ADVERTISEMENT

ಬುಲೆಟ್‌ ರೈಲು: ಸಿದ್ದರಾಮಯ್ಯ ಆಸಕ್ತಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ತಮ್ಮ ತವರು ಮೈಸೂರಿಗೆ ಬೆಂಗಳೂರಿನಿಂದ ಬುಲೆಟ್‌ ರೈಲು ಓಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಸಕ್ತಿ ತೋರಿದ್ದಾರೆ. ಇದಕ್ಕೆ ನೆರವಾಗಲು ಜಪಾನ್‌ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಅವರು ಸೋಮವಾರ ಇಲ್ಲಿ ಹೇಳಿದರು.

ಚೀನಾದ ದಾಲಿಯನ್‌ನಲ್ಲಿ ಇತ್ತೀಚೆಗೆ ನಡೆದ ವಿಶ್ವ ಆರ್ಥಿಕ ವೇದಿಕೆ ಸಮಾವೇಶದ ಸಂದರ್ಭದಲ್ಲಿ ಜಪಾನ್‌ ದೇಶದ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹಕುಬುನ್‌ ಶಿಮೊಮುರಾ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಕುರಿತು ಚರ್ಚಿಸ­ಲಾಯಿತು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬುಲೆಟ್‌ ರೈಲು ತಂತ್ರಜ್ಞಾನದಲ್ಲಿ ಜಪಾನ್‌ ಹೆಸರು ಮಾಡಿದೆ. ಈ ಕಾರಣಕ್ಕೆ ತಂತ್ರಜ್ಞಾನ ಮತ್ತು ಬಂಡವಾಳದೊಂದಿಗೆ ಕರ್ನಾಟಕಕ್ಕೆ ಬರುವಂತೆ ಜಪಾನ್ ಸಚಿವರನ್ನು ಕೋರಿದ್ದಾಗಿ ಅವರು ಹೇಳಿದರು.ಬೆಂಗಳೂರು ನಗರ ಮತ್ತು ಬೆಂಗಳೂರು– ಮೈಸೂರು ನಡುವೆ ಸಂಚಾರ ದಟ್ಟಣೆ ಹೆಚ್ಚಾಗಿದೆ. ಹೀಗಾಗಿ ಬುಲೆಟ್‌ ರೈಲು ಅಗತ್ಯ. ಜಪಾನ್‌ನಲ್ಲಿ ಒಂದು ಗಂಟೆಗೆ 250 ಕಿ.ಮೀ. ವೇಗದಲ್ಲಿ ಚಲಿಸುವ ಬುಲೆಟ್‌ ರೈಲು ಇದೆ. ಅಂತಹ ರೈಲು ಯೋಜನೆಯನ್ನು ರಾಜ್ಯದಲ್ಲಿಯೂ ಕೈಗೆತ್ತಿಕೊಂಡರೆ, ಬೆಂಗಳೂರು– ಮೈಸೂರು ನಡುವಿನ ಸಂಚಾರದ ಸಮಯ 30 ನಿಮಿಷಕ್ಕೆ ಇಳಿಯಲಿದೆ ಎಂದು ಅವರು ವಿವರಿಸಿದರು.

ಮೊದಲ ಹಂತದ ಯೋಜನೆ ಯಶಸ್ವಿಯಾದರೆ, ನಂತರದ ದಿನಗಳಲ್ಲಿ ಬೆಂಗಳೂರಿನಿಂದ ಇತರ ನಗರಗಳಿಗೆ ಸಂಪರ್ಕ ಕಲ್ಪಿಸಲು ಗಮನಹರಿಸ­ಲಾಗು­ವುದು ಎಂದು ವಿವರಿಸಿದರು.

