ಮಡಿಕೆಯು ಅನಾದಿಕಾಲದಿಂದಲೂ ಮಾನವ ಜೀವನದ ಜೊತೆ ಅನೂಚಾನವಾಗಿ ಬಂದಂತಹ ಪಾತ್ರೆಗಳಲ್ಲಿ ಒಂದಾಗಿದೆ. ಲೋಹದ ಯುಗ ಆರಂಭದ ನಂತರ ತುಸು ಮಣ್ಣಿನ ಪಾತ್ರೆಗಳಿಗೆ ಹಿನ್ನಡೆಯಾದರೂ ಗ್ರಾಮೀಣರು ಮಣ್ಣಿನ ಮಡಿಕೆಗಳ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಈಗಲೂ ಸಹ ಹಳ್ಳಿಗಳಲ್ಲಿ ಅಡುಗೆ ಮಾಡಲು ಮಣ್ಣಿನ ಮಡಿಕೆಗಳನ್ನು ಬಳಸುತ್ತಿರುವುದನ್ನು ಕಾಣಬಹುದು. ಮಡಿಕೆಯಲ್ಲಿ ಮಾಡಿದ ಮುದ್ದೆಯ ಸವಿಯನ್ನು ಸವಿದವನೇ ಬಲ್ಲ.
ಮಣ್ಣಿನ ಮಡಿಕೆಗೆ ಬೇಸಿಗೆ ಬಂತೆಂದರೆ.. ಸುಗ್ಗಿಯೋ ಸುಗ್ಗಿ. ಜೊತೆಗೆ ಕುಂಬಾರರಿಗೂ... ವ್ಯಾಪಾರಿಗಳಿಗೂ..ಮತ್ತು ಮಡಿಕೆ ಮನೆಗೆ ಕೊಂಡೊಯ್ದು ಅದರಲ್ಲಿನ ತಣ್ಣನೆಯ ನೀರು ಕುಡಿದು ತಮ್ಮ ಬಾಯಾರಿಕೆ ತಣಿಸಿಕೊಳ್ಳುವ ಜನರಿಗೂ ಸಹ!
ಬೇಸಿಗೆ ಬಂದಾಗಿದೆ. ಮಾರ್ಚ್ ಆರಂಭದಲ್ಲಿಯೇ ನೆತ್ತಿಸುಡುವ ರಣಬಿಸಿಲಿಗೆ ಜನ ಸುಸ್ತಾಗಿ ಛತ್ರಿ ಹಿಡಿದು ಓಡಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಜ್ಯೂಸ್, ಪಾನಕ, ಎಳೆನೀರು, ಕಲ್ಲಂಗಡಿ, ಮಜ್ಜಿಗೆ ಮಾರುವ ಮಾರಾಟಗಾರರು ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿ ಇದ್ದಾರೆ.
ಬಿಸಿಲಿನ ಬೇಗೆಯಿಂದ ಕಂಗೆಟ್ಟ ಜನರು ತಣ್ಣನೆಯ ನೀರಿಗಾಗಿ ಮೊರೆಹೋಗುವುದಂತೂ ನಿಜ. ಅದರಲ್ಲೂ ಈಗ ಎಲ್ಲರ ಚಿತ್ತ ಮಡಿಕೆ ಕೊಳ್ಳುವುದರತ್ತ ನೆಟ್ಟಿದೆ. ಯಾಕೆಂದರೆ, ಮಡಿಕೆಯಲ್ಲಿ ಸಂಗ್ರಹಿಸಿ ಇಡುವ ನೀರು ಫ್ರಿಜ್ ನೀರಿಗಿಂತಲೂ ಹೆಚ್ಚು ತಂಪಾಗಿರುವುದೇ ಇದಕ್ಕೆ ಕಾರಣ.
ಈ ದಿಸೆಯಲ್ಲಿ ಮಡಿಕೆ ಮಾರುವ ವ್ಯಾಪಾರಿಗಳು, ಮಳಿಗೆಗಳು, ಫುಟ್ ಪಾತ್, ಹೆದ್ದಾರಿ- ರಸ್ತೆಗಳ ಆಸುಪಾಸಿನಲ್ಲಿ ಮಡಿಕೆ ಪೇರಿಸಿಕೊಂಡು ಗ್ರಾಹಕರಿಗಾಗಿ ಕಾಯುತ್ತಿದ್ದಾರೆ. ಜನರು ಮಣ್ಣಿನ ಮಡಿಕೆಗಳ ಖರೀದಿಗೆ ಮನಸು ಮಾಡುವುದು ಬೇಸಿಗೆಯ ದಿನಗಳಲ್ಲಿ ಸಹಜವೂ ಆಗಿದೆ.
