ಚಲಾವಣೆಯಲ್ಲಿ ಇರುವ ಕರೆನ್ಸಿಗಳಿಗೆ (ಡಾಲರ್, ರೂಪಾಯಿ ಮತ್ತಿತರ ಹಣ) ಪರ್ಯಾಯವಾಗಿ ವಿಶ್ವದ ಕೆಲ ದೇಶಗಳಲ್ಲಿ ಡಿಜಿಟಲ್ ರೂಪದಲ್ಲಿ ಇರುವ ಬಿಟ್ ಕಾಯಿನ್ ಮತ್ತೆ ಸುದ್ದಿಯಲ್ಲಿದೆ.
ಸೃಷ್ಟಿಕರ್ತ ಪತ್ತೆ?
ಬಿಟ್ ಕಾಯಿನ್ ಪರಿಕಲ್ಪನೆಯನ್ನು ಯಾರು ಸೃಷ್ಟಿಸಿದರು ಎನ್ನುವುದು ಇನ್ನೂ ಒಗಟಾಗಿರುವಾಗಲೇ, ಜಪಾನ್ ಮೂಲದ ವೈದ್ಯ ಸಟೋಷಿ ನಕಮೊಟೊ (64) ಎಂಬಾತನ ಕೈವಾಡ, ಈ ಡಿಜಿಟಲ್ ಕರೆನ್ಸಿ ಕ್ರಾಂತಿಯ ಹಿಂದೆ ಇದೆ ಎಂದು ವರದಿಯಾಗಿದೆ. ಬಿಟ್ ಕಾಯಿನ್ ವಹಿವಾಟಿನಲ್ಲಿ ತನ್ನ ಕೈವಾಡ ಇಲ್ಲ ಎಂದು ಆತ ಸ್ಪಷ್ಟಪಡಿಸಿದ್ದಾನೆ. ಈತನ ಪಾತ್ರದ ಬಗ್ಗೆ ಲೇಖನ ಬರೆದಿರುವ ‘ನ್ಯೂಸ್‌ವೀಕ್’ ನಿಯತಕಾಲಿಕೆಯು ಮಾತ್ರ ತನ್ನ ವರದಿ ಸರಿಯಾಗಿದೆ ಎಂದು ಸ್ಪಷ್ಟಪಡಿಸಿದೆ.
ಮಾದಕ ದ್ರವ್ಯ ಮತ್ತು ಹಣದ ಲೇವಾದೇವಿಯ ಹಗರಣಗಳಲ್ಲಿ ಡಿಜಿಟಲ್‌್ ಕರೆನ್ಸಿಯು ವ್ಯಾಪಕವಾಗಿ ಬಳಕೆಯಾಗುತ್ತಿದೆ. 2009ರಿಂದ ಆರಂಭವಾಗಿರುವ ಈ ವಹಿವಾಟು ಹಲವಾರು ಹಗರಣಗಳ ಹೊರತಾಗಿಯೂ ‘ಹಣಕಾಸು ಕ್ರಾಂತಿ’ ಎಂದೇ ಪರಿಗಣಿತವಾಗಿದೆ.
ಹೊಸ ಹಗರಣ
ಕಳೆದ ತಿಂಗಳು ಟೋಕಿಯೊ ಮೂಲದ ಡಿಜಿಟಲ್ ಕರೆನ್ಸಿ ವಹಿವಾಟು ನಡೆಸುವ ಮೌಂಟ್ ಗೊಕ್ಸ್ ವಿನಿಮಯ ಕೇಂದ್ರವು ದಿವಾಳಿ ಎದ್ದ ನಂತರ ಡಿಜಿಟಲ್ ಕರೆನ್ಸಿ ವಹಿವಾಟಿನ ಭವಿಷ್ಯ ತೂಗುಯ್ಯಾಲೆಯಲ್ಲಿ ಇದೆ.
ಗ್ರಾಹಕರಿಗೆ ಸೇರಿದ 50 ಕೋಟಿ ಡಾಲರ್‌ಗಳಷ್ಟು ಡಿಜಿಟಲ್ ಕರೆನ್ಸಿ (ಅಂದಾಜು ₨3,100ಕೋಟಿ) ಕಾಣೆಯಾಗಿದ್ದರಿಂದ ಮೌಂಟ್ ಗೊಕ್ಸ್ ವಿನಿಮಯ ಕೇಂದ್ರವು ದಿವಾಳಿ ವಿರುದ್ಧ ರಕ್ಷಣೆ ಕೇಳಿದೆ. ಈ ಮೊತ್ತದ ಡಿಜಿಟಲ್ ಕರೆನ್ಸಿ ಕಾಣೆಯಾಗಿರುವುದಕ್ಕೆ ಅವುಗಳ ಕಳ್ಳತನ ನಡೆದಿರಬೇಕೆಂದು ಶಂಕಿಸಲಾಗಿದೆ. ಹ್ಯಾಕರ್ಸ್‌ಗಳು ಈ ಕರೆನ್ಸಿಗಳನ್ನು ಕದ್ದಿರುವ ಸಾಧ್ಯತೆಗಳಿವೆ ಎಂದು ಶಂಕಿಸಲಾಗಿದೆ.
