ADVERTISEMENT

ಮುದ್ರಾ: ₹ 6 ಲಕ್ಷ ಕೋಟಿ ವಿತರಣೆ: ಪ್ರಧಾನಿ ನರೇಂದ್ರ ಮೋದಿ

ಪಿಟಿಐ
Published 29 ಮೇ 2018, 19:30 IST
Last Updated 29 ಮೇ 2018, 19:30 IST
ಮುದ್ರಾ: ₹ 6 ಲಕ್ಷ ಕೋಟಿ ವಿತರಣೆ:  ಪ್ರಧಾನಿ ನರೇಂದ್ರ ಮೋದಿ
ಮುದ್ರಾ: ₹ 6 ಲಕ್ಷ ಕೋಟಿ ವಿತರಣೆ: ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ‘ಮುದ್ರಾ ಯೋಜನೆಯಡಿ ಇದುವರೆಗೆ 12 ಕೋಟಿ ಫಲಾನುಭವಿಗಳಿಗೆ ₹ 6 ಲಕ್ಷ ಕೋಟಿಗಳಷ್ಟು ಸಾಲ ವಿತರಿಸಲಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

‘ಈ ಹಿಂದಿನ ಸರ್ಕಾರಗಳು ಹಮ್ಮಿಕೊಳ್ಳುತ್ತಿದ್ದ ಸಾಲಮೇಳಕ್ಕಿಂತ ಮುದ್ರಾ ಯೋಜನೆಯು ಸಂಪೂರ್ಣ ಭಿನ್ನವಾಗಿದೆ. ಸಣ್ಣ ಪ್ರಮಾಣದಲ್ಲಿ ಉದ್ಯಮ ಆರಂಭಿಸುವ ಮೂಲಕ ಉದ್ಯಮಶೀಲರ ಕನಸುಗಳನ್ನು ನನಸಾಗಿಸಲು ಮತ್ತು ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಇದು ಗಮನಾರ್ಹ ಕೊಡುಗೆ ನೀಡಿದೆ’ ಎಂದು ಹೇಳಿದ್ದಾರೆ.

‘ಮುದ್ರಾ’ ಫಲಾನುಭವಿಗಳ ಜತೆಗಿನ ವಿಡಿಯೊ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ‘ಆಡಂಬರದ ಪ್ರಚಾರದಿಂದ ಹಮ್ಮಿಕೊಳ್ಳಲಾಗುತ್ತಿದ್ದ ಸಾಲ ಮೇಳಗಳಲ್ಲಿ ಆಯ್ದ ಜನರಿಗೆ ಮಾತ್ರ ಸಾಲ ವಿತರಿಸಲಾಗುತ್ತಿತ್ತು. ಸಾಲ ಮರುಪಾವತಿ ಬಗ್ಗೆ ಯಾರೊಬ್ಬರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ರಾಜಕೀಯ ಲಾಭಕ್ಕಾಗಿಯೇ ಇಂತಹ ಮೇಳಗಳನ್ನು ಆಯೋಜಿಸಲಾಗುತ್ತಿತ್ತು. ಎನ್‌ಡಿಎ ಸರ್ಕಾರಕ್ಕೆ ಇಂತಹ ಮೇಳಗಳಲ್ಲಿ ಆಸಕ್ತಿ ಇಲ್ಲ. ಮಧ್ಯವರ್ತಿಗಳಿಗೆ ಅವಕಾಶವನ್ನೂ ಮಾಡಿಕೊಟ್ಟಿಲ್ಲ. ಯುವಕರು ಮತ್ತು ಮಹಿಳೆಯರು ಬ್ಯಾಂಕ್‌ಗಳಿಂದ ನೇರವಾಗಿ ಸಾಲ ಪಡೆದು ತಮ್ಮ ಸ್ವಂತ ಉದ್ದಿಮೆ ಆರಂಭಿಸಲು ಮುದ್ರಾ ಯೋಜನೆ ನೆರವಾಗುತ್ತಿದೆ.

ADVERTISEMENT

‘ಸಣ್ಣ ಉದ್ದಿಮೆದಾರರಲ್ಲಿ ಮತ್ತು ಮೊದಲ ಬಾರಿಗೆ ಉದ್ದಿಮೆ ಆರಂಭಿಸುವವರ ವ್ಯವಹಾರ ಜಾಣ್ಮೆಯಲ್ಲಿ ನಾವು ವಿಶ್ವಾಸ ಇರಿಸಿದ್ದೇವೆ. ಸ್ವಯಂ ಉದ್ಯೋಗ ಆರಂಭಿಸಲು ಇದು ಸ್ಪೂರ್ತಿ ನೀಡುತ್ತಿದೆ. ಇದರಿಂದ ಉದ್ಯೋಗ ಅವಕಾಶಗಳು ದ್ವಿಗುಣಗೊಳ್ಳಲಿವೆ.

