ADVERTISEMENT

ಮಾತು ಅಕ್ಷರರೂಪಕ್ಕೆ ಇಳಿಸುವ ‘ಲಿಪಿಕಾರ’!

ಸೂರ್ಯನಾರಾಯಣ ವಿ
Published 8 ಆಗಸ್ಟ್ 2017, 19:30 IST
Last Updated 8 ಆಗಸ್ಟ್ 2017, 19:30 IST
ಮಾತು ಅಕ್ಷರರೂಪಕ್ಕೆ ಇಳಿಸುವ ‘ಲಿಪಿಕಾರ’!
ಮಾತು ಅಕ್ಷರರೂಪಕ್ಕೆ ಇಳಿಸುವ ‘ಲಿಪಿಕಾರ’!   

ಸ್ಮಾರ್ಟ್‌ ಫೋನ್‌ಗಳಲ್ಲಿ ಕನ್ನಡ ಬರೆಯಲು (ಅದರಲ್ಲೂ ವಿಶೇಷವಾಗಿ ಒತ್ತಕ್ಷರಗಳಿರುವ ಪದಗಳು) ಹೆಣಗಾಡುವವರಿಗೆ ನೆರವಾಗಬಲ್ಲಂತಹ ಕಿರು ತಂತ್ರಾಂಶ (ಆ್ಯಪ್‌) ಈಗ ಬಳಕೆದಾರರ ನಡುವೆ ಭಾರಿ ಸದ್ದು ಮಾಡುತ್ತಿದೆ.

ಹೆಸರು ’ಲಿಪಿಕಾರ್‌ ಕನ್ನಡ ಕೀಬೋರ್ಡ್‌’. ಇದರಲ್ಲಿ ಅಂತಹ ವಿಶೇಷ ಏನಿದೆ ಎಂದು ನೀವು ಕೇಳಬಹುದು. ಎಲ್ಲ ಕೀಲಿ ಮಣೆ (ಕೀ ಬೋರ್ಡ್) ಆ್ಯಪ್‌ಗಳಂತೆ ಇದು ಕೂಡ ಮಾಮೂಲಿ ಟೈಪ್‌ ಮಾಡುವ ಆ್ಯಪ್‌ ಆಗಿದ್ದರೆ ಅದರಲ್ಲಿ ಅಂತಹ ವೈಶಿಷ್ಟ್ಯ ಇರುತ್ತಿರಲಿಲ್ಲ (ಟೈಪ್ ಮಾಡಲು ಇಲ್ಲೂ ಅವಕಾಶ ಇದೆ). ಇದು, ಮಾತುಗಳನ್ನು ಅಕ್ಷರ ರೂಪಕ್ಕೆ ಇಳಿಸುವ ಕಿರು ತಂತ್ರಾಂಶ!

ಬಳಕೆದಾರರನ್ನು ಅಚ್ಚರಿಗೆ ಕೆಡವಿರುವ ಲಿಪಿಕಾರ, ಆ್ಯಪ್‌ ಲೋಕದಲ್ಲಿ ಸಂಚಲನ ಸೃಷ್ಟಿಸಿರುವುದು ಸುಳ್ಳಲ್ಲ. ಇಂಗ್ಲಿಷ್‌ ಮಾತ್ರ ಅಲ್ಲದೇ ಹಿಂದಿ, ಸಂಸ್ಕೃತ, ತಮಿಳು, ತೆಲುಗು, ಮಲಯಾಳ ಸೇರಿದಂತೆ ಭಾರತದ 14 ಭಾಷೆಗಳಲ್ಲಿ ಇದು ಲಭ್ಯವಿದೆ.

ADVERTISEMENT

ಭಾರತೀಯ ಭಾಷೆಗಳ ಮಟ್ಟಿಗೆ ಅದರಲ್ಲೂ ವಿಶೇಷವಾಗಿ ಕನ್ನಡದ ಮಟ್ಟಿಗೆ ಇದು ಹೊಚ್ಚ ಹೊಸ ಪರಿಕಲ್ಪನೆ. ಪುಣೆಯ ಮನುಕಾ ಸಾಫ್ಟ್‌ವೇರ್‌ ಸೊಲ್ಯೂಷನ್ಸ್‌  ಈ ತಂತ್ರಾಂಶದ ರೂವಾರಿ. ಸದ್ಯಕ್ಕೆ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಇದು ಲಭ್ಯ.

