ADVERTISEMENT

ಮಹಿಳಾ ಉದ್ಯಮಿಗಳಿಗೆ ನೀತಿ ಆಯೋಗದ ನೆರವು

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 19:30 IST
Last Updated 7 ಜೂನ್ 2018, 19:30 IST
ವಿಶ್ವಸಂಸ್ಥೆಯ ಸ್ಥಾನಿಕ ಸಮನ್ವಯ ಅಧಿಕಾರಿ ಯೂರಿ ಅಫಾನ್‌ಸಿವ್‌ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಿ–ಹಬ್‌ನ ಸಿಇಒ ದೀಪ್ತಿ ರೆವುಲಾ ಉಪಸ್ಥಿತರಿದ್ದರು  – ಪ್ರಜಾವಾಣಿ ಚಿತ್ರ
ವಿಶ್ವಸಂಸ್ಥೆಯ ಸ್ಥಾನಿಕ ಸಮನ್ವಯ ಅಧಿಕಾರಿ ಯೂರಿ ಅಫಾನ್‌ಸಿವ್‌ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಿ–ಹಬ್‌ನ ಸಿಇಒ ದೀಪ್ತಿ ರೆವುಲಾ ಉಪಸ್ಥಿತರಿದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಹಿಳಾ ಉದ್ಯಮಿಗಳಿಗೆ ನೆರವಾಗಲು ನೀತಿ ಆಯೋಗ ಮತ್ತು ವಿಶ್ವಸಂಸ್ಥೆಯ ಭಾರತದ ಉದ್ದಿಮೆ ವೇದಿಕೆಯು (ಯುಎನ್‌ಐಬಿಎಫ್‌) ಒಪ್ಪಂದಕ್ಕೆ ಸಹಿ ಹಾಕಿವೆ.

‘ಮಹಿಳೆಯರ ಉದ್ಯಮಶೀಲತೆಗೆ ಉತ್ತೇಜನ ನೀಡಲು, ಅವರ ನವೋದ್ಯಮಗಳಿಗೆ ಬೇಕಾದ ಹಣಕಾಸು ಮತ್ತು ಮಾರುಕಟ್ಟೆ ನೆರವು ಒದಗಿಸಲು ಈ ಒಪ್ಪಂದ ನೆರವಾಗಲಿದೆ. ಈ ಉದ್ದೇಶಕ್ಕೆ ₹ 1,500 ಕೋಟಿಗಳ ನಿಧಿ ಸ್ಥಾಪಿಸಲಾಗಿದೆ’ ಎಂದು ನೀತಿ ಆಯೋಗದ ಸಲಹೆಗಾರ್ತಿ ಆ್ಯನಾ ರಾಯ್‌ ಗುರುವಾರ ಇಲ್ಲಿ ಹೇಳಿದರು.

‘ನೀತಿ ಆಯೋಗ ಹೂಡಿಕೆದಾರರ ಒಕ್ಕೂಟದ ಆಶ್ರಯದಲ್ಲಿ, ಮಹಿಳಾ ಉದ್ಯಮಿಗಳನ್ನು ಒಂದೇ ಚಾವಡಿಯಡಿ ತರುವ ಪ್ರಯತ್ನ ಇದಾಗಿದೆ.  ಮಹಿಳೆಯರ ಉದ್ಯಮಶೀಲತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಇದೊಂದು ಉತ್ತಮ ಆರಂಭವಾಗಿದೆ. ಮಹಿಳೆಯರಿಗೆ ನೆರವಾಗುತ್ತಿರುವ ಇತರ ಭಾಗಿದಾರರೂ ಈ ಯೋಜನೆಯ ಭಾಗವಾಗಿರುವುದರಿಂದ ಈ ಪ್ರಯತ್ನ ಗಣನೀಯ ಯಶಸ್ಸು ಸಾಧಿಸಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ದೆಹಲಿಯಿಂದ ವಿಡಿಯೊ ಸಂವಾದ ಮೂಲಕ ಅವರು ಮಾತನಾಡಿದರು.