ಕಾರ್ಗಿಲ್‌ ಕಂಪೆನಿ: ಸ್ಟಾರ್ಚ್ ಉತ್ಪಾದನೆ ಮಾಡುವ ಕಾರ್ಗಿಲ್‌ ಸಂಸ್ಥೆಯ ಪ್ರತಿನಿಧಿಗಳ ಜತೆಗೂ ಚೀನಾ ಭೇಟಿ ಸಂದರ್ಭದಲ್ಲಿ ಮಾತುಕತೆ ನಡೆಸಲಾಯಿತು. ಈ ಸಂಸ್ಥೆ ದಾವಣಗೆರೆಯಲ್ಲಿ 480 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಟಾರ್ಚ್ ಉತ್ಪಾದನಾ ಘಟಕವನ್ನು ಸ್ಥಾಪಿಸಿದ್ದು, ರಾಜ್ಯದ ಇತರ ನಗರಗಳಲ್ಲಿಯೂ ಬಂಡವಾಳ ಹೂಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ 54 ಸಾವಿರ ಮೆಗಾವಾಟ್‌ ಪವನ ವಿದ್ಯುತ್‌ ಉತ್ಪಾದನೆಗೆ ಅವಕಾಶ ಇದ್ದು, ಹೆಚ್ಚು ಬಂಡವಾಳ ಹೂಡುವಂತೆ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಮುಖ್ಯಸ್ಥರನ್ನು ಕೋರಲಾಯಿತು. ರಾಜ್ಯದಲ್ಲಿ ಪ್ರಸ್ತುತ ಕೇವಲ ಎರಡು ಸಾವಿರ ಮೆಗಾವಾಟ್‌ ಪವನ ವಿದ್ಯುತ್‌ ಉತ್ಪಾದನೆ ಆಗುತ್ತಿದೆ ಎಂದರು. ದಕ್ಷಿಣ ಆಫ್ರಿಕಾದ ಎಸ್ಸಿಯೋನ ಸಂಸ್ಥೆಯ ಮುಖ್ಯ ಅಂತರರಾಷ್ಟ್ರೀಯ ಅಧಿಕಾರಿ ಕಾರ್ಮೆನ್‌ ಬೆಕರಿಲ್‌ ಅವರನ್ನು ಭೇಟಿ ಮಾಡಿ ಪವನ ವಿದ್ಯುತ್‌ ಕ್ಷೇತ್ರದಲ್ಲಿ ಬಂಡವಾಳ ಹೂಡುವಂತೆ ಮನವಿ ಮಾಡಲಾಯಿತು ಎಂದು ಹೇಳಿದರು.

ಹನಿ ನೀರಾವರಿ: ರಾಜ್ಯದಲ್ಲಿ ಹನಿ ಮತ್ತು ತುಂತುರು ನೀರಾವರಿಗೆ ಹೆಚ್ಚಿನ ಅವಕಾಶ ಇದ್ದು, ಬಂಡವಾಳ ಹೂಡಿಕೆಗೆ ಮುಂದೆ ಬರುವಂತೆ ಸಂಬಂಧಪಟ್ಟ ಕಂಪೆನಿಗಳ ಮುಖ್ಯಸ್ಥರ ಜತೆಗೂ ಮಾತುಕತೆ ನಡೆಸಲಾಯಿತು ಎಂದರು.

ಸಮಾವೇಶ ನಡೆಯುತ್ತಿದ್ದ ದಾಲಿಯಾನ ಸಮೀಪ ಅಂತರರಾಷ್ಟ್ರೀಯ ಲೋಹ ಉತ್ಪಾದನಾ ಕಂಪೆನಿ ಇದ್ದು, ರಾಜ್ಯದಲ್ಲಿಯೂ ಬಂಡವಾಳ ಹೂಡುವಂತೆ ಅದರ ಮುಖ್ಯಸ್ಥರಿಗೆ ಮನವಿ ಮಾಡಲಾಯಿತು ಎಂದು ವಿವರಿಸಿದರು.

