ADVERTISEMENT

ಮಾರಾಟ ದಿನವೇ ವೆಬ್‌ಸೈಟ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 19:30 IST
Last Updated 10 ಜುಲೈ 2012, 19:30 IST

ಬೆಂಗಳೂರು:  ಕೃಷಿ ಉತ್ಪನ್ನಗಳು ಮಾರಾಟವಾದ ದಿನವೇ ಅದರ ಮಾಹಿತಿಯನ್ನು ವೆಬ್‌ಸೈಟ್‌ಗೆ ಅಳವಡಿಸುವಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಿಬ್ಬಂದಿಗೆ ಕೃಷಿ ಮಾರಾಟ ಮಂಡಳಿಯ ವ್ಯವಸ್ಥಾಪಕ ಸಿ.ಸೋಮಶೇಖರ್ ಸೂಚಿಸಿದರು.

ಅಗ್‌ಮಾರ್ಕ್ ನೆಟ್ ಮತ್ತು ಕೃಷಿ ಮಾರಾಟ ವಾಹಿನಿ ವೆಬ್‌ಸೈಟ್ ಕುರಿತು ಮಾಹಿತಿ ನೀಡಲು ಮಂಗಳವಾರ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

`ಕೃಷಿ ಉತ್ಪನ್ನಗಳಿಗೆ ಪ್ರೋತ್ಸಾಹ ಬೆಲೆ ಸಿಗಬೇಕು. ಆದ್ದರಿಂದ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ರೈತರಿಗೆ ತಲುಪಿಸುವ ಅಗತ್ಯವಿದೆ. ಆ ಮಾಹಿತಿಯನ್ನು ಈಗಾಗಲೇ ಕೃಷಿ ಮಾರಾಟ ವಾಹಿನಿ ಮತ್ತು ಅಗ್‌ಮಾರ್ಕ್ ನೆಟ್ ವೆಬ್‌ಸೈಟ್ ಮೂಲಕ ನೀಡಲಾಗುತ್ತಿದೆ~ ಎಂದು ಅವರು ತಿಳಿಸಿದರು.

ಮಾರುಕಟ್ಟೆ ಧಾರಣೆ ಏರಿಳಿತಗಳನ್ನು ನಿರಂತರವಾಗಿ ವೆಬ್‌ಸೈಟ್‌ಗೆ ಅಳವಡಿಸುವಂತೆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ 154 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಸಿಬ್ಬಂದಿಗೆ ಇದೇ ಸಂದರ್ಭದಲ್ಲಿ ಅವರು ಸೂಚಿಸಿದರು.

ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‌ಐಸಿ) ನಗರ ಕಚೇರಿ ನಿರ್ದೇಶಕ ವೆಂಕಟೇಶನ್, ಸಂಸ್ಥೆಯ ಹೆಚ್ಚುವರಿ ನಿರ್ದೇಶಕ ಆರ್.ಎನ್.ಚಾಮರಾಜು ಮತ್ತಿತರರು ಕಾರ್ಯಕ್ರಮದಲ್ಲಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.