ADVERTISEMENT

ಮಂಗೋಲಿಯಾ:ಹೂಡಿಕೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2011, 19:30 IST
Last Updated 2 ಸೆಪ್ಟೆಂಬರ್ 2011, 19:30 IST
ಮಂಗೋಲಿಯಾ:ಹೂಡಿಕೆಗೆ ಅವಕಾಶ
ಮಂಗೋಲಿಯಾ:ಹೂಡಿಕೆಗೆ ಅವಕಾಶ   

ಬೆಂಗಳೂರು: ಮಂಗೋಲಿಯಾ ದೇಶದ ಜನಸಂಖ್ಯೆ 27 ಲಕ್ಷ, ದನಗಳ ಸಂಖ್ಯೆ 45 ಲಕ್ಷ! ಇದನ್ನು ಬಹಿರಂಗ ಪಡಿಸಿದವರು ಭಾರತದಲ್ಲಿನ ಮಂಗೋಲಿಯಾ ರಾಯಭಾರಿ ವಿ.ಎಂಕ್‌ಬೋಲ್ಡ್.

`ಮಂಗೋಲಿಯಾದಲ್ಲಿ ವ್ಯಾಪಾರಕ್ಕಿರುವ ಅವಕಾಶಗಳು~ ವಿಷಯದ ಕುರಿತಂತೆ ಶುಕ್ರವಾರ ನಗರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಈ ಕಾರ್ಯಕ್ರಮ ಆಯೋಜಿಸಿತ್ತು.

`ಮಂಗೋಲಿಯಾದಲ್ಲಿ ಕೃಷಿಗೆ ಉತ್ತಮ ಪ್ರೋತ್ಸಾಹ ನೀಡಲಾಗುತ್ತಿದೆ. ಹೈನುಗಾರಿಕೆ ಪ್ರಮುಖ ವೃತ್ತಿ. ಜನಸಂಖ್ಯೆಗಿಂತ ಹಸುಗಳೇ ಹೆಚ್ಚಿನ ಪ್ರಮಾಣದಲ್ಲಿ ಇವೆ. ಒಬ್ಬರಿಗೆ ಸುಮಾರು ಎರಡು ಹಸುಗಳ ಲೆಕ್ಕ ನಮ್ಮ ದೇಶದ್ದು~ ಎಂದು ಅವರು ವಿವರಿಸಿದರು.

ಗಣಿ ಯೋಜನೆ: ಮಂಗೋಲಿಯಾದಲ್ಲಿ ಈಚೆಗೆ ಮೂರು ಬೃಹತ್ ಗಣಿ ಯೋಜನೆಯನ್ನು ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿದೇಶಿಗರು ತಮ್ಮ ದೇಶದಲ್ಲಿ ಹಣ ಹೂಡಲು ಮುಂದಾಗಿದ್ದಾರೆ. ಏಷ್ಯಾ ಖಂಡದಲ್ಲಿ ಅದರಲ್ಲೂ ಮುಖ್ಯವಾಗಿ  ಭಾರತದಲ್ಲಿನ ಆರ್ಥಿಕ ಸ್ಥಿತಿ ಸದೃಢವಾಗಿರಲು ಕೂಡ ಇದೂ ಒಂದು ಕಾರಣವಾಗಲಿದೆ. ಈ ಯೋಜನೆ ಜಾರಿಗೆ ಬಂದರೆ ವಿದ್ಯುತ್ ಉತ್ಪಾದನೆ, ನೀರು ಸರಬರಾಜು ಹಾಗೂ ರೈಲು ಸಾಗಾಣಿಕೆ ಕ್ಷೇತ್ರದಲ್ಲಿ ಬಲು ಬೇಡಿಕೆ ಬರಲಿದೆ. ಇದರಿಂದ ಭಾರತ ಹಾಗೂ ಮಂಗೋಲಿಯಾ ನಡುವಿನ ಬಾಂಧವ್ಯ ಹಾಗೂ ಏಷ್ಯಾ ದೇಶಗಳಲ್ಲಿನ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ ಎಂದು ಅವರು ನುಡಿದರು.

ಭಾರತದಲ್ಲಿ ಸುಮಾರು 800 ಮಂಗೋಲಿಯನ್ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಆ ಪೈಕಿ 150 ಮಂದಿ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಭಾರತ ಸರ್ಕಾರ ಈ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಶಿಷ್ಯವೇತನ ನೀಡಿ ಪ್ರೋತ್ಸಾಹಿಸುತ್ತಿರುವುದು ಸಂತಸದ ವಿಷಯ ಎಂದು ಎಂಕ್‌ಬೋಲ್ಡ್ ನುಡಿದರು.

ಬೆಂಗಳೂರು ವೈದ್ಯಕೀಯ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದೆ. ಕಣ್ಣಿನ ಶಸ್ತ್ರಚಿಕಿತ್ಸೆ, ಆಯುರ್ವೇದ ಚಿಕಿತ್ಸೆ ಇತ್ಯಾದಿಗಳಿಗೆ ತಮ್ಮ ದೇಶದ ಜನರು ಬೆಂಗಳೂರಿಗೆ ಭೇಟಿ ಕೊಡುವುದು ಸಾಮಾನ್ಯವಾಗಿದೆ ಎಂದು ಅವರು ಶ್ಲಾಘಿಸಿದರು. ತಮ್ಮಲ್ಲಿ ಶಿಕ್ಷಣ ಕ್ಷೇತ್ರದಲ್ಲಿಯೂ ಹೆಚ್ಚಿನ ಅವಕಾಶ ಇದ್ದು, ಭಾರತೀಯರು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೋರಿದರು. ಇಲಾಖೆಯ ಕಾರ್ಯದರ್ಶಿ ಜ್ಯೋತಿರಾಮಲಿಂಗಂ, ಕರ್ನಾಟದಲ್ಲಿನ ಮಂಗೋಲಿಯಾ ಕಾನ್ಸುಲ್ ಎಸ್. ವಾಸುದೇವನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.