ADVERTISEMENT

ಮಹಿಳೆಯರ ಬದುಕು ಸ್ವಾರ್ಥರಹಿತ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 19:45 IST
Last Updated 7 ಫೆಬ್ರುವರಿ 2012, 19:45 IST

ಮುಂಬೈ: ಮಹಿಳೆಯರು ತಮ್ಮ ಜೀವನವನ್ನು ಸಂಸಾರಕ್ಕಾಗಿ ಮತ್ತು ಬೇರೆಯವರಿಗಾಗಿ ಮೀಸಲಿಡುತ್ತಾರೆ. ತಮಗಾಗಿ ಸ್ವಲ್ಪವೂ ಸಮಯ ಅವರಿಗೆ ಸಿಗುವುದಿಲ್ಲ ಎಂದು ಸ್ವಾರ್ಥ ರಹಿತ ಬದುಕಿನ ಬಗ್ಗೆ ಖ್ಯಾತ ವಕೀಲೆ ರೋಹಿಣಿ ಸಾಲ್ಯಾನ್ ಅವರು ಪ್ರಶಂಸೆ ವ್ಯಕ್ತಪಡಿಸಿದರು.

  ಅವರು ಇಲ್ಲಿನ ಕರ್ನಾಟಕ ಸಂಘದ ಮಹಿಳಾ ವಿಭಾಗವು ಇತ್ತೀಚೆಗೆ ಆಯೋಜಿಸಿದ `ಮಹಿಳಾ ಸಂಸ್ಕೃತಿ ಸಂಭ್ರಮ~ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಾಮಾನ್ಯವಾಗಿ ಮಹಿಳೆಯರು ತಮ್ಮ ಅಭಿರುಚಿಯನ್ನು ಬಹಿರಂಗಪಡಿಸುವುದಿಲ್ಲ. ಇಂದಿನ ದಿನಗಳಲ್ಲಿ  ಸಮಾಜ ಮುಖಿ ಚಟುವಟಿಕೆಗಳಲ್ಲಿ ಮಹಿಳೆಯರು ಭಾಗವಹಿಸುತ್ತಿದ್ದಾರೆ ಎಂದರು. ಮುಖ್ಯಅತಿಥಿ ನೇತ್ರತಜ್ಞೆ ಡಾ.ಅನಘ ಹೇರೂರು ಅವರು `ಇಂದು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಶಕ್ತ ಪಾತ್ರದ ಬಗ್ಗೆ  ಹೆಮ್ಮೆ ಎನಿಸುತ್ತದೆ ಎಂದರು.

ಮಹಿಳೆಯರು ತಮ್ಮ ಸಾಂಸಾರಿಕ ಜವಾಬ್ದಾರಿ ನಿಭಾಯಿಸುತ್ತಾ ತಮ್ಮಲ್ಲಿ ಹುದುಗಿರುವ ಕಲಾ ಪ್ರತಿಭೆಯನ್ನು ಅಭಿವ್ಯಕ್ತಿಗೊಳಿಸುವ ಸಂದರ್ಭದಲ್ಲಿ ಸಾಮಾಜಿಕ ಮತ್ತು ನೈತಿಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಇದನ್ನು ನಿರ್ಭಿಡೆಯಿಂದ ನಿಭಾಯಿಸಬೇಕಾಗುತ್ತದೆ ಎಂದು ಹೇಳಿದರು.

 ಅನಂತರ `ನಮ್ಮ ಸಂಸಾರ-ನಮ್ಮ ಸಂಸ್ಕೃತಿ- ನಮ್ಮ ಕ್ರಿಯಾಶೀಲತೆ- ಅಂತರಂಗದ ಮಾತುಗಳು -1~ ವಿಚಾರಗೋಷ್ಠಿ ತುಳಸಿ ವೇಣುಗೋಪಾಲರ ಅಧ್ಯಕ್ಷತೆಯಲ್ಲಿ ನಡೆಯಿತು. ಮಮತಾ ರಾವ್  ಅವರು `ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರು~, ಅಹಲ್ಯಾ ಬಲ್ಲಾಳ್ `ನಾಟಕ ಕ್ಷೇತ್ರದಲ್ಲಿ ಮಹಿಳೆಯರು~ ಮತ್ತು ಉಮಾ ನಾಗಭೂಷಣ ಅವರು `ಸಂಗೀತ ಕ್ಷೇತ್ರದಲ್ಲಿ ಮಹಿಳೆಯರು~ ಎಂಬ ವಿಷಯದ ಕುರಿತು ಮಾತನಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.