ADVERTISEMENT

ಮನೆ ಖರೀದಿಗೆ ಪಿಎಫ್‌ ಅಡಮಾನ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2016, 19:30 IST
Last Updated 15 ಆಗಸ್ಟ್ 2016, 19:30 IST
ಮನೆ ಖರೀದಿಗೆ ಪಿಎಫ್‌ ಅಡಮಾನ
ಮನೆ ಖರೀದಿಗೆ ಪಿಎಫ್‌ ಅಡಮಾನ   

ನವದೆಹಲಿ (ಪಿಟಿಐ): ಅಗ್ಗದ ಮನೆ ಖರೀದಿಗೆ ಭವಿಷ್ಯ ನಿಧಿಯನ್ನು ಒತ್ತೆ ಇಡುವ ವಿಶಿಷ್ಟ ಯೋಜನೆಯನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಶೀಘ್ರದಲ್ಲಿಯೇ ಪರಿಚಯಿಸಲಿದೆ.

‘ಇಪಿಎಫ್‌ಒ’ ಸದಸ್ಯರಿಗಾಗಿ ನಾವು ಮನೆ ಖರೀದಿ ಯೋಜನೆಯೊಂದನ್ನು  ರೂಪಿಸುತ್ತಿದ್ದು, ಈ ಉದ್ದೇಶಕ್ಕೆ  ಸದಸ್ಯರು ತಮ್ಮ ಭವಿಷ್ಯ ನಿಧಿ ಮೊತ್ತವನ್ನು ಅಡ ಇರಿಸಬೇಕಾಗುತ್ತದೆ. ಸಾಲದ ಮಾಸಿಕ ಸಮಾನ ಕಂತು (ಇಎಂಐ)  ತುಂಬಲು ಪಿಎಫ್‌ ಕೊಡುಗೆಯನ್ನು ಬಳಸಿಕೊಳ್ಳಲು ಈ ಯೋಜನೆಯಲ್ಲಿ ಅವಕಾಶ ಮಾಡಿಕೊಡಲಾಗುವುದು’ ಎಂದು ಕೇಂದ್ರ ಕಾರ್ಮಿಕ ಕಾರ್ಯದರ್ಶಿ ಶಂಕರ್‌ ಅಗರ್‌ವಾಲ್‌ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

‘ಈ  ಪ್ರಸ್ತಾವವನ್ನು ಇಪಿಎಫ್‌ಒದ ಧರ್ಮದರ್ಶಿಗಳ ಕೇಂದ್ರೀಯ ಮಂಡಳಿ  (ಸಿಬಿಟಿ) ಎದುರು ಮಂಡಿಸಲಾಗುವುದು. ಮಂಡಳಿಯ ಸಭೆಯು ಮುಂದಿನ ತಿಂಗಳು ನಡೆಯಲಿದೆ. ‘ಸಿಬಿಟಿ’ಯು ಇದಕ್ಕೆ ಸಮ್ಮತಿ ನೀಡುತ್ತಿದ್ದಂತೆ ಪಿಎಫ್‌ ಚಂದಾದಾರರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

‘ಸಾಲ ಪಡೆಯಲು ಚಂದಾದಾರರ ಅರ್ಹತೆ ಏನಿರಬೇಕು,  ಕಡಿಮೆ ವೆಚ್ಚದ ಮನೆಗಳ ಮಾನದಂಡಗಳೇನು ಮತ್ತಿತರ ವಿವರಗಳನ್ನು ಅಂತಿಮಗೊಳಿಸಲಾಗುತ್ತಿದೆ. ಚಂದಾದಾರರ ಮೇಲೆ ಯಾವುದೇ ನಿಯಮ ಹೇರಲು ನಾವು ಬಯಸುವುದಿಲ್ಲ. ನಾವು ಭೂಮಿ ಖರೀದಿಸುವುದಿಲ್ಲ ಅಥವಾ ಮನೆಗಳನ್ನೂ ನಿರ್ಮಿಸುವುದಿಲ್ಲ. ಚಂದಾದಾರರು ಮುಕ್ತ ಮಾರುಕಟ್ಟೆಯಲ್ಲಿ ತಮಗೆ ಇಷ್ಟದ ಮನೆ ಖರೀದಿಸಬಹುದಾಗಿದೆ’ ಎಂದು ಅಗರ್‌ವಾಲ್‌ ಹೇಳಿದ್ದಾರೆ.

ಕಡಿಮೆ ವರಮಾನದ ಚಂದಾದಾರರು ಮತ್ತು ಸೇವಾವಧಿಯಲ್ಲಿ ಮನೆ ಖರೀದಿಸಲು ಸಾಧ್ಯವಾಗದವರ ಅನುಕೂಲಕ್ಕಾಗಿ ಈ ಯೋಜನೆ ರೂಪಿಸಲಾಗುತ್ತಿದೆ.

ಯೋಜನೆಯಲ್ಲಿ, ಸಾಲದ ಮರುಪಾವತಿಗೆ ಸಂಬಂಧಿಸಿದಂತೆ ಸದಸ್ಯ, ಬ್ಯಾಂಕ್‌ ಅಥವಾ ಗೃಹ ನಿರ್ಮಾಣ ಸಂಸ್ಥೆ ಮತ್ತು ಇಪಿಎಫ್‌ಒ ಮಧ್ಯೆ  ತ್ರಿಪಕ್ಷೀಯ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.