ADVERTISEMENT

‘ನೀತಿ ಆಯೋಗದ ನೆರವಿನ ಯೋಜನೆಗೆ ಈ ವರ್ಷ 40 ಮಹಿಳಾ ಉದ್ಯಮಿಗಳು ಆಯ್ಕೆಯಾಗಿದ್ದಾರೆ. ಈ ವೇದಿಕೆಯ ಪ್ರಯೋಜನ ಪಡೆಯಲು ಮಹಿಳೆಯರು ಹೆಚ್ಚಿನ ಉತ್ಸುಕತೆ ತೋರಿದ್ದಾರೆ. ಸಣ್ಣ ಉದ್ದಿಮೆಗಳನ್ನು ಮಧ್ಯಮ ಗಾತ್ರದ ಉದ್ದಿಮೆಗಳನ್ನಾಗಿ ಅಭಿವೃದ್ಧಿಪಡಿಸಲು ವೇದಿಕೆ ಅಗತ್ಯ ಸಹಾಯ ಒದಗಿಸಲಿದೆ. ಯಶಸ್ವಿ ಉದ್ಯಮಿಗಳೂ ಈ ವೇದಿಕೆಯ ಭಾಗವಾಗಿದ್ದಾರೆ. ಸರ್ಕಾರದ ಈ ಪ್ರಯತ್ನದಲ್ಲಿ ಖಾಸಗಿ ಹೂಡಿಕೆದಾರರೂ ಕೈಜೋಡಿಸಿದ್ದಾರೆ.

‘ಸರ್ಕಾರಿ ಮತ್ತು ಖಾಸಗಿ ಪಾಲುದಾರಿಕೆಯ ನೆರವಿನಿಂದ ಉದ್ಯಮಿಗಳು ಎದುರಿಸುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇದೊಂದು ಸಂಘಟಿತ ಪ್ರಯತ್ನವಾಗಿದೆ. ಮಹಿಳೆಯರು ಸ್ಥಾಪಿಸುವ ಸ್ಟಾರ್ಟ್‌ಅಪ್‌ಗಳಿಗೆ ಅಗತ್ಯವಾದ ಎಲ್ಲ ಬಗೆಯ ನೆರವು ನೀಡಲಾಗುವುದು. ಉದ್ಯಮಿಗಳು ಎದುರಿಸುವ ಸಮಸ್ಯೆಗಳನ್ನೆಲ್ಲ ದೂರ ಮಾಡುವುದು ಈ ಒಕ್ಕೂಟದ ಆಶಯವಾಗಿದೆ’ ಎಂದರು.

ಡಿಜಿಟಲ್ ಮೂಲಸೌಕರ್ಯ: ’ಮಹಿಳೆಯರಿಗೆ ನೆರವಿನ ಹಸ್ತ ನೀಡಲು ನೀತಿ ಆಯೋಗ ಮತ್ತು ವಿಶ್ವಸಂಸ್ಥೆಯ ಭಾರತ ಉದ್ದಿಮೆ ವೇದಿಕೆಯ ಜಂಟಿ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವೇದಿಕೆಯು ಡಿಜಿಟಲ್‌ ಮೂಲಸೌಕರ್ಯ ಒದಗಿಸಲಿದೆ. ಉದ್ಯಮಿಗಳು, ಹೂಡಿಕೆದಾರರು ಒಳಗೊಂಡಂತೆ ಉದ್ಯಮ ವಲಯದಲ್ಲಿನ ಪ್ರತಿಯೊಬ್ಬರೂ ಈ ವೇದಿಕೆಗೆ ಸೇರ್ಪಡೆಯಾಗಬಹುದು. ಉದ್ದಿಮೆ, ವಹಿವಾಟಿನ ಉತ್ತಮ ಮಾದರಿ ಅಳವಡಿಸಿಕೊಂಡು ಮುನ್ನಡೆಯಲು ನೆರವಾಗಲಿದೆ’ ಎಂದು ವಿಶ್ವಸಂಸ್ಥೆಯ ಭಾರತದಲ್ಲಿನ ಸ್ಥಾನಿಕ ಸಮನ್ವಯ ಅಧಿಕಾರಿ ಯೂರಿ ಅಫಾನ್‌ಸಿವ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.