ADVERTISEMENT

ಭಾರತ-ಪಾಕಿಸ್ತಾನ ಮಧ್ಯೆ ವಾಘಾ ಗಡಿಯಲ್ಲಿ ಸರಕು ಸಾಗಾಣಿಕೆಗೆ ಪ್ರತ್ಯೇಕ ದ್ವಾರ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST
ಭಾರತ-ಪಾಕಿಸ್ತಾನ ಮಧ್ಯೆ ವಾಘಾ ಗಡಿಯಲ್ಲಿ ಸರಕು ಸಾಗಾಣಿಕೆಗೆ ಪ್ರತ್ಯೇಕ ದ್ವಾರ
ಭಾರತ-ಪಾಕಿಸ್ತಾನ ಮಧ್ಯೆ ವಾಘಾ ಗಡಿಯಲ್ಲಿ ಸರಕು ಸಾಗಾಣಿಕೆಗೆ ಪ್ರತ್ಯೇಕ ದ್ವಾರ   

ಲಾಹೋರ್ (ಪಿಟಿಐ,ಐಎಎನ್‌ಎಸ್): ಭಾರತ ಮತ್ತು ಪಾಕಿಸ್ತಾನ ಮಧ್ಯೆ ಸರಕುಗಳ ಸಾಗಾಣಿಕೆಗೆ ಅಟ್ಟಾರಿ - ವಾಘಾ ಗಡಿಯಲ್ಲಿ ಪ್ರತ್ಯೇಕ ದ್ವಾರವನ್ನು  ಏಪ್ರಿಲ್ ಅಂತ್ಯಕ್ಕೆ ಆರಂಭಿಸಲಾಗುವುದು ಎಂದು ವಾಣಿಜ್ಯ ಸಚಿವ ಆನಂದ ಶರ್ಮಾ, ಸೋಮವಾರ ಇಲ್ಲಿ ತಿಳಿಸಿದರು. 

ವಾಘಾ ಗಡಿಯಲ್ಲಿ ಸರಕುಗಳ ಸಾಗಾಟಕ್ಕೆ ಪ್ರತ್ಯೇಕ ಮಾರ್ಗ ನಿರ್ಮಾಣದ ಸಿದ್ಧತೆಗಳೆಲ್ಲ ಪೂರ್ಣಗೊಂಡಿವೆ. ಏಪ್ರಿಲ್ 30 ರಂದು  ಈ ದ್ವಾರ ಬಳಕೆಗೆ ಸಿದ್ಧಗೊಳ್ಳಲಿದೆ ಎಂದು ಶರ್ಮಾ ಅವರು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ಪಾಕಿಸ್ತಾನದ ವಾಣಿಜ್ಯ ಸಚಿವ ಮಕ್ದೂಂ ಮೊಹಮ್ಮದ್ ಅಮಿನ್ ಫಾಹೀಂ ಅವರ ಜತೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಎರಡೂ ದೇಶಗಳ ಮಧ್ಯದ ವಾಣಿಜ್ಯ ವಹಿವಾಟು ಹೆಚ್ಚಳಗೊಳ್ಳುವ ಬಗ್ಗೆ ಇಬ್ಬರೂ ಸಚಿವರು ಆಶಾವಾದ ವ್ಯಕ್ತಪಡಿಸಿದರು.

ಪರಮಾಪ್ತ ಸ್ಥಾನಮಾನ: ಭಾರತಕ್ಕೆ ಉದ್ದಿಮೆ ವಹಿವಾಟಿನ `ಪರಮಾಪ್ತ ಸ್ಥಾನಮಾನ~ವನ್ನು ಶೀಘ್ರದಲ್ಲಿಯೇ ನೀಡಲಾಗುವುದು ಎಂದೂ ಫಾಹೀಂ ಇದೇ ಸಂದರ್ಭದಲ್ಲಿ ಪ್ರಕಟಿಸಿದರು.

ಸಚಿವ ಸಂಪುಟವು ಈ ಬಗ್ಗೆ ತಾತ್ವಿಕ ಒಪ್ಪಿಗೆ ನೀಡಿದ್ದು, ಸರ್ಕಾರವು ಶೀಘ್ರದಲ್ಲಿಯೇ ಈ ನಿರ್ಧಾರ ಅನುಮೋದಿಸಲಿದೆ. ಎರಡೂ ದೇಶಗಳ ಉದ್ದಿಮೆದಾರರ ವೀಸಾಕ್ಕೆ  ಸಂಬಂಧಿಸಿದ ವಿವಾದವನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.

ಆನಂದ್ ಶರ್ಮಾ, 120 ಸದಸ್ಯರ ನಿಯೋಗದ ಜತೆ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ. ಕಳೆದ ವರ್ಷ ಫಾಹೀಂ ಅವರು, 80 ಸದಸ್ಯರ ನಿಯೋಗದ ಜತೆ ಭಾರತಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಉಭಯ ದೇಶಗಳ ವಾಣಿಜ್ಯ ವಹಿವಾಟನ್ನು ಮುಂದಿನ 3 ವರ್ಷಗಳಲ್ಲಿ ರೂ 30,000 ಕೋಟಿಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.