ಇನ್‌ಸ್ಟಾಲ್‌ ಹೇಗೆ?

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಿಪಿಕಾರ್‌ ಕನ್ನಡ ಕಿಬೋರ್ಡ್ ಎಂದು ಟೈಪ್‌ ಮಾಡಿದರೆ ಆ್ಯಪ್‌ ಕಾಣಿಸುತ್ತದೆ. ಅದನ್ನು ಅನುಸ್ಥಾಪನೆ (ಇನ್‌ಸ್ಟಾಲ್‌) ಮಾಡಿದರೆ ಆಯಿತು. ನಂತರ ಅದರ ಐಕಾನ್‌ ಮೇಲೆ ಒತ್ತಿದರೆ, ಆ ಕೀಲಿಮಣೆ ಕ್ರಿಯಾಶೀಲ ಮಾಡುವ ಪ್ರಕ್ರಿಯೆ ಆರಂಭವಾಗುತ್ತದೆ. ಇದಕ್ಕೆ ವಿವಿಧ ಹಂತಗಳನ್ನು ಅನುಸರಿಸಬೇಕು.

ಬಳಕೆ ಹೀಗೆ

ಲಿಪಿಕಾರ್‌ ಅನ್ನು ಅಳವಡಿಸಿಕೊಂಡ ನಂತರ ಏನಾದರೂ ಬರೆಯಲು ಹೊರಟಾಗ (ಮೆಸೇಜ್‌, ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌, ಬ್ರೌಸರ್‌ ಇತ್ಯಾದಿ ಆ್ಯಪ್‌ಗಳಲ್ಲಿ) ಕೀಲಿಮಣೆಯ ಮೇಲ್ಭಾಗದ ಎಡ ಬದಿಯಲ್ಲಿ ‘ಇಂಗ್ಲಿಷ್‌’, ‘ಕನ್ನಡ’ ಎಂಬ ಎರಡು ಆಯ್ಕೆ ಕಾಣಿಸುತ್ತವೆ. ಬಲ ಬದಿಯಲ್ಲಿ ಮೈಕ್ ಚಿಹ್ನೆ ಇರುತ್ತದೆ. ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಂಡು ಮೈಕ್‌ ಒತ್ತಿ ಹಿಡಿದು, ಮಾತನಾಡಿದರೆ ನಾವು ಹೇಳುವ ಮಾತುಗಳನ್ನು ಅಕ್ಷರ ರೂಪಕ್ಕೆ ತರುತ್ತದೆ.

ಒಂದು ಬಾರಿಗೆ ಗರಿಷ್ಠ ಎಂದರೆ 14 ಸೆಕೆಂಡ್‌ಗಳ ಕಾಲ ಅದು ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ‘ಕೇಳಿಸಿಕೊಳ್ಳುತ್ತಿದ್ದೇನೆ’ ಎಂದು ತೋರಿಸುತ್ತದೆ. ನಂತರ ‘ಡನ್‌’ ಎಂಬ ಗುಂಡಿ ಒತ್ತಿದರೆ, ಪ್ರಕ್ರಿಯೆ ಜಾರಿಯಲ್ಲಿದೆ ಎಂದು ತೋರಿಸುತ್ತದೆ. ಕೆಲವು ಕ್ಷಣಗಳ ಬಳಿಕ ನಾವಾಡಿದ ಮಾತುಗಳು ಅಕ್ಷರ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಇಂಗ್ಲಿಷ್‌ ಭಾಷೆ ಆಯ್ಕೆ ಮಾಡಿಕೊಂಡಿದ್ದರೆ, ಇದೇ ವಿಧಾನ ಅನುಸರಿಸಿ ಇಂಗ್ಲಿಷ್‌ ಮಾತು ಅಥವಾ ಸಂದೇಶಗಳನ್ನು ಪಠ್ಯ ರೂಪಕ್ಕೆ ಇಳಿಸಬಹುದು.