ಮಡಿಕೆ ತಯಾರಿಸುವ ಕುಂಬಾರರಿಗೆ ಉತ್ತಮ ಆದಾಯ ಗಳಿಸಲು ಇದೊಂದು ಸದವಕಾಶವಾಗಿದೆ. ಆದ್ದರಿಂದಲೇ ಕುಂಬಾರರು ಹೆಚ್ಚಿನ ಬಂಡವಾಳ ಹೂಡಿ ಬಗೆಬಗೆಯ ಮಡಿಕೆಗಳ ಜೊತೆ ಈಗ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದಾರೆ. ಈಗ ಜನರು ಸಾಮಾನ್ಯ ಬಗೆಯ ಮಡಿಕೆಗಳನ್ನು ಕೊಳ್ಳುವುದಕ್ಕಿಂತ ಸ್ವಲ್ಪ ನೋಡಲು ಆಕರ್ಷಕವಾಗಿರುವ, ನಳದ ಸೌಲಭ್ಯವಿರುವ ಮಡಿಕೆ ಕೊಳ್ಳಲು ನಾಮುಂದು ತಾಮುಂಡು ಎಂದು ನಿಂತಿದ್ದಾರೆ.
ಇದರಿಂದ ಸಹಜವಾಗಿಯೇ ಕುಂಬಾರರು ಖುಷಿಯಲಿದ್ಲ್‌ರೆ. ಆದರೂ ತಾವು ಹಾಕಿದ ಬಂಡವಾಳದ ಜೊತೆ ಸ್ವಲ್ಪ ಆದಾಯ ಸಿಕ್ಕರೆ ಸಾಕು..ಎನ್ನುತ್ತಾರೆ ಬೆಂಗಳೂರಿನ ಜ್ಞಾನಭಾರತಿ ಬಳಿ ಹೊರವರ್ತುಲ ರಸ್ತೆಯ ಪಿವಿಪಿ ಶಾಲೆ ಎದುರು ಟೆಂಟ್ ಹಾಕಿ ಮಡಿಕೆ ಮಾರಾಟಕ್ಕೆ ಇಟ್ಟಿರುವ ರಾಜಸ್ತಾನ ಮೂಲದ ವ್ಯಾಪಾರಿ ಮೋಡಾರಾಮ್.
ಇಲ್ಲಿ ಸುಮಾರು 3 ಲೀಟರುಗಳಿಂದ ಹಿಡಿದು 15 ಲೀಟರ್ ನೀರು ಹಿಡಿಸುವ ಸಾಮರ್ಥ್ಯದ ತರಹೇವಾರಿ ಮಡಿಕೆಗಳು ಸಿಗುತ್ತವೆ. ಅಲ್ಲದೇ ನಲ್ಲಿ ಸೌಲಭ್ಯವಿರುವ ದೊಡ್ಡ ದೊಡ್ಡ ಮಡಿಕೆಳೂ ಖರೀದಿಸುವವರ ಮನಸ್ಸು ಆಕರ್ಷಿಸುತ್ತಿವೆ.
ಇವುಗಳ ಬೆಲೆ ತುಸು ದುಬಾರಿಯಾದರೂ ಕೊಳ್ಳಲು ಬರುವ ಗ್ರಾಹಕರಿಗೇನೂ ಕೊರತೆ ಇಲ್ಲ. ಬೇಸಿಗೆಯ ದಾಹ ತಣಿಸಲು ಮಡಿಕೆಯ ನೀರಿಗಾಗಿ ಮೊರೆಹೋಗದವರಿಲ್ಲ. ಸದಾ ಫ್ರಿಜ್ ನೀರು ಕುಡಿಯುವ ಅಭ್ಯಾಸವಿರುವ ಸ್ಥಿತಿವಂತರೂ ಸಹ ಈ ಮಡಿಕೆಗಳ ಖರೀದಿಗೆ ಮುಂದಾಗುವುದು ಮಡಿಕೆಯ ಮಹತ್ವ ತಿಳಿಸುತ್ತದೆ.
`ಮಡಿಕೆಗಳ ಬೆಲೆ ದುಬಾರಿ ಎನಿಸಿದರೂ ಬೇಸಿಗೆಯ ದಾಹ, ಸುಸ್ತನ್ನು ಹೋಗಲಾಡಿಸಲು ಮಡಿಕೆಯ ನೀರಿಗಿಂತ ಉತ್ತಮವಾದುದು ಮತ್ತೊಂದಿಲ್ಲ. ಮಡಿಕೆಯಲ್ಲಿನ ನೀರು ಫ್ರಿಜ್ ಮತ್ತು, ಐಸ್ ಹಾಕಿದ ನೀರಿಗಿಂತ ಕಡಿಮೆ ತಂಪು ಇರುವುದಿಲ್ಲ.
ಮಡಿಕೆಯ ನೀರನ್ನು ಕುಡಿದು ಬೇಸಿಗೆಯ ದಾಹದಿಂದ ಮುಕ್ತರಾಗಬೇಕೇ.... ಹಾಗಾದರೆ ಇನ್ನೇಕೆ ತಡ? ಬನ್ನಿ, ನಿಮ್ಮ ಜೇಬಿನ ಭಾರಕ್ಕೆ ಒಪ್ಪುವ ಮಣ್ಣಿನ ಮಡಿಕೆ ಒಯ್ದು... ಬೇಸಿಗೆಯ ಬೇಗೆ ಕಡಿಮೆ ಮಾಡಿಕೊಳ್ಳಿ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.