ಕೆಪಿಎಸ್‌ಸಿ: ಸಂಪುಟದಲ್ಲಿ ಚರ್ಚೆ
ಬೆಂಗಳೂರು:
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಗೆಜೆಟೆಡ್‌ ಪ್ರೊಬೇಷನರ್ಸ್ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸಿಐಡಿ ತನಿಖಾ ವರದಿ ಸರ್ಕಾರದ ಕೈಸೇರಿದೆ. ಆದರೆ, ವರದಿಯಲ್ಲಿ ಏನಿದೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಸಮಾವೇಶ ಕೇಂದ್ರ
ಇಲ್ಲಿನ ಅಂತರರಾಷ್ಟ್ರೀಯ ವಿಮಾನ ಇಲ್ದಾಣ ಸಮೀಪ 400ರಿಂದ 500 ಕೋಟಿ ರೂಪಾಯಿ ವೆಚ್ಚದಲ್ಲಿ ಅಂತರರಾಷ್ಟ್ರೀಯ ಕನ್ವೆನ್ಷನ್‌ ಸೆಂಟರ್‌ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ವಿಶ್ವ ಆರ್ಥಿಕ ವೇದಿಕೆಯ ಸಮಾವೇಶ ಸಲುವಾಗಿ ದಾಲಿಯಾನ್‌ನಲ್ಲಿ ಕೇವಲ 9 ತಿಂಗಳಲ್ಲಿ ಅದ್ಬುತವಾದ ಕನ್ವೆನ್ಷನ್‌ ಸೆಂಟರ್‌ ನಿರ್ಮಿ­ಸಲಾಗಿದೆ. ಅಂತಹದ್ದು ರಾಜ್ಯದಲ್ಲಿಯೂ ಇರಬೇಕು ಎನ್ನುವ ಆಸೆ ನನ್ನದು. ಹಿಂದಿನ ಸರ್ಕಾರ ಇದಕ್ಕೆ ಯೋಜನೆ ಸಿದ್ಧಪಡಿಸಿತ್ತು. ಟೆಂಡರ್‌ನಲ್ಲಿ 1ಕಂಪೆನಿ ಮಾತ್ರ ಭಾಗವಹಿಸಿತ್ತು ಎನ್ನುವ ಕಾರಣಕ್ಕೆ ಅದು ನೆನೆಗುದಿಗೆ ಬಿದ್ದಿದೆ. ಮತ್ತೆ ಚಾಲನೆ ನೀಡಲಾ­ಗುವುದು. ಖಾಸಗಿ ಸಹಭಾಗಿತ್ವದಲ್ಲಿ ಕನ್ವೆನ್ಷನ್‌ ಸೆಂಟರ್‌ ತಲೆ ಎತ್ತಲಿದೆ’ ಎಂದು ಹೇಳಿದರು.

ಭೇಟಿ ಮಾಡಿದ ಇತರ ಗಣ್ಯರು
ಫಿಲ್‌ಲ್ಯಾಂಡ್‌ ಪ್ರಧಾನಿ ಜರ್ಕಿ ಕಟೈನನ್‌, ಐದು ಲಕ್ಷ ಜನಸಂಖ್ಯೆ ಇರುವ ಮಾಲ್ಟಾ ದೇಶದ ಪ್ರಧಾನಿ ಜೋಸೆಫ್‌ ಮಸ್ಕಟ್‌, ವಿಶ್ವ ಆಥಿರ್ಕ ವೇದಿಕೆ ಅಧ್ಯಕ್ಷ ಪ್ರೊ ಕ್ಲಾಸ್‌ ಶ್ವಾಬ್‌, ನೆಸ್ಲೆ ಕಂಪೆನಿಯ ಅಧ್ಯಕ್ಷ ರೋಲ್ಯಾಂಡ್‌ ಡೆಕೊರ್‌ವೆಟ್‌, ನೆದರ್‌ಲ್ಯಾಂಡ್‌ನ ರಾಯಲ್‌ ಡಿಎಸ್‌ಎಂನ ಸಿ.ಇ.ಓ ಫೀಕ್‌ ಸಿಜ್‌ಬೆಸ್ಮ, ದಿ ಕ್ಲೈಮೆಟ್‌ ಗ್ರೂಪ್‌ ನಿರ್ದೇಶಕ ವೂ ಚಾಂಗ್ವಾ, ಕ್ಯೂ ಒನ್‌ ಗ್ರೂಪ್‌ ಅಧ್ಯಕ್ಷ ವಿಜಯ್‌ ಈಶ್ವರನ್‌ ಮತ್ತಿತರರು.