ಮಿತಿಗಳು

ಮೊದಲೇ ಹೇಳಿದಂತೆ ಒಮ್ಮೆಗೆ 14 ಸೆಕೆಂಡುಗಳಷ್ಟು ಮಾತ್ರ ನಮ್ಮ ಮಾತು/ಸಂದೇಶವನ್ನು ಅದು ಕೇಳುತ್ತದೆ. ಅದೇ ಮಾತನ್ನು ಮುಂದುವರಿಸಬೇಕು ಎಂದಿದ್ದರೆ ಮತ್ತೆ ಮೈಕ್‌ ಚಿಹ್ನೆಯನ್ನು ಒತ್ತಬೇಕು. ನಿಧಾನವಾಗಿ ಮತ್ತು ಸ್ಪಷ್ಟವಾಗಿ ಮಾತನಾಡಿದರೆ ಮಾತ್ರ ಆ ಮಾತುಗಳು ಅಕ್ಷರವಾಗಿ ಮೂಡುತ್ತವೆ. ಇಲ್ಲದಿದ್ದರೆ ತಾನು ಗ್ರಹಿಸಿದಂತೆ ಅದು ಬರೆಯುತ್ತದೆ.

ಲಿಪಿಕಾರ್‌ನ ಕಾರ್ಯನಿರ್ವಹಣೆಗೆ ಇಂಟರ್‌ನೆಟ್‌ ಬೇಕೇ ಬೇಕು. ಅದು ಇಲ್ಲದಿದ್ದರೆ ಮಾತುಗಳು ಪಠ್ಯವಾಗಿ ಪರಿವರ್ತನೆ ಆಗುವುದಿಲ್ಲ. ಹಾಗಾಗಿ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಇರುವ ಪ್ರದೇಶಗಳಿಗೆ ಲಿಪಿಕಾರ್‌ ಹೇಳಿ ಮಾಡಿಸಿದ್ದಲ್ಲ. ಇಂಟರ್‌ನೆಟ್‌ನ ವೇಗ ಕಡಿಮೆ ಇದ್ದರೂ ಕೂಡ ಅಕ್ಷರ ರೂಪಕ್ಕಿಳಿಸುವ ಪ್ರಕ್ರಿಯೆ ನಿಧಾನವಾಗುತ್ತದೆ. ಕೆಲವು ಬಾರಿ ಬರೆಯುವುದೇ ಇಲ್ಲ. ಇದರಿಂದ ಸಮಯವೂ ವ್ಯರ್ಥ.

ಸದ್ಯ ಆ್ಯಪ್‌ನ ಆನ್‌ಲೈನ್‌ ಆವೃತ್ತಿಯನ್ನು ಸುಧಾರಿಸಲು ಹೆಚ್ಚು ಗಮನ ನೀಡಲಾಗುತ್ತಿದ್ದು, ಆಫ್‌ಲೈನ್‌ ಆವೃತ್ತಿ ಅಭಿವೃದ್ಧಿ ಪಡಿಸಲು ಇನ್ನಷ್ಟು ಸಮಯ ಬೇಕು ಎಂದು ಕಂಪೆನಿ ಹೇಳಿದೆ.

ಕಷ್ಟ ಕಷ್ಟ

ಈ ಕಿರು ತಂತ್ರಾಂಶದಲ್ಲಿ ಕನ್ನಡ ಬರೆಯುವುದು ಸ್ವಲ್ಪ ಕಷ್ಟವೇ. ನುಡಿ /ಕೆಜೆಪಿ  ಶೈಲಿಯ ಕೀಲಿಮಣೆಯಲ್ಲಿ (ಉದಾ: ಜಸ್ಟ್‌ ಕನ್ನಡ ಆ್ಯಪ್‌) ಪಳಗಿದವರು, ಲಿಪಿಕಾರ್‌ಗೆ ಒಗ್ಗ ಬೇಕಾದರೆ ಸ್ವಲ್ಪ ಪ್ರಯಾಸ ಪಡಬೇಕು.

ಬರೆಯುವ ಸಾಹಸಕ್ಕೆ ಕೈ ಹಾಕುವ ಮೊದಲು ಕೀಲಿಮಣೆಯ ವಿನ್ಯಾಸವನ್ನು ಅಧ್ಯಯನ ಮಾಡಲೇ ಬೇಕು. ಯಾಕೆಂದರೆ, ಕನ್ನಡ ಆಯ್ಕೆ ಒತ್ತಿದಾಗ ಕೀಲಿಮಣೆಯಲ್ಲಿ ಕನ್ನಡ ಅಕ್ಷರಗಳು ಕಾಣವುದಿಲ್ಲ.

