ADVERTISEMENT

ಮಾರುಕಟ್ಟೆಯಲ್ಲಿ `ಸಿರಿಯಾ' ಬಿಕ್ಕಟ್ಟು

ಸೂಚ್ಯಂಕ 651 ಅಂಶ ಕುಸಿತ; ರೂಪಾಯಿ 163 ಪೈಸೆ ಹಾನಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 19:59 IST
Last Updated 3 ಸೆಪ್ಟೆಂಬರ್ 2013, 19:59 IST

ಮುಂಬೈ (ಪಿಟಿಐ): ದೇಶದ ಹಣಕಾಸು ಮಾರುಕಟ್ಟೆಯಲ್ಲಿ ಮತ್ತೆ ಅಸ್ಥಿರತೆ ಕಾಣಿಸಿಕೊಂಡಿದೆ. ಸಿರಿಯಾ ಬಿಕ್ಕಟ್ಟಿಗೆ ಸಂಬಂಧಿಸಿದ ಬೆಳವಣಿಗೆಗಳು ಕರೆನ್ಸಿ ವಿನಿಮಯ ಮಾರುಕಟ್ಟೆ ಮತ್ತು ಷೇರುಪೇಟೆ ಮೇಲೆ ನಕಾರಾತ್ಮಕ ಪ್ರಭಾವ ಬೀರಿವೆ.

ಇದರಿಂದ ಕಳೆದ ನಾಲ್ಕು ವಹಿವಾಟು ಅವಧಿಗಳಲ್ಲಿ ಒಟ್ಟಾರೆ 918 ಅಂಶಗಳಷ್ಟು ಏರಿಕೆ ಕಂಡಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಮಂಗಳವಾರ 651 ಅಂಶಗಳಷ್ಟು ಭಾರಿ ಕುಸಿತ ಕಂಡಿದೆ. ಡಾಲರ್ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ ಮತ್ತೆ 163 ಪೈಸೆಗಳಷ್ಟು ಕುಸಿದಿದ್ದು ರೂ67.63ಕ್ಕೆ ಇಳಿದಿದೆ.

ಗರಿಷ್ಠ ಹಾನಿ
ಆಗಸ್ಟ್ 16ರಂದು ಸೂಚ್ಯಂಕ ಒಂದೇ ದಿನದಲ್ಲಿ 769 ಅಂಶಗಳಷ್ಟು ಕುಸಿತ ಕಂಡಿತ್ತು. ನಂತರ ದಾಖಲಾಗಿರುವ ಗರಿಷ್ಠ ಹಾನಿ ಇದಾಗಿದೆ. ಇದರಿಂದ ಹೂಡಿಕೆದಾರರ  ಸಂಪತ್ತು ರೂ1 ಲಕ್ಷ ಕೋಟಿಯಷ್ಟು ಕರಗಿದೆ. ಡಾಲರ್ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ ವಹಿವಾಟಿನ ಒಂದು ಹಂತದಲ್ಲಿ ರೂ68.27ರವರೆಗೂ  ಕುಸಿದು ಆತಂಕ ಸೃಷ್ಟಿಸಿತ್ತು. ಆದರೆ ನಂತರ ಶೇ 2.47ರಷ್ಟು ಚೇತರಿಕೆ ಕಂಡಿತು.

ಸಿರಿಯಾ ಬಿಕ್ಕಟ್ಟು ಕಾರಣ
ಸಿರಿಯಾ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ರಷ್ಯಾ ಮಾಧ್ಯಮಗಳು ಬಿತ್ತರಿಸಿದ ಸುದ್ದಿ ಜಾಗತಿಕ ಷೇರುಪೇಟೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿವೆ. ಇದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇನ್ನಷ್ಟು ಹೆಚ್ಚಬಹುದು ಎಂಬ ಆತಂಕ ತಲೆದೋರಿದೆ.

ಇದರ ಜತೆಗೆ ಜಾಗತಿಕ ರೇಟಿಂಗ್  ಸಂಸ್ಥೆ `ಎಸ್‌ಅಂಡ್‌ಪಿ' ಭಾರತದ ಕ್ರೆಡಿಟ್  ರೇಟಿಂಗ್ ತಗ್ಗಿಸುವುದಾಗಿ ಹೇಳಿದೆ. ಗೋಲ್ಡ್‌ಮನ್ ಸ್ಯಾಚೆ, ಜೆಪಿ ಮೋರ್ಗನ್, ಎಚ್‌ಎಸ್‌ಬಿಸಿ ಮತ್ತು ನೊಮುರಾ ಸಂಸ್ಥೆಗಳು ದೇಶದ `ಜಿಡಿಪಿ' ಮುನ್ನೋಟ ತಗ್ಗಿಸಿದ್ದು ಮುಂದಿನ 6 ತಿಂಗಳಲ್ಲಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ರೂ72ರವರೆಗೆ ಕುಸಿಯುವುದಾಗಿ ಅಂದಾಜು ಮಾಡಿವೆ.  ಇದರಿಂದ ತೀವ್ರ ಒತ್ತಡಕ್ಕೆ ಸಿಲುಕಿದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮುಂಬೈ ಷೇರುಪೇಟೆಯಿಂದ ಬೃಹತ್ ಪ್ರಮಾಣದಲ್ಲಿ ಬಂಡವಾಳ ವಾಪಸ್ ಪಡೆದರು.

ದಿನದ ಆರಂಭದಲ್ಲಿ 19 ಸಾವಿರ ಅಂಶಗಳಿಗೆ ವಹಿವಾಟು ಆರಂಭಿಸಿದ ಸೂಚ್ಯಂಕ ದಿನದ ಅಂತ್ಯಕ್ಕೆ ಶೇ 3.45ರಷ್ಟು ಕುಸಿತ ಕಂಡು 18,234 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ `ಜಿಡಿಪಿ' ಶೇ 4.4ಕ್ಕೆ ಕುಸಿತ ಕಂಡಿರುವುದು ಮತ್ತು ಜುಲೈನಲ್ಲಿ ಮೂಲಸೌಕರ್ಯ ವಲಯದ 8 ಉದ್ಯಮಗಳ ಪ್ರಗತಿ ಶೇ 3.1ಕ್ಕೆ ಇಳಿಕೆ ಕಂಡಿರುವುದು ಸಹ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ.

ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ' ದಿನದ ವಹಿವಾಟಿನಲ್ಲಿ 209 ಅಂಶಗಳಷ್ಟು (ಶೆ 3.77) ಕುಸಿತ ಕಂಡು   5,341 ಅಂಶಗಳಿಗೆ ಜಾರಿತು. ರಿಲಯನ್ಸ್ ಇಂಡಸ್ಟ್ರೀಸ್ ಶೇ 6.07ರಷ್ಟು ಮತ್ತು `ಐಟಿಸಿ' ಷೇರು ಮೌಲ್ಯ ಶೇ 5.37ರಷ್ಟು ಹಾನಿ ಅನುಭವಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.