ಚೀನಾ ನೋಡಿ ದಂಗಾಗಿಲ್ಲ
ಬೆಂಗಳೂರು:
‘ಚೀನಾದ ಬೆಳವಣಿಗೆ ನೋಡಿ ನಾನು ದಂಗಾಗಿಲ್ಲ. ಆದರೆ, ಅಲ್ಲಿ ರಸ್ತೆ  ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ  ತುಂಬಾ ಮುಂದಿದೆ. ಇಷ್ಟು ಬಿಟ್ಟರೆ ನಮಗಿಂತ ವಿಶೇಷ ಏನೂ ಅಲ್ಲಿ ಇಲ್ಲ..’ ಹೀಗೆ ಹೇಳಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ.

ಮುಕ್ತ ಆರ್ಥಿಕ ನೀತಿ ಜಾರಿಯಾಗುವುದಕ್ಕೂ ಮುನ್ನ ಆ ದೇಶದಲ್ಲಿ ಶೇ 80ರಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದರು. ಆದರೆ, ಹೊಸ ಆರ್ಥಿಕ ಸುಧಾರಣೆಗಳ ನಂತರ ಈಗ ಅದು ಶೇ 20ಕ್ಕೆ ಇಳಿದಿದೆ. ಇದೇ ದೊಡ್ಡ ಸಾಧನೆ. ಹತ್ತು ವರ್ಷಗಳ ಹಿಂದೆ ಇದ್ದ ಶಾಂಘೈಗೂ ಈಗಿನ ಶಾಂಘೈಗೆ ತುಂಬಾ ವ್ಯತ್ಯಾಸ ಇದೆ. 2001ರಲ್ಲಿ ನಾನು ಅಲ್ಲಿಗೆ ಭೇಟಿ ನೀಡಿದ್ದೆ. ಅದರ ನಂತರ ಅದು ತುಂಬಾ ವೇಗವಾಗಿ ಬದಲಾವಣೆ ಆಗಿದೆ ಎಂದು ಹೇಳಿದರು.

ಶಾಂಘೈ ನಗರ ನೋಡುವ ಉದ್ದೇಶದಿಂದ ಕೊನೆ ದಿನ ಅಲ್ಲಿ ಸುತ್ತಾಡಲಾಯಿತು. ಅಧಿಕಾರಿಗಳು ಕೊನೆ ದಿನ ವಾಣಿಜ್ಯ ನಿಯೋಗಗಳ ಜತೆ ಚರ್ಚಿಸಿದರು. ಕೆಲವರು ಕಾರ್ಖಾನೆಗಳಿಗೂ ಭೇಟಿ ಕೊಟ್ಟಿದ್ದರು ಎಂದರು.

ಜುಬ್ಬಾ, ಪಂಚೆಯೇ ಕಂಫರ್ಟ್
ಚೀನಾ ಪ್ರವಾಸ ಸಂದರ್ಭದಲ್ಲಿ ಸೂಟು–ಬೂಟು ಧರಿಸಿದ್ದು ಹೆಚ್ಚು ಹಿತ ಅನಿಸಲಿಲ್ಲ ಎನ್ನುತ್ತಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ಈಗಿರುವುದೇ (ಜುಬ್ಬಾ, ಪಂಚೆ) ಬೆಸ್ಟ್‌. ಸೂಟು–ಬೂಟು ಹಿತವಲ್ಲ ಎಂದು ಅವರು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಭಾರತದ ಊಟ– ತಿಂಡಿ ಎಲ್ಲ ಕಡೆ ಸಿಗುತ್ತದೆ. ನಮ್ಮನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಅದೆಲ್ಲವನ್ನೂ ವ್ಯವಸ್ಥೆ ಮಾಡಿದ್ದರು. ಹೀಗಾಗಿ ಹೆಚ್ಚು ಕಷ್ಟ ಆಗಲಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT