ADVERTISEMENT

ಮೂಲಸೌಕರ್ಯ: ಶೇ 6.8ರಷ್ಟು ವೃದ್ಧಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2011, 19:00 IST
Last Updated 29 ಮಾರ್ಚ್ 2011, 19:00 IST
ಮೂಲಸೌಕರ್ಯ: ಶೇ 6.8ರಷ್ಟು ವೃದ್ಧಿ
ಮೂಲಸೌಕರ್ಯ: ಶೇ 6.8ರಷ್ಟು ವೃದ್ಧಿ   

ನವದೆಹಲಿ (ಪಿಟಿಐ): ಆರು ಮೂಲ ಸೌಕರ್ಯ ವಲಯಗಳ ಉತ್ಪಾದನೆಯು ಫೆಬ್ರುವರಿ ತಿಂಗಳಲ್ಲಿ ಆರೋಗ್ಯಕರ ಎನ್ನಬಹುದಾದ ಶೇ 6.8ರಷ್ಟು ಬೆಳವಣಿಗೆ ದಾಖಲಿಸಿದೆ.
ಕಚ್ಚಾ ತೈಲ, ಪೆಟ್ರೋಲಿಯಂ ಶುದ್ಧೀಕೃತ ಉತ್ಪನ್ನಗಳು ಮತ್ತು ಉಕ್ಕು ಉತ್ಪನ್ನಗಳ ವಲಯದಲ್ಲಿನ ಉತ್ಪಾದನೆ ಹೆಚ್ಚಳವು ಈ ಏರಿಕೆಗೆ ಕಾರಣವಾಗಿದೆ.

2010ರ ಇದೇ ಅವಧಿಯಲ್ಲಿ ಕಚ್ಚಾ ತೈಲ, ಪೆಟ್ರೋಲಿಯಂ ಶುದ್ಧೀಕೃತ ಉತ್ಪನ್ನ, ಕಲ್ಲಿದ್ದಲು, ವಿದ್ಯುತ್, ಸಿಮೆಂಟ್ ಮತ್ತು ಉಕ್ಕು ಉತ್ಪನ್ನಗಳ ಬೆಳವಣಿಗೆಯು ಶೇ 4.2ರಷ್ಟಿತ್ತು. ಈ ವರ್ಷದ ಜನವರಿ ತಿಂಗಳಲ್ಲಿ ಈ ವೃದ್ಧಿ ದರವು ಶೇ 7.1ರಷ್ಟಿತ್ತು. ದೇಶದ ಒಟ್ಟಾರೆ ಕೈಗಾರಿಕಾ ಉತ್ಪನ್ನದಲ್ಲಿ ಈ  ಆರು ಪ್ರಮುಖ ವಲಯಗಳ ಪಾಲು ಶೇ 26.68ರಷ್ಟಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಪೆಟ್ರೋಲ್ ಶುದ್ಧೀಕರಣ ಮತ್ತು ಕಚ್ಚಾ ತೈಲ ಉತ್ಪಾದನೆಯು ಕ್ರಮವಾಗಿ ಶೇ 3.2 ಮತ್ತು ಶೇ 12.2ರಷ್ಟಿತ್ತು. 2010ರಲ್ಲಿ ಈ ಬೆಳವಣಿಗೆ ದರವು ಕ್ರಮವಾಗಿ ಶೇ 0.7 ಮತ್ತು ಶೇ 4ರಷ್ಟಿತ್ತು ಎಂದು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶಗಳು ತಿಳಿಸಿವೆ.ವಿದ್ಯುತ್ ಉತ್ಪಾದನೆಯು ಶೇ 7.2ರಷ್ಟು  ಏರಿಕೆ ದಾಖಲಿಸಿದೆ. ಉಕ್ಕು ಉತ್ಪನ್ನಗಳ ಉತ್ಪಾದನೆಯು ಕಳೆದ ವರ್ಷದ ಶೇ 0.2ರಷ್ಟು ಕುಸಿತದ ಬದಲಿಗೆ ಶೇ 11.5ರಷ್ಟು ಏರಿಕೆ ಕಂಡಿದೆ. ಆದರೆ, ಕಲ್ಲಿದ್ದಲು ಉತ್ಪಾದನೆಯು ವರ್ಷದ ಹಿಂದಿನ ಶೇ 6.7ರಷ್ಟು ವೃದ್ಧಿ ಬದಲಿಗೆ ಈಗ ಶೇ 5.7ರಷ್ಟು ಕಡಿಮೆಯಾಗಿದೆ. ಸಿಮೆಂಟ್ ಉತ್ಪಾದನೆಯಲ್ಲಿನ ಬೆಳವಣಿಗೆಯೂ ಶೇ 7.9ರ ಬದಲಿಗೆ ಶೇ 6.5ರಷ್ಟು ಕಡಿಮೆಯಾಗಿದೆ.

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ನಿಂದ ಫೆಬ್ರುವರಿ ತಿಂಗಳ ಅವಧಿಯಲ್ಲಿ ಆರು ಪ್ರಮುಖ ವಲಯಗಳ ಬೆಳವಣಿಗೆಯು ಕಳೆದ ವರ್ಷದ ಇದೇ ಅವಧಿಯಲ್ಲಿನ ಶೇ 5.4ರಷ್ಟು ವೃದ್ಧಿ ಬದಲಿಗೆ ಶೇ 5.7ರಷ್ಟು ಮಾತ್ರ ಏರಿಕೆ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.