ADVERTISEMENT

`ಭಾರಿ' ಬಡ್ಡಿ ಜಾಹೀರಾತಿಗೆ ಶೀಘ್ರ ನಿರ್ಬಂಧ

ವಂಚಕ ಠೇವಣಿ ಯೋಜನೆ ತಡೆ ಯತ್ನ: ಪೈಲಟ್

​ಪ್ರಜಾವಾಣಿ ವಾರ್ತೆ
Published 21 ಜುಲೈ 2013, 19:59 IST
Last Updated 21 ಜುಲೈ 2013, 19:59 IST

ನವದೆಹಲಿ (ಪಿಟಿಐ): ಭಾರೀ ಬಡ್ಡಿ, ಹೆಚ್ಚಿನ ಗಳಿಕೆಯ ಆಮಿಷಗಳನ್ನು ಒಡ್ಡುವ, ವಂಚನೆಯೇ ಮುಖ್ಯ ಉದ್ದೇಶವಾಗಿರುವ ಹಣಕಾಸು ಯೋಜನೆಗಳು ದೇಶದಾದ್ಯಂತ ನಾಯಿಕೊಡೆಗಳಂತೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ಮೊದಲಿಗೆ ಇಂತಹ ನಕಲಿ ಠೇವಣಿ ಯೋಜನೆಗಳ ಜಾಹೀರಾತು ನಿಷೇಧಿಸುವ ಕುರಿತು ಗಂಭೀರ ಚಿಂತನೆ ನಡೆಸುತ್ತಿದೆ.

ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿಯ ಆಕರ್ಷಣೆ ತೋರಿ ಠೇವಣಿಗಳನ್ನು ಅಕ್ರಮವಾಗಿ ಸಂಗ್ರಹಿಸುತ್ತಿರುವ ಚಟುವಟಿಕೆ ದೇಶದಲ್ಲಿ ಹೆಚ್ಚುತ್ತಿದೆ. ಇಂತಹ ವಾಸ್ತವತೆಗೆ ದೂರವಾದ ಠೇವಣಿ ಯೋಜನೆಗಳ ಜಾಹೀರಾತುಗಳನ್ನು ಪೂರ್ಣವಾಗಿ ನಿಷೇಧಿಸಬೇಕಿದೆ. ಲಿಕ್ಕರ್ ಮತ್ತು ಸಿಗರೇಟ್ ಜಾಹೀರಾತುಗಳನ್ನು ನಿರ್ಬಂಧಿಸಿದಂತೆಯೇ ವಂಚಕ ಠೇವಣಿ ಯೋಜನೆಗಳ ವಿರುದ್ಧವೂ ಕಟ್ಟುನಿಟ್ಟಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಕೇಂದ್ರ ಕಂಪೆನಿ ವ್ಯವಹಾರಗಳ ಖಾತೆ ರಾಜ್ಯ ಸಚಿವ ಸಚಿನ್ ಪೈಲಟ್ ಭಾನುವಾರ ಇಲ್ಲಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

ಪಶ್ಚಿಮ ಬಂಗಾಳದಲ್ಲಿ `ಶಾರದಾ ಚಿಟ್ ಫಂಡ್' ಎಂಬ ಖಾಸಗಿ ಹಣಕಾಸು ಸಂಸ್ಥೆಯಿಂದ ಸಾವಿರಾರು ಮಂದಿ ಕೋಟ್ಯಂತರ ಹಣ ಕಳೆದುಕೊಂಡಿರುವುದರತ್ತ ಬೊಟ್ಟು ಮಾಡಿದ ಪೈಲಟ್, ಸಾರ್ವಜನಿಕರು ಮೋಸ ಹೋಗುವುದನ್ನು ತಪ್ಪಿಸಲು ಇಂತಹ ಠೇವಣಿ ಯೋಜನೆಗಳನ್ನು ತಡೆಯುವ ನಿಟ್ಟಿನಲ್ಲಿ ಸಮಗ್ರ ಸ್ವರೂಪದ ಮಾರ್ಗಸೂಚಿ ರೂಪಿಸಲಾಗುವುದು. ಕಂಪೆನಿ ವ್ಯವಹಾರಗಳ ಸಚಿವಾಲಯ, ಹಣಕಾಸು ಸಚಿವಾಲಯ, ಹಣಕಾಸು ಮಾರುಕಟ್ಟೆ ನಿಯಂತ್ರಣ ಸಂಸ್ಥೆಗಳು ಒಟ್ಟಾಗಿ ಬಿಗಿಯಾದ ಮಾರ್ಗಸೂಚಿ ಸಿದ್ಧಪಡಿಸಲಿವೆ ಎಂದರು.

ಇದೇ ಕಾರಣಕ್ಕಾಗಿ ಮೇ ತಿಂಗಳಲ್ಲಿಯೇ ವಿವಿಧ ಸಚಿವಾಲಯಗಳ ಸಮಿತಿ ರಚಿಸಲಾಗಿದೆ. ಅಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ(ಸೆಬಿ) ಅಗತ್ಯ ಸಲಹೆ-ಸೂಚನೆ ನೀಡಲಿವೆ ಎಂದು ಸಚಿವ ಪೈಲಟ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.