಟೆಯ ಏರುಪೇರಿಗೆ ಸಂವಾದಿಯಾಗಿ ಹೆಚ್ಚು–ಕಡಿಮೆ ಆಗುತ್ತದೆ.

ಬಾಂಡ್‌ಗಳ ವಿಚಾರದಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ, ಬಾಂಡ್‌ ‘ಮುಖಬೆಲೆ’ ಹಾಗೂ ಬಾಂಡ್‌ ‘ಗಳಿಕೆ’ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಏರಿಳಿಕೆ ಕಾಣುತ್ತವೆ. ಬಾಂಡ್‌ ಮುಖಬೆಲೆ ಏರಿಕೆಯಾದಾಗ, ಅದರ ಗಳಿಕೆ ಕಡಿಮೆಯಾಗುತ್ತದೆ. ಗಳಿಕೆ ಹೆಚ್ಚಾದಾಗ ಮುಖಬೆಲೆ ಕಡಿಮೆಯಾಗುತ್ತದೆ (ಇದಕ್ಕೆ ಕಾರಣವೆಂದರೆ; ಬಾಂಡ್‌ಗಳಿಗೆ ಒಂದು ವರ್ಷದಲ್ಲಿ ಕೊಡುವ ಬಡ್ಡಿಯನ್ನು, ಅದರ ಮುಖಬೆಲೆಯಿಂದ ಭಾಗಿಸಿ ಒಟ್ಟಾರೆ ಗಳಿಕೆಯನ್ನು ಲೆಕ್ಕ ಹಾಕುವುದು). ಅದರಂತೆ ಗಳಿಕೆ ಕಡಿಮೆಯಾದಾಗ ಬಾಂಡ್‌ ಮುಖಬೆಲೆ ಏರಿಕೆಯೂ ಆಗುತ್ತದೆ.

ಬಾಂಡ್‌ ಗಳಿಕೆ ನಿರ್ಧಾರ ಹೇಗೆ?
ಬಾಂಡ್‌ಗಳ ಗಳಿಕೆಯು ಆರ್ಥಿಕ ಸ್ಥಿತಿಗತಿಯನ್ನು ಅವಲಂಬಿಸಿರುತ್ತದೆ. ಆರ್ಥಿಕ ಹಿನ್ನಡೆಯಾದಾಗ ಹೆಚ್ಚು ಹೆಚ್ಚು ಹೂಡಿಕೆದಾರರು ಬಾಂಡ್‌ನಂಥ ಸುರಕ್ಷಿತ ಹೂಡಿಕೆಯತ್ತ ಮುಖಮಾಡುವುದರಿಂದ, ಬಾಂಡ್‌ಗಳ ಗಳಿಕೆ ಕಡಿಮೆ ಆಗುತ್ತದೆ. ಅದೇ, ಹಣದುಬ್ಬರ ಉಂಟಾದಾಗ ಅದನ್ನು ನಿಯಂತ್ರಿಸಲು ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿದರವನ್ನೂ ಏರಿಸುವುದರಿಂದ ಬಾಂಡ್‌ಗಳ ಗಳಿಕೆ ಹೆಚ್ಚಾಗುತ್ತದೆ.

ಬಾಂಡ್‌ ಗಳಿಕೆಯ ಪ್ರಮಾಣವು ಷೇರುಪೇಟೆಯ ಮೇಲೆ ಪರಿಣಾಮ ಉಂಟುಮಾಡುತ್ತದೆ. ಈ ಬಗ್ಗೆ ಹೂಡಿಕೆದಾರರು ಬಹಳ ಎಚ್ಚರದಿಂದ ಇರಬೇಕಾಗುತ್ತದೆ. ಬಾಂಡ್‌ ಗಳಿಕೆ ಹೆಚ್ಚಾಗಿದೆ ಎಂದರೆ ಷೇರುಪೇಟೆ ಇಳಿಮುಖವಾಗುತ್ತಿದೆ ಎಂದೇ ಅರ್ಥ (ಇದಕ್ಕೆ ಅಪವಾದವೂ ಇಲ್ಲದಿಲ್ಲ). ಬಾಂಡ್‌ ಗಳಿಕೆ ಕಡಿಮೆಯಾದರೆ ಷೇರುಪೇಟೆ ಏರುಮುಖದ ಹಾದಿ ಹಿಡಿಯುತ್ತದೆ ಎಂದು ಅರ್ಥೈಸಬಹುದು. ಅತಿ ಅಲ್ಪಾವಧಿಯ ಹೂಡಿಕೆಗೆ ಹೋಲಿಸಿದರೆ ಈ ಏರುಪೇರು ಗಮನಕ್ಕೆ ಬಾರದಿರಬಹುದು. ಆದರೆ 5 ಅಥವಾ 10 ವರ್ಷಗಳ ಅವಧಿಯನ್ನು ಹೋಲಿಸಿ ನೋಡಿದರೆ, ಈ ಏರುಪೇರು ಸ್ಪಷ್ಟವಾಗಿ ಕಾಣಿಸುತ್ತದೆ.

ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಬಾಂಡ್‌ ಗಳಿಕೆ ಹೆಚ್ಚು ಆಕರ್ಷಕವಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಈ ಅಂಶ ಸ್ಪಷ್ಟವಾಗಿ ಗೋಚರಿಸಿದೆ.

-‘ಇಜೆಡ್‌ ವೆಲ್ತ್‌’ನ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.