ಕೀಲಿ ಮಣೆಯ ಮೇಲ್ಭಾಗದ ಬಲಬದಿಯಲ್ಲಿ  (ಮೈಕ್‌ ಚಿಹ್ನೆಯ ನಂತರ) ಪ್ರಶ್ನಾರ್ಥಕ ಚಿಹ್ನೆ ಇದೆ. ಅದನ್ನು ಒತ್ತಿದರೆ ಕೀಲಿಮಣೆಯ ಸೆಟ್ಟಿಂಗ್ಸ್‌ ಪಟ್ಟಿ ಕಾಣುತ್ತದೆ. ಅದರಲ್ಲಿ ‘view typing tutorial’ ಎಂಬ ಆಯ್ಕೆ ಇದೆ. ಅದನ್ನು ಒತ್ತಿದರೆ, ಅಕ್ಷರ ವಿನ್ಯಾಸವನ್ನು ತೋರಿಸುತ್ತದೆ. ಯಾವ ಇಂಗ್ಲಿಷ್‌ ಪದ ಒತ್ತಿದರೆ ಕನ್ನಡ ಪದ ಕಾಣಿಸುತ್ತದೆ ಎಂಬುದನ್ನು ಇದರಲ್ಲಿ ವಿವರಿಸಲಾಗಿದೆ.

ಆನ್‌ಲೈನ್‌ನಲ್ಲೂ ಲಿಪಿಕಾರ್‌ ಕೀಲಿಮಣೆ ಲಭ್ಯವಿದೆ.  ಇದಕ್ಕಾಗಿ http://www.lipikaar.com/online-editor/kannada-typing - ಇಲ್ಲಿಗೆ ಭೇಟಿ ನೀಡಿಬಹುದು.  ಈ ಕೀಲಿಮಣೆಯು ಇಂಗ್ಲಿಷ್‌ನಲ್ಲಿ ಬರೆದಿದ್ದನ್ನು ಕನ್ನಡೀಕರಣಗೊಳಿಸುತ್ತದೆ. ಕಂಪ್ಯೂಟರ್‌ಗೆ ಅಳವಡಿಸಿಕೊಳ್ಳಬಹುದಾದ ಕೀಲಿಮಣೆಯೂ ಇದೆ. ಆದರೆ, ಇದಕ್ಕಾಗಿ ದುಡ್ಡು ತೆರಬೇಕು.

ಸುರಕ್ಷಿತವೇ?

ಕನ್ನಡ ಲಿಪಿಕಾರ್‌ನಲ್ಲಿ ಬರೆದ ಮಾಹಿತಿಗಳು ಸುರಕ್ಷಿತವೇ ಎಂಬ ಆತಂಕವೂ ಬಳಕೆದಾರರಲ್ಲಿ ಮನೆ ಮಾಡಿದೆ. ಈ ತಂತ್ರಾಂಶವನ್ನು ಮೊಬೈಲ್‌ಗೆ ಅಳವಡಿಸಿಕೊಳ್ಳುವಾಗ, ಪಾಸ್‌ವರ್ಡ್‌, ಕ್ರೆಡಿಟ್‌ ಕಾರ್ಡ್‌ ವಿವರಗಳು ಸೇರಿದಂತೆ ಇದರಲ್ಲಿ ಬರೆದ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿಡಲಾಗುತ್ತದೆ ಎಂಬ ಎಚ್ಚರಿಕೆ ಸಂದೇಶ ಬರುತ್ತದೆ. ವೈಯಕ್ತಿಕ ಮಾಹಿತಿಗಳ ಬಗ್ಗೆ ಹೆಚ್ಚು ಗಮನ ನೀಡುವವರಿಗೆ ತಮ್ಮ ಮಾಹಿತಿ ಸೋರಿಕೆಯಾಗುತ್ತವೇ ಎಂಬ ಶಂಕೆಯನ್ನು ಸಹಜವಾಗಿ ಇದು ಉಂಟು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.