ADVERTISEMENT

ಮಂಡ್ಯದಲ್ಲಿ ಬೆಲ್ಲಕ್ಕೆ ದಾಖಲೆ ಬೆಲೆ

ಬಸವರಾಜ ಹವಾಲ್ದಾರ
Published 16 ಅಕ್ಟೋಬರ್ 2012, 19:30 IST
Last Updated 16 ಅಕ್ಟೋಬರ್ 2012, 19:30 IST
ಮಂಡ್ಯದಲ್ಲಿ ಬೆಲ್ಲಕ್ಕೆ ದಾಖಲೆ ಬೆಲೆ
ಮಂಡ್ಯದಲ್ಲಿ ಬೆಲ್ಲಕ್ಕೆ ದಾಖಲೆ ಬೆಲೆ   

ಮಂಡ್ಯ: ಸಾಲು ಸಾಲಾಗಿ ಬಂದಿರುವ ಹಬ್ಬಗಳಿಂದಾಗಿ ಕಬ್ಬು ಬೆಳೆಗಾರರು ಹಾಗೂ ಗಾಣದ ಮಾಲೀಕರ ಅದೃಷ್ಟ ಖುಲಾಯಿಸಿದೆ. ಮಂಡ್ಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಕ್ವಿಂಟಲ್ ಬೆಲ್ಲ ರೂ.3,550ಕ್ಕೆ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ.

ಕಳೆದ ಎರಡು ತಿಂಗಳಿನಿಂದ  ರೂ. 2,300ರಿಂದ ರೂ.3,100ರ ಆಸುಪಾಸಿನಲ್ಲಿ ಬೆಲ್ಲ ಮಾರಾಟವಾಗುತ್ತಿತ್ತು. ಮಂಗಳವಾರ ಮಾತ್ರ ಕ್ವಿಂಟಲ್ ಅಚ್ಚು ಬೆಲ್ಲ ರೂ. 3,550ಕ್ಕೆ ಹಾಗೂ ಬಕೆಟ್ ಬೆಲ್ಲ ರೂ.3,200ಕ್ಕೆ ಮಾರಾಟವಾಗಿದೆ. ಎರಡೂ ಬೆಲ್ಲಗಳ ಬೆಲೆಯೂ ಹೊಸ ದಾಖಲೆ.

ಶನಿವಾರದವರೆಗೂ ನಡೆದ ಹರಾಜಿನಲ್ಲಿ ಕ್ವಿಂಟಲ್‌ಗೆ ರೂ.2400ರಿಂದ ರೂ.3,100ದವರೆಗೆ ಮಾರಾಟವಾಗಿತ್ತು. ಎರಡು ದಿನಗಳ ರಜೆ ನಂತರ, ಮಂಗಳವಾರದ ಹರಾಜಿನಲ್ಲಿ ರೂ.2,700 ರಿಂದ ರೂ.3,550ಕ್ಕೆ ಮಾರಾಟವಾಗಿದೆ. ಈ ಬೆಲೆ ಕೂಗಿದಾಗ ಬೆಲ್ಲ ತಂದಿದ್ದ ರೈತರು, ಗಾಣದ ಮಾಲೀಕರು ಸಂಭ್ರಮದಲ್ಲಿ ತೇಲಾಡಿದರು.

ದೇಶದಲ್ಲಿಯೇ ಈಗ ಹೆಚ್ಚು ಬೆಲ್ಲ ಉತ್ಪಾದನೆ ಇರುವುದು ಮಂಡ್ಯದಲ್ಲಿ ಮಾತ್ರ. ಹೀಗಾಗಿ ಬೆಲೆ ಭಾರಿ ಪ್ರಮಾಣದಲ್ಲಿ ಏರಿದೆ. ದಸರಾ ನಂತರ ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ಬೆಲ್ಲ ತಯಾರಿಕೆ ಆರಂಭವಾದರೆ ಕಡಿಮೆಯಾಗಲಿದೆ. ಅಲ್ಲಿವರೆಗೆ ಬೆಲೆ ಮತ್ತಷ್ಟು ಹೆಚ್ಚು ಸಾಧ್ಯತೆ ಇದೆ ಎನ್ನುತ್ತಾರೆ ವರ್ತಕರ ಸಂಘದ ಅಧ್ಯಕ್ಷ ಸುನೀಲ್ ಕುಮಾರ್.
 
