ADVERTISEMENT

ಬಿಗಿ ವಿತ್ತೀಯ ನೀತಿ: ಜಿಡಿಪಿಗೆ ಧಕ್ಕೆ

​ಪ್ರಜಾವಾಣಿ ವಾರ್ತೆ
Published 1 ಮೇ 2011, 19:30 IST
Last Updated 1 ಮೇ 2011, 19:30 IST

ವಾಷಿಂಗ್ಟನ್ (ಪಿಟಿಐ): ಬಿಗಿ ವಿತ್ತೀಯ ನೀತಿ ಅನುಸರಿಸುವುದರಿಂದ ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) 2011ನೇ ಸಾಲಿನಲ್ಲಿ  ಶೇ 8.2ಕ್ಕೆ ಇಳಿಕೆ ಕಾಣಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಭಿಪ್ರಾಯಪಟ್ಟಿದೆ.

ಈಗಾಗಲೇ ಹಣದುಬ್ಬರ ದರವನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎಂಟು ಬಾರಿ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಿದೆ. ಈ ರೀತಿ ನಿರಂತರ ಬಡ್ಡಿ ದರ ಹೆಚ್ಚಿಸುವುದು ವೃದ್ಧಿ ದರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ‘ಐಎಂಎಫ್’ ಹೇಳಿದೆ. ಏಷ್ಯಾದ ಹಲವು ದೇಶಗಳು ಜಾಗತಿಕ ಆರ್ಥಿಕ ಹಿಂಜರಿತದ ನಂತರ ಉತ್ತಮ ಚೇತರಿಕೆಯಲ್ಲಿದೆ. ಆದರೆ, ಈ ಪ್ರಗತಿ ಪಥ ಅಪಾಯಕಾರಿಯಾಗಿದ್ದು, ವೃದ್ಧಿ ದರಕ್ಕೆ ಅನುಕೂಲಕರ ವಿತ್ತೀಯ ನೀತಿಗಳನ್ನು ರೂಪಿಸಬೇಕು ಎಂದು ‘ಐಎಂಎಫ್’ ತನ್ನ ‘ಏಷ್ಯಾ ಮತ್ತು ಪೆಸಿಫಿಕ್ ವಲಯ ಆರ್ಥಿಕ ಮುನ್ನೋಟ’ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.ದೇಶದ ಆರ್ಥಿಕ ವೃದ್ಧಿ ದರ 2010ರಲ್ಲಿ ಶೇ 10.4ರಷ್ಟಿತ್ತು. ಬಿಗಿ ವಿತ್ತೀಯ ನೀತಿಯಿಂದ ಇದು  2011ರಲ್ಲಿ  ಶೇ 8.2 ಮತ್ತು 2012ರಲ್ಲಿ ಶೇ 7.8ಕ್ಕೆ ಕುಸಿಯುವ ಸಾಧ್ಯತೆಗಳು  ಹೆಚ್ಚಿವೆ ಎನ್ನಲಾಗಿದೆ.

ಈಗಾಗಲೇ ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ದೇಶದ ಆರ್ಥಿಕ ವೃದ್ಧಿ ದರ ಪ್ರಸಕ್ತ ಹಣಕಾಸು ವರ್ಷದಲ್ಲಿ  ಶೇ 8.2ಕ್ಕೆ ಕುಸಿಯಲಿದೆ ಎಂದು ಹೇಳಿದೆ. ‘ಆರ್‌ಬಿಐ’ ಕಳೆದ ಮಾರ್ಚ್ 2010ರಿಂದ ಎಂಟು ಬಾರಿ ಅಲ್ಪಾವಧಿ ಬಡ್ಡಿ ದರಗಳಾದ ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು ಹೆಚ್ಚಿಸಿದೆ.  ಮೇ 3ರಂದು ‘ಆರ್‌ಬಿಐ’ನ ವಾರ್ಷಿಕ ಸಾಲ ನೀತಿ ಪ್ರಕಟಗೊಳ್ಳಲಿದ್ದು, ಮತ್ತೊಮ್ಮೆ  ಸಾಲದ ಮೇಲಿನ ಬಡ್ಡಿ ದರಗಳು ದುಬಾರಿಯಾಗುವ ಸಾಧ್ಯತೆ ಹೆಚ್ಚಿದೆ.  2010ನೇ ಸಾಲಿನಲ್ಲಿ ಭಾರತದ ‘ಜಿಡಿಪಿ’ ಶೇ 10.4ರಷ್ಟಿದ್ದು, ಶೇ 10.3ರಷ್ಟಿದ್ದ ಚೀನಾವನ್ನು ಹಿಂದಿಕ್ಕಿತ್ತು. ಸದ್ಯ ಇವೆರಡು ದೇಶಗಳು ಏಷ್ಯಾದ ಮುಂಚೂಣಿ ಆರ್ಥಿಕ ಶಕ್ತಿಗಳಾಗಿವೆ. ಏಷ್ಯಾ ವಲಯ ಕಳೆದ ವರ್ಷದ ಶೇ 8.3ರಷ್ಟು ವೃದ್ಧಿ ದರ ದಾಖಲಿಸಿತ್ತು. ಇದು 2011ರಲ್ಲಿ ಶೇ 6.8ಕ್ಕೆ ಪ್ರಗತಿ ಕುಸಿಯಲಿದೆ ಎಂದು ವರದಿ ಹೇಳಿದೆ.

ADVERTISEMENT

ಏಷ್ಯಾ ವಲಯದಲ್ಲಿ ಹಣದುಬ್ಬರ ದರ ಪ್ರಸಕ್ತ ಹಣಕಾಸು ವರ್ಷದಲ್ಲಿ ಇನ್ನೂ ಹೆಚ್ಚಲಿದ್ದು, ಮಾರ್ಚ್ ಅಂತ್ಯದ ವೇಳೆಗೆ ದೇಶದ ಹಣದುಬ್ಬರ ಶೇ 9ರ ಆಸುಪಾಸಿಗೆ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.