ಬೆಂಗಳೂರು: `ನಗರದಲ್ಲಿರುವ `ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿ~ನ (ಬಿಎಚ್‌ಇಎಲ್) ಮೂರು ಘಟಕಗಳು 2011-12ರ ಸಾಲಿನಲ್ಲಿ ರೂ 3,737 ಕೋಟಿ ವಹಿವಾಟು ನಡೆಸಿ, ರೂ 1,028 ಕೋಟಿ ತೆರಿಗೆ ಪೂರ್ವ ಲಾಭ ಗಳಿಸಿವೆ~ ಎಂದು ಬಿಎಚ್‌ಇಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಜಿ.ಗಣಪತಿ ರಾಮನ್ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, `ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ವಹಿವಾಟಿನ ಪ್ರಮಾಣವು ಶೇಕಡಾ 21ರಷ್ಟು ಹೆಚ್ಚಾಗಿದೆ. ಲಾಭದ ಪ್ರಮಾಣವು ಶೇ 13ರಷ್ಟು ಏರಿಕೆಯಾಗಿದೆ~ ಎಂದರು.
`ಮೈಸೂರು ರಸ್ತೆಯಲ್ಲಿರುವ ಕಾರ್ಖಾನೆಯ ವಿದ್ಯುನ್ಮಾನ ವಿಭಾಗ ಮತ್ತು ಮಲ್ಲೇಶ್ವರದಲ್ಲಿರುವ ಪಿಂಗಾಣಿ ವ್ಯವಹಾರ ಘಟಕಗಳು ಶೇ 14ರಷ್ಟು ಹಾಗೂ ಇಂಡಸ್ಟ್ರಿಯಲ್ ಸಿಸ್ಟಮ್ಸ ಗ್ರೂಪ್ ಶೇ 44ರಷ್ಟು ತೆರಿಗೆ ಪೂರ್ವ ಲಾಭ ಗಳಿಸಿವೆ. ಮೂರು ಘಟಕಗಳು ರೂ 1,152 ಕೋಟಿಗೂ ಹೆಚ್ಚು ರಫ್ತು ವಹಿವಾಟು ನಡೆಸಿವೆ, ರೂ 7,815 ಕೋಟಿ ಮೊತ್ತದ ಆರ್ಡರ್‌ಗಳನ್ನು ಪಡೆದಿವೆ~ ಎಂದರು.
`ಕಳೆದ ಮೂರು ವರ್ಷಗಳ ಅವಧಿಯಲ್ಲಿ 903 ಮಂದಿ ತಂತ್ರಜ್ಞರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ವರ್ಷ ವಿದ್ಯುನ್ಮಾನ ವಿಭಾಗದಲ್ಲಿ ರೂ 80 ಕೋಟಿ ಹೂಡಿಕೆ ಮಾಡಿ, 200 ಮಂದಿಯನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ~ ಎಂದರು.
`ಕರ್ನಾಟಕ ವಿದ್ಯುತ್ ನಿಗಮದ ವಿದ್ಯುತ್ ಸ್ಥಾವರಗಳಲ್ಲಿನ ಶೇ 76ರಷ್ಟು ಯಂತ್ರೋಪಕರಣಗಳನ್ನು ಬಿಎಚ್‌ಇಎಲ್ ಸರಬರಾಜು ಮಾಡಿದೆ. ರಾಷ್ಟ್ರದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿನ ಶೇ59ರಷ್ಟು ಯಂತ್ರೋಪಕರಣಗಳು ಬಿಎಚ್‌ಇಎಲ್‌ನದ್ದೇ ಆಗಿವೆ~ ಎಂದರು.
`ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಪದೇ ಪದೇ ಆಗುತ್ತಿರುವ ವೈಫಲ್ಯಕ್ಕೆ ನಮ್ಮ ಕಾರ್ಖಾನೆ ಕಾರಣವಲ್ಲ~ ಎಂದು ಹೇಳಿದ ಅವರು, `ಚಂದ್ರಯಾನ- 2 ಸೇರಿದಂತೆ ಇಸ್ರೊದ ಯಾವುದೇ ಬಾಹ್ಯಾಕಾಶ ಯೋಜನೆಗೆ ಬಿಎಚ್‌ಇಎಲ್ ಯಂತ್ರೋಪಕರಣಗಳನ್ನು ಪೂರೈಸುತ್ತಿಲ್ಲ~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
`ಭವಿಷ್ಯದಲ್ಲಿ ವಿದ್ಯುನ್ಮಾನ ವಿಭಾಗದ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು 20,000 ಮೆಗಾವಾಟ್‌ಗೆ ಹೆಚ್ಚಿಸುವ ಗುರಿ ಇದೆ. ವಿದ್ಯುತ್, ಕೈಗಾರಿಕೆ, ಸಾರಿಗೆ, ರಕ್ಷಣೆ, ಸಾಂಪ್ರದಾಯಿಕವಲ್ಲದ ಇಂಧನಗಳು ಮೊದಲಾದ ಕ್ಷೇತ್ರಗಳಲ್ಲಿ ಉದಯಿಸುತ್ತಿರುವ ವ್ಯಾಪಾರ ಅವಕಾಶಗಳತ್ತ ಗಮನ ಹರಿಸಲು ಚಿಂತನೆ ನಡೆದಿದೆ~ ಎಂದರು.
ಕಾರ್ಖಾನೆ ಪಿಂಗಾಣಿ ವ್ಯವಹಾರ ಘಟಕದ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಅಶೋಕ್, `1,200 ಕಿ.ವ್ಯಾ. ಸಾಮರ್ಥ್ಯದ ಪ್ರಸರಣ ಮಾರ್ಗಕ್ಕಾಗಿ ಡಿಸ್ಕ್ ಇನ್ಸುಲೇಟರ್, ಸೆರಾಪೈಪು ಮತ್ತಿತರ ಹೊಸ ಉತ್ಪನ್ನಗಳನ್ನು ಪರಿಚಯಿಸಲು ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ~ ಎಂದರು.
ಇಂಡಸ್ಟ್ರಿಯಲ್ ಸಿಸ್ಟಮ್ಸ ಗ್ರೂಪ್‌ನ ಪ್ರಧಾನ ವ್ಯವಸ್ಥಾಪಕ ಯು.ಎನ್.ಸಿಂಗ್ ಮಾತನಾಡಿ, `ನಮ್ಮ ಘಟಕವು ಇದೇ ಮೊದಲ ಬಾರಿಗೆ ರೂ 1,000 ಕೋಟಿಗೂ ಹೆಚ್ಚು ಮೊತ್ತದ ವಹಿವಾಟು ನಡೆಸಿದೆ. ಛತ್ತೀಸ್‌ಗಡದಲ್ಲಿ ಸ್ಥಾಪಿಸಲಾಗುತ್ತಿರುವ ಸಮಗ್ರ ಉಕ್ಕು ಸ್ಥಾವರಕ್ಕಾಗಿ ರೂ. 1395 ಕೋಟಿ ಮೊತ್ತದ ಕಚ್ಚಾ ವಸ್ತು ನಿರ್ವಹಣೆಯ ಆರ್ಡರ್ ಅನ್ನು ಪಡೆದುಕೊಂಡಿದೆ~ ಎಂದರು.ಕಾರ್ಖಾನೆಯ ವಿದ್ಯುನ್ಮಾನ ವಿಭಾಗದ ಪ್ರಧಾನ ವ್ಯವಸ್ಥಾಪಕ ಕೆ.ಸಿ.ರಾಮಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.