ಮಳೆ ಹಾಗೂ ಕಾರ್ಮಿಕರು ಹಬ್ಬಕ್ಕೆ ಹೋಗಿರುವುದರಿಂದ ಉತ್ಪಾದನೆ ಕಡಿಮೆಯಾಗಿದೆ. ಇದೇ ಮೊದಲ ಬಾರಿಗೆ ಉತ್ತಮ ಬೆಲೆ ದೊರಕಿದೆ. ಈ ಬೆಲೆಯಿಂದಾಗಿ ರೈತರ ಕಬ್ಬಿಗೂ ಉತ್ತಮ ಬೆಲೆ ದೊರೆಯಲಿದೆ ಎನ್ನುತ್ತಾರೆ ಜಿಲ್ಲೆಯ ಗಾಣದ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಕೃಷ್ಣ.

ಮಂಗಳವಾರ ಮಾರುಕಟ್ಟೆಗೆ 8,82 ಕ್ವಿಂಟಲ್ ಬೆಲ್ಲ ಆವಕವಾಗಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಇದು ಬಹಳ ಕಡಿಮೆ. ಜತೆಗೆ ಬೆಲ್ಲ ಸಾಗಾಟಕ್ಕೆ ಹೆಚ್ಚು ಲಾರಿಗಳೂ ಲಭ್ಯವಿಲ್ಲ. ಉತ್ಪಾದನೆಯೂ ಇಳಿಮುಖವಾಗಿದೆ. ಇದೆಲ್ಲವೂ ಬೆಲೆ ಹೆಚ್ಚಲು ಕಾರಣ. ಮುಂದಿನ ದಿನಗಳಲ್ಲಿ ಕ್ವಿಂಟಲ್‌ಗೆ ರೂ.4 ಸಾವಿರ ಮುಟ್ಟಲಿದೆ ಎನ್ನುತ್ತಾರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಕೆ. ತಿಮ್ಮೇಗೌಡ.

ದಸರಾ ಕೊಡುಗೆ
ದೇಶದಾದ್ಯಂತ ನವರಾತ್ರಿ ಸಂಭ್ರಮ ಆರಂಭವಾಗಿದೆ. ಬಳಿಕ ದೀಪಾವಳಿ. ಹಬ್ಬಗಳ ಸಾಲಿನಿಂದಾಗಿ ಬೇಡಿಕೆ ಹೆಚ್ಚಿದೆ. ಆದರೆ, ಅದೇ ಪ್ರಮಾಣದಲ್ಲಿ ಬೆಲ್ಲದ ಪೂರೈಕೆಯಿಲ್ಲ. ಪರಿಣಾಮ ಬೆಲೆ ಗಗನಕ್ಕೇರಿದೆ.

ದಸರಾ ಕಾರಣದಿಂದ ಗುಜರಾತ್, ಆಂಧ್ರಪ್ರದೇಶಕ್ಕೆ ಬೆಲ್ಲ ಕಳುಹಿಸಲಾಗುತ್ತಿದೆ. ಹಾವೇರಿ, ಹುಬ್ಬಳ್ಳಿ, ಗದಗ, ರಾಣೆಬೆನ್ನೂರು, ರಾಯಚೂರು, ಗುಲ್ಬರ್ಗದಿಂದ ಬಂದಿರುವ ವರ್ತಕರೂ ಹಬ್ಬಕ್ಕಾಗಿ ಬೆಲ್ಲಕ್ಕೆ ಮುಗಿಬಿದ್ದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.