‘ಈ ಹಿಂದೆ ಪ್ರಭಾವಿಗಳ ಶಿಫಾರಸಿನ ಮೇಲೆ ಶ್ರೀಮಂತರಿಗೆ ಮಾತ್ರ ಬ್ಯಾಂಕ್‌ ಸಾಲ ಮಂಜೂರು ಮಾಡಲಾಗುತ್ತಿತ್ತು. ಬಡವರು ಈ ಬ್ಯಾಂಕಿಂಗ್ ಸೌಲಭ್ಯದಿಂದ ವಂಚಿತರಾಗಿದ್ದರು. ಹೀಗಾಗಿ ಅವರು ಅನಿವಾರ್ಯವಾಗಿ ಲೇವಾದೇವಿಗಾರರ ಬಳಿ ಶೇ 40ರಷ್ಟು ದುಬಾರಿ ಬಡ್ಡಿಗೆ ಸಾಲಕ್ಕಾಗಿ ಕೈಚಾಚುತ್ತಿದ್ದರು. ಮುದ್ರಾ ಯೋಜನೆಯು  ನವೋದ್ಯಮಿಗಳನ್ನು ಲೇವಾದೇವಿಗಾರರ ಕಪಿಮುಷ್ಟಿಯಿಂದ ಪಾರು ಮಾಡಿದೆ.

‘ಬಡತನ ನಿರ್ಮೂಲನೆ ಬಗ್ಗೆ ಬರೀ ಘೋಷಣೆಗಳನ್ನು ಕೂಗಲಾಗುತ್ತಿತ್ತು. ಆದರೆ, ವಾಸ್ತವದಲ್ಲಿ ಯಾವುದೂ ಬದಲಾಗುತ್ತಿರಲಿಲ್ಲ. ಇದರಿಂದ ಲಕ್ಷಾಂತರ ಜನರು ಸರ್ಕಾರದಲ್ಲಿ ಇಟ್ಟಿದ್ದ ವಿಶ್ವಾಸಕ್ಕೆ ಧಕ್ಕೆಯಾಗಿತ್ತು. ಮುದ್ರಾ ಯೋಜನೆಯು ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಜನರ ವಿಶ್ವಾಸವನ್ನು ಮರು ಸ್ಥಾಪಿಸಿದೆ’ ಎಂದು ಮೋದಿ ಹೇಳಿದ್ದಾರೆ.

ಮೂರು ವರ್ಷಗಳಲ್ಲಿ ₹ 5.73 ಲಕ್ಷ ಕೋಟಿಗಳಷ್ಟು ಸಾಲದ ನೆರವು ನೀಡಲಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ₹ 2.53 ಲಕ್ಷ ಕೋಟಿಗಳಷ್ಟು ಸಾಲ ಮಂಜೂರು ಮಾಡಲಾಗಿದೆ.

₹10 ಲಕ್ಷ ಸಾಲ

ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು (ಪಿಎಂಎಂವೈ) 2015ರ ಏಪ್ರಿಲ್‌ 8ರಂದು ಜಾರಿಗೆ ತರಲಾಗಿತ್ತು. ಕಿರು ಮತ್ತು ಸಣ್ಣ ಕೈಗಾರಿಕಾ ಘಟಕಗಳಿಗೆ ಗರಿಷ್ಠ ₹ 10 ಲಕ್ಷದವರೆಗೆ ಸಾಲ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಸಣ್ಣ ಉದ್ದಿಮೆಗಳನ್ನು ಆರಂಭಿಸಲು ಇಲ್ಲವೇ ವಹಿವಾಟಿನ ವಿಸ್ತರಣೆಗೆ ಯಾವುದೇ ಜಾಮೀನು ಇಲ್ಲದೇ ಸಾಲ ನೀಡಲಾಗುತ್ತಿದೆ.

* ಮುದ್ರಾ ಯೋಜನೆಯಡಿ ಸಾಲ ಪಡೆಯಲು ಯಾವುದೇ ಬಗೆಯ ತಾರತಮ್ಯಕ್ಕೆ ಅವಕಾಶವೇ ಇಲ್ಲ

-ನರೇಂದ್ರ ಮೋದಿ, ಪ್ರಧಾನಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.