ADVERTISEMENT

ಮಾರುತಿ: ಮಾನೇಸರ್ ಘಟಕ ಇಂದಿನಿಂದ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 19:30 IST
Last Updated 20 ಆಗಸ್ಟ್ 2012, 19:30 IST

ನವದೆಹಲಿ (ಪಿಟಿಐ): ಕಾರ್ಮಿಕ ಗಲಭೆ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವಾರಗಳಿಂದ ಬೀಗ ಮುದ್ರೆಗೆ ಒಳಗಾಗಿದ್ದ ಮಾರುತಿ ಸುಜುಕಿ ಕಂಪೆನಿಯ ಮಾನೇಸರ್ ತಯಾರಿಕಾ ಘಟಕ ಮಂಗಳವಾರದಿಂದ (ಆಗಸ್ಟ್ 21) ಪುನರಾರಂಭವಾಗಲಿದೆ.

ಸೋಮವಾರ ರಂಜಾನ್ ರಜೆ ಇದ್ದಿದ್ದರಿಂದ ಮಂಗಳವಾರದಿಂದ ಘಟಕ ಪ್ರಾರಂಭಿಸುತ್ತಿದ್ದೇವೆ. ಭವಿಷ್ಯದ  ದಿನಗಳಲ್ಲಿ ಇಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಮತ್ತು ಖಾಸಗಿ ಭದ್ರತಾ ಸಿಬ್ಬಂದಿ ರಕ್ಷಣೆಯಲ್ಲಿ ಘಟಕ ಕಾರ್ಯಾರಂಭ ಮಾಡಲಿದೆ ಎಂದು  ಕಂಪೆನಿ ಹೇಳಿದೆ.

ಒಟ್ಟು ಕಾರ್ಮಿಕರಲ್ಲಿ ಶೇ 10ರಷ್ಟು ಜನರನ್ನು ಮಾತ್ರ (300 ಕಾರ್ಮಿಕರು) ಬಳಸಿಕೊಂಡು ಒಂದೇ ಪಾಳಿಯಲ್ಲಿ ತಯಾರಿಕೆ ಪ್ರಕ್ರಿಯೆ ನಡೆಸಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಮಾರುತಿ ಸುಜುಕಿ ಇಂಡಿಯಾದ (ಎಂಎಸ್‌ಐ) ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ವೈ ಸಿದ್ಧಿಖಿ ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮಾನೇಸರ್ ತಯಾರಿಕಾ ಘಟಕದಲ್ಲಿ ಪ್ರತಿ ದಿನ 1,500ರಿಂದ 1,700 ಕಾರುಗಳು ತಯಾರಾಗುತ್ತಿದ್ದವು. ಈಗ ಕಾರ್ಮಿಕರ ಸಂಖ್ಯೆ ಕಡಿತಗೊಳಿಸಿರುವುದರಿಂದ ಕಾರುಗಳ ಸಂಖ್ಯೆ 150ಕ್ಕೆ ತಗ್ಗಲಿದೆ ಎಂದು ಮೂಲಗಳು ತಿಳಿಸಿವೆ. ಈ ಘಟಕದಲ್ಲಿ ಒಟ್ಟು 3,300 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು.  ಇವರಲ್ಲಿ 1,528 ಜನರು ಖಾಯಂ ನೌಕರರು. ಗಲಭೆ ನಂತರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡ 500 ಉದ್ಯೋಗಿಗಳನ್ನು ಕೈಬಿಡಲು ಕಂಪೆನಿ ಚಿಂತನೆ ನಡೆಸಿದೆ.

ಕಾರ್ಮಿಕ ಅಶಾಂತಿಯಿಂದ ಜುಲೈ 18ರಂದು ನಡೆದ ಗಲಭೆಯಲ್ಲಿ ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಯೊಬ್ಬರು ಹತ್ಯೆಯಾಗಿ 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.  ಜುಲೈ 21ರಿಂದ ಘಟಕಕ್ಕೆ ಬೀಗ ಮುದ್ರೆ ಹಾಕಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.