ADVERTISEMENT

ಮೂಲಸೌಕರ್ಯ ವಲಯ ಪ್ರಗತಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 19:30 IST
Last Updated 3 ಡಿಸೆಂಬರ್ 2012, 19:30 IST

ನವದೆಹಲಿ (ಪಿಟಿಐ): ಪೆಟ್ರೋಲಿಯಂ, ಕಲ್ಲಿದ್ದಲು ಸೇರಿದಂತೆ ದೇಶದ ಎಂಟು ಮೂಲಸೌಕರ್ಯ ವಲಯಗಳು ಅಕ್ಟೋಬರ್ ತಿಂಗಳಲ್ಲಿ ಕಳೆದ 8 ತಿಂಗಳಲ್ಲೇ ಗರಿಷ್ಠ ಮಟ್ಟವಾದ ಶೇ 6.5ರಷ್ಟು ಪ್ರಗತಿ ದಾಖಲಿಸಿವೆ.

ಒಟ್ಟಾರೆ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಪ್ರಸಕ್ತ ಹಣಕಾಸು ವರ್ಷದ ಎರಡನೆಯ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ಶೇ 5.3ಕ್ಕೆ ಕುಸಿತ ಕಂಡಿದೆ. ಈ ಅವಧಿಯಲ್ಲೇ ಮೂಲಸೌಕರ್ಯ ವಲಯಗಳು ಚೇತರಿಸಿಕೊಂಡಿರುವುದು ಗಮನಾರ್ಹ.  2012ರ ಫೆಬ್ರುವರಿ ನಂತರ ದಾಖಲಾಗಿರುವ ಗರಿಷ್ಠ ಮಟ್ಟದ ಪ್ರಗತಿ ಕೂಡ ಇದಾಗಿದೆ.

ಕಳೆದ ವರ್ಷದ  ಇದೇ ಅವಧಿಯಲ್ಲಿ ಮೂಲಸೌಕರ್ಯ ವಲಯ ಶೇ 0.4ರಷ್ಟು ಪ್ರಗತಿ ದಾಖಲಿಸಿತ್ತು. ಪ್ರಸಕ್ತ ಅವಧಿಯಲ್ಲಿ ತೈಲ ಶುದ್ಧೀಕರಣ ಮತ್ತು ಕಲ್ಲಿದ್ದಲು ಉತ್ಪಾದನೆ ಎರಡು ಪಟ್ಟು ಹೆಚ್ಚಿದ್ದು, ಕ್ರಮವಾಗಿ ಶೇ 20.3 ಮತ್ತು ಶೇ 10.9ರಷ್ಟು ಚೇತರಿಕೆ ಕಂಡಿವೆ. ಉಕ್ಕು ತಯಾರಿಕೆ ಶೇ 5.9ರಷ್ಟು ಹೆಚ್ಚಿದೆ. ರಸಗೊಬ್ಬರ, ಸಿಮೆಂಟ್ ವಲಯಗಳು ಶೇ 2 ಮತ್ತು ಶೇ 6.8ರಷ್ಟು ಪ್ರಗತಿ ದಾಖಲಿಸಿವೆ.  ವಿದ್ಯುತ್ ಉತ್ಪಾದನೆ ಶೇ 5.2ರಷ್ಟು  ಕುಸಿತ ಕಂಡಿದೆ. ಪ್ರಸಕ್ತ ಏಪ್ರಿಲ್- ಅಕ್ಟೋಬರ್ ಅವಧಿಯಲ್ಲಿ ಒಟ್ಟಾರೆ ಮೂಲಸೌಕರ್ಯ ವಲಯಗಳು  ಶೇ 3.7ರಷ್ಟು ಪ್ರಗತಿ ಕಂಡಿವೆ.

ಕಾಫಿ ರಫ್ತು ಕುಸಿತ
ನವದೆಹಲಿ (ಪಿಟಿಐ):ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದ ಪರಿಣಾಮ ದೇಶದ ಕಾಫಿ ರಫ್ತು ವಹಿವಾಟು ನವೆಂಬರ್‌ನಲ್ಲಿ ಶೇ 8ರಷ್ಟು ಕುಸಿತ ಕಂಡಿದ್ದು 2.97 ಲಕ್ಷ ಟನ್‌ಗಳಿಗೆ ಇಳಿದಿದೆ ಎಂದು ಕಾಫಿ ಮಂಡಳಿ ಹೇಳಿದೆ.

ADVERTISEMENT

ಕಳೆದ ವರ್ಷದ ಇದೇ ಅವಧಿಯಲ್ಲಿ 3.23 ಲಕ್ಷ ಟನ್‌ಗಳಷ್ಟು ಕಾಫಿ ರಫ್ತು ಮಾಡಲಾಗಿತ್ತು. ಈ ಬಾರಿ ಕಾಫಿ ಧಾರಣೆ ಕುಸಿದಿದೆ, ಜತೆಗೆ  ಪೂರೈಕೆಯೂ ಹೆಚ್ಚಿದೆ. ಇದು ರಫ್ತು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಕಾಫಿ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಸಕ್ತ ವರ್ಷದ ಜನವರಿ-ನವೆಂಬರ್ ಅವಧಿಯಲ್ಲಿ ಒಟ್ಟು 2.97 ಲಕ್ಷ ಟನ್ ಕಾಫಿ ರಫ್ತು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.