ನವದೆಹಲಿ (ಪಿಟಿಐ): ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ದೆಹಲಿ ಅತಿ ಹೆಚ್ಚು ಕೋಟ್ಯಧೀಶರನ್ನು ಹೊಂದಿದ ಏಷ್ಯಾ–ಪೆಸಿಫಿಕ್ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
41,200 ಕೊಟ್ಯಧೀಶರನ್ನು ಹೊಂದಿದ ಮುಂಬೈ ಹಾಗೂ 20,600 ಕೋಟ್ಯಧೀಶರಿರುವ ದೆಹಲಿ ಕ್ರಮವಾಗಿ 12 ಮತ್ತು 20ನೇ ಸ್ಥಾನದಲ್ಲಿವೆ. ಅತಿ ಹೆಚ್ಚು ಕೋಟ್ಯಧೀಶರನ್ನು ಹೊಂದಿದ ನಗರಗಳ ಪಟ್ಟಿಯಲ್ಲಿ 2,64,000 ಶ್ರೀಮಂತರನ್ನು ಹೊಂದಿದ ಟೋಕಿಯೊ ಅಗ್ರ ಸ್ಥಾನದಲ್ಲಿದೆ.
ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕೋಟ್ಯಧೀಶರ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ ಇಂಡೊನೇಷ್ಯಾದ ಜಕಾರ್ತ ಅಗ್ರ ಸ್ಥಾನದಲ್ಲಿ ಮತ್ತು ಚೀನಾದ ಹಾಂಗ್‌ಜೌ ಹಾಗೂ ತಿಯಾಂಜಿನ್ ನಂತರದ ಕ್ರಮಾಂಕದಲ್ಲಿವೆ.
ಕಳೆದ 10 ವರ್ಷಗಳಿಂದ ಜಕಾರ್ತ ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಕಾಪಾಡಿಕೊಂಡು ಬಂದಿದೆ.
2000–2015ರ ಅವಧಿಯಲ್ಲಿ ಶೇ 357 ಮತ್ತು ಶೇ 335 ಪ್ರಗತಿ ಕಂಡ ಮುಂಬೈ ಹಾಗೂ ದೆಹಲಿ ಈ ಪಟ್ಟಿಯಲ್ಲಿ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ಬಹುಕೋಟಿ ಸಂಪತ್ತು ಹೊಂದಿದ ಶ್ರೀಮಂತರಿರುವ ನಗರಗಳ ಪೈಕಿ ಹಾಕಾಂಗ್ ಮೊದಲ ಸ್ಥಾನದಲ್ಲಿದೆ. ಅಲ್ಲಿ 9,650 ಬಹುಕೋಟಿ ಒಡೆಯರಿದ್ದಾರೆ.
2,690 ಬಹುಕೋಟಿ ಒಡೆಯರಿರುವ ಮುಂಬೈ 8ನೇ ಹಾಗೂ 1,340 ಶ್ರೀಮಂತರಿರುವ ದೆಹಲಿ 14ನೇ ಕ್ರಮಾಂಕದಲ್ಲಿದ್ದರೆ, 430 ಬಹುಕೋಟಿ ಒಡೆಯರನ್ನು ಹೊಂದಿರುವ ಬೆಂಗಳೂರು ಐದನೇ ಸ್ಥಾನದಲ್ಲಿದೆ.
ಹತ್ತು ಸಾವಿರ ಅಥವಾ ಅದಕ್ಕಿಂತ ಕಡಿಮೆ ಕೋಟ್ಯಧೀಶರನ್ನು ಹೊಂದಿರುವ ಭಾರತದ ಆರು ನಗರಗಳು ಈ ಪಟ್ಟಿಯಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.