ಅನುಮಾನಾಸ್ಪದ ಸಾವು
ಡಿಜಿಟಲ್ ಕರೆನ್ಸಿ ವಹಿವಾಟು ನಡೆಸುವ ಫಸ್ಟ್ ಮೆಟಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದ ಅಮೆರಿಕದ ಔಟಮ್ನ ರ್‍ಯಾಡ್‌ಟ್ಕೆ (28) ನಿಗೂಢ ಸಾವಿನ ಸುತ್ತಲೂ ಅನುಮಾನಗಳು ಹುಟ್ಟಿಕೊಂಡಿವೆ.
ಭಾರತೀಯರ ನಷ್ಟ
ದೇಶದಲ್ಲಿ ಕ್ರಮೇಣ ಜನಪ್ರಿಯವಾಗುತ್ತಿದ್ದ ಡಿಜಿಟಲ್ ಕರೆನ್ಸಿ ವಹಿವಾಟಿಗೆ ಭಾರತದಲ್ಲಿಯೂ ಈಗ ತೀವ್ರ ಧಕ್ಕೆ ಒದಗಿದೆ. ಜಪಾನ್ ಮೂಲದ ವಿಶ್ವದ ಅತಿದೊಡ್ಡ ಬಿಟ್ ಕಾಯಿನ್ ವಿನಿಮಯ ಕೇಂದ್ರವಾಗಿರುವ ಮೌಂಟ್ ಗೊಕ್ಸ್ ದಿವಾಳಿ ಅಂಚಿಗೆ ಬಂದು ನಿಂತಿದ್ದರಿಂದ ಭಾರತೀಯರು ಕನಿಷ್ಠ ಎಂದರೂ ₨10ರಿಂದ ₨20 ಕೋಟಿಗಳಷ್ಟು ಕಳೆದುಕೊಂಡಿರುವ ಅಂದಾಜಿದೆ.
ಕೆಲ ಭಾರತೀಯರು ನೇರವಾಗಿ ಇಂತಹ ವಹಿವಾಟಿನಲ್ಲಿ ಪಾಲ್ಗೊಂಡಿದ್ದರೆ, ಇನ್ನೂ ಕೆಲವರು ವಿದೇಶಗಳಲ್ಲಿನ ಏಜೆಂಟರ ಮೂಲಕ ವಹಿವಾಟು ನಡೆಸುತ್ತಿದ್ದರು.
ಹಣ ಕಳೆದುಕೊಂಡಿದ್ದರೂ ಬಹುತೇಕ ಭಾರತೀಯರು ಈ ಬಗ್ಗೆ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಅನೇಕ ಅನಿವಾಸಿ ಭಾರತೀಯರೂ ಇದರ ವಹಿವಾಟಿನಲ್ಲಿ ತೊಡಗಿಕೊಂಡಿದ್ದಾರೆ. ತೆರಿಗೆ ಮತ್ತಿತರ ಇಲಾಖೆಗಳಿಂದ ವಿಚಾರಣೆಗೆ ಗುರಿಯಾಗಬೇಕಾದೀತು ಎನ್ನುವ ಆತಂಕವೇ ಇದಕ್ಕೆ ಕಾರಣ. ಡಿಜಿಟಲ್ ಕರೆನ್ಸಿಗಳನ್ನು ತೆರಿಗೆಗೆ ಒಳಪಡದ ಕಪ್ಪು ಹಣದಿಂದ ಖರೀದಿಸಿರುವುದೇ ಇದಕ್ಕೆ ಮುಖ್ಯ ಕಾರಣ.
ದೇಶದ 20 ಕೋಟಿ ಇಂಟರ್‌ನೆಟ್ ಬಳಕೆದಾರರಲ್ಲಿ ಅನೇಕರು ಡಿಜಿಟಲ್ ಕರೆನ್ಸಿ ವಹಿವಾಟಿನಲ್ಲಿ ತೊಡಗಿಕೊಂಡಿರುವ ಸಾಧ್ಯತೆಗಳಿವೆ.
ಒಂದು ಬಿಟ್ ಕಾಯಿನ್ ಖರೀದಿಸಲು ₨ 37,000 ವೆಚ್ಚವಾಗುವ ಅಂದಾಜಿದೆ. ಕೆಲ ದಿನಗಳ ಹಿಂದೆ ಈ ವಿನಿಮಯ ದರ ₨ 1 ಲಕ್ಷದ ಹತ್ತಿರ ಇತ್ತು. ಹಗರಣ, ವಿವಾದ ಮತ್ತು ಹ್ಯಾಕರ್ಸ್‌ಗಳ ಹಾವಳಿಯಿಂದ ಬಿಟ್ ಕಾಯಿನ್ ವಿನಿಮಯ ದರ ಕುಸಿತಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.